ಕರ್ನಾಟಕ

ಪ್ರತಿಷ್ಠಿತ ಆಸ್ಕರ್‌ ಕಣದಲ್ಲಿ ‘ರಂಗಿತರಂಗ’, ‘ಕೇರ್‌ ಆಫ್ ಫುಟ್‌ಪಾತ್‌ 2’; ‘ರಂಗಿತರಂಗ’ ಚಿತ್ರದ ನಿರ್ದೇಶಕ ಅನೂಪ್‌ ಭಂಡಾರಿ ಏನು ಹೇಳಿದ್ರು…?

Pinterest LinkedIn Tumblr

anup-bhadhary

ನವದೆಹಲಿ: ಕನ್ನಡ ಸಿನಿಮಾಗಳಾದ ‘ರಂಗಿತರಂಗ’ ಮತ್ತು ‘ಕೇರ್‌ ಆಫ್‌ ಫುಟ್‌ಪಾತ್‌ 2’ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಕಣದಲ್ಲಿರುವ ಒಟ್ಟು 305 ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನಪಡೆದಿವೆ.

ಅಮೆರಿಕ, ಆಸ್ಟ್ರೇಲಿಯಾ ಮತ್ತಿತರ ದೇಶಗಳಲ್ಲಿಯೂ ತೆರೆಕಂಡು 25 ವಾರಗಳ ಪ್ರದರ್ಶನ ಪೂರೈಸಿರುವ ಅನೂಪ್ ಭಂಡಾರಿ ನಿರ್ದೇಶನದ ಥ್ರಿಲ್ಲರ್‌ ಚಿತ್ರ ‘ರಂಗಿತರಂಗ’ ಮತ್ತು ಕೊಳೆಗೇರಿ ಸುತ್ತಮುತ್ತಲಿನ ಅಪರಾಧ ಜಗತ್ತನ್ನು ಚಿತ್ರಿಸಿರುವ ಕಿಶನ್‌ ಶ್ರೀಕಾಂತ್‌ ನಿರ್ದೇಶನದ ‘ಕೇರ್‌ ಆಫ್‌ ಫುಟ್‌ಪಾತ್‌ 2’ ಚಿತ್ರಗಳು 88ನೇ ಆಸ್ಕರ್‌ ಪ್ರಶಸ್ತಿಗಾಗಿ ಇತರೆ ಸಿನಿಮಾಗಳೊಂದಿಗೆ ಪೈಪೋಟಿ ನಡೆಸಲಿವೆ. ಕನ್ನಡದ ಚಿತ್ರ ಆಸ್ಕರ್‌ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು.

ಕೊಂಕಣಿ ಚಿತ್ರ ‘ನಾಚೊಮ್‌–ಇಯಾ ಕುಂಪಸಾರ್‌’, ಮರಾಠಿಯ ‘ಕೋರ್ಟ್‌’, ಮಲಯಾಳದ ‘ಜಲಂ’, ಹಿಂದಿಯ ‘ಹೆಮಲ್ಕಸ’ ವಿದೇಶಿ ಸಿನಿಮಾಗಳೊಂದಿಗೆ ಸ್ಪರ್ಧಿಸಲಿರುವ ಭಾರತದ ಇತರ ಚಿತ್ರಗಳು. ಭಾರತದ ಕಲಾವಿದರು ನಟಿಸಿರುವ ಹಾಲಿವುಡ್‌ ಸಿನಿಮಾಗಳಾದ ‘ದಿ ಸೆಕೆಂಡ್‌ ಬೆಸ್ಟ್‌ ಎಕ್ಸೋಟಿಕ್‌ ಮೆರಿಗೋಲ್ಡ್‌ ಹೋಟೆಲ್‌’ ಮತ್ತು ‘ಜುರಾಸಿಕ್‌ ವರ್ಲ್ಡ್‌’ ಸಹ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

‘ಜಲಂ’ ಮತ್ತು ಭಾರತ–ಆಸ್ಟ್ರೇಲಿಯಾದ ‘ಸಾಲ್ಟ್‌ ಬ್ರಿಡ್ಜ್‌’ ಚಿತ್ರಗಳು ಉತ್ತಮ ಮೂಲ ಹಾಡುಗಳ ವಿಭಾಗದಲ್ಲಿ 74 ಹಾಡುಗಳೊಂದಿಗೆ ಸ್ಪರ್ಧಿಸಲಿವೆ. ಪ್ರಶಸ್ತಿಯ ಅಂತಿಮ ನಾಮನಿರ್ದೇಶನದ ಪಟ್ಟಿ 20016ರ ಜನವರಿ 14ರಂದು ಹೊರಬೀಳಲಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಫೆ. 28ರಂದು ಲಾಸ್‌ ಏಂಜಲಿಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.

ಆಸ್ಕರ್‌ಗೆ ನೇರ ಸ್ಪರ್ಧೆ ಹೇಗೆ?: ಲಾಸ್ ಏಂಜಲಿಸ್ ಕೌಂಟಿಯಲ್ಲಿ ನಿರಂತರವಾಗಿ ಏಳು ದಿನಗಳ ಕಾಲ ವಾಣಿಜ್ಯಾತ್ಮಕ ಪ್ರದರ್ಶನ ಕಂಡ 40 ನಿಮಿಷಕ್ಕಿಂತ ಹೆಚ್ಚು ಅವಧಿಯ ಯಾವುದೇ ಚಿತ್ರ ಆಸ್ಕರ್ ಪ್ರಶಸ್ತಿಯ ಸ್ಪರ್ಧಾ ಕಣಕ್ಕೆ ಇಳಿಯಲು ಅರ್ಹವಾಗುತ್ತದೆ.

ಆಸ್ಕರ್ ಪ್ರಶಸ್ತಿ ನಿಯಮಗಳು ಅಥವಾ ಅಕಾಡೆಮಿ ಅವಾರ್ಡ್ ಅರ್ಹತಾ ನಿಬಂಧನೆಗಳ ಎರಡು ಮತ್ತು ಮೂರನೇ ನಿಯಮದ ಪ್ರಕಾರ ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್ ಕೌಂಟಿಯ ಚಿತ್ರ ಮಂದಿರಗಳಲ್ಲಿ ಚಿತ್ರ ಕನಿಷ್ಠ ಏಳು ದಿನಗಳ ಕಾಲ ವಾಣಿಜ್ಯಾತ್ಮಕ ಪ್ರದರ್ಶನ ಕಂಡಿರಬೇಕು. ಪ್ರಶಸ್ತಿ ಘೋಷಣೆಯಾಗುವ ಹಿಂದಿನ ವರ್ಷದ ಜನವರಿ ಒಂದರಿಂದ ಡಿಸೆಂಬರ್ 31ರ ಒಳಗೆ ಚಿತ್ರವನ್ನು ಪ್ರದರ್ಶಿಸಿರಬೇಕು.

ಖುಷಿಯಾಗುತ್ತಿದೆ : ನಿರ್ದೇಶಕ ಅನೂಪ್‌ ಭಂಡಾರಿ
‘ಇದು ಯಾವುದೇ ಪ್ರಶಸ್ತಿಗಾಗಿ ಮಾಡಿದ ಸಿನಿಮಾವಲ್ಲ. ಕಮರ್ಷಿಯಲ್‌ ಅಂಶಗಳನ್ನಿಟ್ಟುಕೊಂಡು ಮನರಂಜನೆ ನೀಡುವ ಉದ್ದೇಶದಿಂದ ಮಾಡಿದ ಚಿತ್ರ. ಜಗತ್ತಿನ ದೊಡ್ಡ ಸಿನಿಮಾಗಳ ಮಧ್ಯೆ ಸ್ಥಾನ ಪಡೆಯಲಿದೆ ಎಂಬ ನಿರೀಕ್ಷೆ ಇರಲಿಲ್ಲ. ಹೀಗಾಗಿ ತುಂಬಾ ಖುಷಿಯಾಗುತ್ತಿದೆ’ ಎಂದು ‘ರಂಗಿತರಂಗ’ ಚಿತ್ರದ ನಿರ್ದೇಶಕ ಅನೂಪ್‌ ಭಂಡಾರಿ ಪ್ರತಿಕ್ರಿಯೆ ನೀಡಿದರು.

ಸಿನಿಮಾದ ಯಾವ ವಿಭಾಗವು ಪ್ರಶಸ್ತಿಗೆ ಅರ್ಹತೆ ಪಡೆದುಕೊಂಡಿದೆ ಎಂಬುದು ತಿಳಿದಿಲ್ಲ. ಸಿನಿಮಾದ ಯಶಸ್ಸಿನ ಕುರಿತ ಮಾತುಗಳು, ಸಂಸ್ಕೃತಿಯನ್ನು ಚಿತ್ರಿಸುವ ಪ್ರಯತ್ನ ಮತ್ತು ತಾಂತ್ರಿಕ ಪ್ರಯೋಗ ಇದಕ್ಕೆ ನೆರವಾಗಿರಬಹುದು’ ಎಂದರು.

‘ಹೆಮ್ಮೆಯ ಸಂಗತಿ’: ‘ಕನ್ನಡದ ಎರಡು ಚಿತ್ರಗಳು ಮೊದಲ ಬಾರಿಗೆ ಆಸ್ಕರ್‌ ಪ್ರಶಸ್ತಿ ಕಣದಲ್ಲಿರುವುದು ಹೆಮ್ಮೆ ಮತ್ತು ಖುಷಿಯ ಸಂಗತಿ’ ಎಂದು ‘ಕೇರ್‌ ಆಫ್‌ ಫುಟ್‌ಪಾತ್‌ 2’ ಚಿತ್ರದ ನಿರ್ದೇಶಕ ಕಿಶನ್ ಶ್ರೀಕಾಂತ್‌ ಪ್ರತಿಕ್ರಿಯಿಸಿದರು. ‘ಲಾಸ್‌ ಏಂಜಲಿಸ್‌ನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಚಿತ್ರ ನೇರವಾಗಿ ಆಯ್ಕೆಯಾಗಿತ್ತು.

ಈಗ ಅಕಾಡೆಮಿಯಿಂದ ಅಧಿಕೃತವಾಗಿ ಹೆಸರು ಪ್ರಕಟವಾಗಿದೆ. ಕಲೆ ಮತ್ತು ಪ್ರಸಾಧನ ವಿಭಾಗ ಹೊರತುಪಡಿಸಿ ಇತರೆ ವಿಭಾಗಗಳಲ್ಲಿ ಒಂದಾದರೂ ಪ್ರಶಸ್ತಿಗೆ ಆಯ್ಕೆಯಾಗುವ ವಿಶ್ವಾಸವಿದೆ. ಮುಂದಿನ ವರ್ಷ ವಿದೇಶಿ ಸಿನಿಮಾ ವಿಭಾಗದಿಂದ ಮತ್ತೆ ಸ್ಪರ್ಧಿಸಲು ನಮಗೆ ಅವಕಾಶವಿದೆ’ ಎಂದು ಅವರು ಹೇಳಿದರು.

Write A Comment