ನವದೆಹಲಿ: ವಿಶ್ವಸಂಸ್ಥೆ ಸಂಕಲ್ಪ ತಳೆದರೆ ವಿಶ್ವಸಂಸ್ಥೆಯ ಬಾವುಟದಡಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ವಿರುದ್ಧ ಹೋರಾಡಲು ಸಿದ್ಧ ಎಂದು ಭಾರತ ತಿಳಿಸಿದೆ.
ಅಮೆರಿಕಾದ ರಕ್ಷಣಾ ಸಚಿವ ಆಶ್ಟನ್ ಕಾರ್ಟರ್ ಅವರ ಜೊತೆಗಿನ ವಾಶಿಂಗ್ಟನ್ ಭೇಟಿ ಮುಗಿಸಿ ಹಿಂದಿರುಗಿದ ಭಾರತದ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ “ಐಸಿಸ್ ವಿರುದ್ಧ ವಿಶ್ವ ಸಂಸ್ಥೆಯ ಸಂಕಲ್ಪ, ವಿಶ್ವ ಸಂಸ್ಥೆಯ ಬಾವುಟ, ವಿಶ್ವ ಸಂಸ್ಥೆಯ ಗುರಿ ಇದ್ದರೆ ಇದರ ಭಾಗವಾಗಲು ಭಾರತ ಸಿದ್ದ ಎಂದು ನಾವು ಸ್ಪಷ್ಟೀಕರಿಸಿದ್ದೇವೆ” ಎಂದು ವಿಜಯ್ ದಿವಸ್ ಆಚರಣೆಯ ವೇಳೆಯಲ್ಲಿ ಇಂಡಿಯಾ ಗೇಟ್ ಬಳಿ ಪತ್ರಕರ್ತರಿಗೆ ತಿಳಿಸಿದ್ದಾರೆ.
ಭಾರತೀಯ ಭದ್ರತಾ ವರದಿಗಳ ಪ್ರಕಾರ ಸುಮಾರು ೨೦ ಭಾರತೀಯ ಯುವಕರು ಸಿರಿಯಾ ಮತ್ತು ಇರಾಕ್ ನಲ್ಲಿ ಐಸಿಸ್ ಸೇರಿದ್ದಾರೆ ಎಂದು ತಿಳಿಯಲಾಗಿದೆ. ಅಲ್ಲದೆ ಹಲವಾರು ಯುವಕರು ಐಸಿಸ್ ಸೇರದಂತೆ ತಡೆಯಲು ಭಾರತೀತ ಭದ್ರತಾ ವ್ಯವಸ್ಥೆ ಯಶಸ್ವಿಯಾಗಿದೆ. ಇಲ್ಲಿಯವರೆಗೂ ಸುಮಾರ್ ೧೭ ಯುವಕರನ್ನು, ಬಹುತೇಕರು ತೆಲಂಗಾಣದವರು, ಸಿರಿಯಾಗೆ ಹೋಗಿ ಇಸ್ಲಾಮಿಕ್ ಸ್ಟೇಟ್ ಸೇರುವ ಯೋಜನೆಯನ್ನು ವಿಫಲಗೊಳಿಸಲಾಗಿದೆ.