ಅಂತರಾಷ್ಟ್ರೀಯ

ಒಂದು ಬಾಟಲ್ ಶುದ್ಧ ಗಾಳಿಗೆ ಕೇವಲ ರು.1850! ಕೆನಡಾ ಕಂಪನಿಗೆ ವರವಾದ ಚೀನಾದ ಮಾಲಿನ್ಯ| ಗಾಳಿ ಪೂರೈಕೆ ವಹಿವಾಟು ಶುರು

Pinterest LinkedIn Tumblr

Vitality Air.jpg

ಬೀಜಿಂಗ್: ಉಸಿರಾಡುವ ಗಾಳಿಯನ್ನೂ ದುಡ್ಡು ಕೊಟ್ಟು ಕೊಂಡುಕೊಳ್ಳುವುದಾ? ಅಂಥ ದಿನ ಮುಂದೊಂದಿನ ಬರಬಹುದು ಎನ್ನುತ್ತೀರಾ? ಉಹುಂ ಈಗಾಗಲೇ ಆ ದಿನ ಬಂದಿದೆ.

ಚೀನಾದಲ್ಲಿ! ಒಂದೆರಡು ದಿನಗಳಲ್ಲಿ ಸುಧಾರಿಸಬಹುದು ಎಂದುಕೊಂಡಿದ್ದ ಚೀನಾದ ವಾಯುಮಾಲಿನ್ಯ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಆದರೆ ಇದು ಯಾವ್ಯಾವುದೋ ವ್ಯಾಪಾರಗಳಿಗೆ ವರವಾಗಿ ಪರಿಣಮಿಸಿದೆ.

ಇದೀಗ ಕೆನಡಾ ಕಂಪನಿಯೊಂದು ಈ ಸ್ಮಾಗ್ ಸಮಸ್ಯೆಯಿಂದ ಲಾಭ ಮಾಡಿಕೊಳ್ಳಲು ಹೊರಟಿದೆ. ಈ ಕಂಪನಿ ಬೆಟ್ಟದ ಮೇಲಿನ ತಾಜಾ ಗಾಳಿಯನ್ನು ತುಂಬಿಸಿದ ಬಾಟಲ್ ಗಳನ್ನು ಮಾರಲು ಆರಂಭಿಸಿದ್ದು, ಪ್ರತಿ ಬಾಟಲ್ ರು.1850ಕ್ಕೆ ಬಿಕರಿಯಾಗುತ್ತಿದೆ.

ಶುದ್ಧ ಗಾಳಿಗಾಗಿ ಹಪಹಪಿಸುತ್ತಿರುವ ಜನ, ಈ ಬಾಟಲಿಗಾಗಿ ಮುಗಿಬೀಳುತ್ತಿದ್ದಾರೆ. ಮಂಜುಮಿಶ್ರಿತ ಹೊಗೆಯಿಂದ ಕಂಗೆಟ್ಟಿರುವ ಚೀನಾದ ಬೀಜಿಂಗ್‍ನಲ್ಲಿ ಡಿಸೆಂಬರ್ ಆರಂಭದಲ್ಲಿ ರೆಡ್ ಅಲರ್ಟ್ ಘೋಷಿಸಿ, ಮಾಲಿನ್ಯ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು.

ವಾಹನಗಳ ಓಡಾಟ ಕಡಿಮೆಗೊಳಿಸುವುದರಿಂದ ಹಿಡಿದು, ಶಾಲಾಕಾಲೇಜುಗಳಿಗೆ ರಜೆ ಘೋಷಿಸುವ ತನಕ ಸುಮಾರು ನಿಯಮಾವಳಿ ರೂಪಿಸಲಾಯ್ತು. ಫ್ಯಾಕ್ಟರಿಗಳ ಮೇಲೆ ಕೆಲವು ನಿಬಂಧನೆಗಳನ್ನೂ ಹೇರಲಾಯ್ತು. ಆದರೆ ಸ್ಮಾಗ್ ಸಮಸ್ಯೆ ಇನ್ನಾದರೂ ಪರಿಹಾರವಾಗಿಲ್ಲ. ಇಂಥ ಸಮಯದಲ್ಲಿ ಈಗ್ಗೆ ಕೆಲವು ದಿನಗಳ ಹಿಂದೆ ಕಾಂಡೋಮ್ ಮಾರಾಟ, ಕ್ರೀಡಾದಿರಿಸುಗಳ ಆನ್ ಲೈನ್ ಮಾರಾಟದಲ್ಲಿ ದಿಢೀರ್ ಏರಿಕೆಗೊಂಡದ್ದು ಅಚ್ಚರಿ ಮೂಡಿಸಿತ್ತು. ಅದರ ಬೆನ್ನಲ್ಲೆ ಈಗ ಈ ತಾಜಾಗಾಳಿಯ ವ್ಯಾಪಾರ ಜಗತ್ತಿನ ಗಮನ ಸೆಳೆದಿದೆ.

ಬ್ಯಾನ್ಫ್ ಆ್ಯಂಡ್ ಲೇಕ್ ಲೂಯಿಸ್ ಎಂಬ ಕೆನಡಾ ಕಂಪನಿ ಈ ವ್ಯಾಪಾರ ನಡೆಸುತ್ತಿದ್ದು, ಎರಡು ಬಗೆಯ ಬಾಟಲಿ ಸದ್ಯಕ್ಕೆ ಮಾರಾಟವಾಗುತ್ತಿದೆ. ಪ್ರೀಮಿಯಮ್ ಆಕ್ಸಿಜನ್‍ಗೆ ರು.1200 ಇದ್ದರೆ, ಬ್ಯಾನ್ಫ್ ಏರ್ ಎಂಬ ಬಾಟಲಿ ರು.1050ಕ್ಕೆ ಮಾರಲ್ಪಡುತ್ತಿದೆ.

ಇದಕ್ಕೆ ಎಷ್ಟು ಬೇಡಿಕೆಯಿದೆ ಅಂದರೆ ಇ-ಬೇ ಮಾದರಿಯ ಆನ್‍ಲೈನ್ ಶಾಪಿಂಗ್ ಸೈಟ್ ಒಂದು ಈಗಾಗಲೇ ಸೋಲ್ಡ್ ಔಟ್ ಬೋರ್ಡ್ ತಗುಲಿಸಿಕೊಂಡಿದೆ. ಏತನ್ಮಧ್ಯೆ ವಾಯುಮಾಲಿನ್ಯದಿಂದ ಉಂಟಾಗುತ್ತಿರುವ ರೋಗಗಳಿಗೂ ಮತ್ತು ಪರಿಸರ ಕಣಗಳಿಗೂ ಸಂಬಂಧ ಇರುವುದಾಗಿ ಚೀನಾ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಆಟೋಫಾಜಿ ಎಂಬ ದೇಹದೊಳಗಿನ ಭೌತಿಕ ಕ್ರಿಯೆಯು ಜೀವಕೋಶಗಳನ್ನು ನಾಶ ಮಾಡುವುದಲ್ಲದೆ ಇದರಿಂದಾಗಿ ದೇಹದಲ್ಲಿ ಉರಿ ಮತ್ತು ಲೋಳೆ ಅಂಶದ ಉತ್ಪಾದನೆ ಹೆಚ್ಚಾಗುತ್ತದೆ. ಇದನ್ನು ಕೂದಲಿನ 500ಪಟ್ಟು ತೆಳು ಇರುವ ಕಣಗಳು ಪ್ರಚೋದಿಸುತ್ತವೆ ಎಂದು ಚೀನಾದ ಝೆಜಿಯಾಂಗ್ ವಿವಿ ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಈಗ ತಂಡ ಇದನ್ನು ತಡೆಗಟ್ಟುವ ಔಷಧದ ಪರೀಕ್ಷೆಗೆ ಪ್ರಯೋಗ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಪರಿಸರ ಕಣಗಳಿಂದ ಆಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಮುಂತಾದ ಕಾಯಿಲೆಗಳು ಉಲ್ಬಣಸ್ಥಿತಿ ತಲುಪುವ ಅಪಾಯವನ್ನೂ ಅವರು ಎಚ್ಚರಿಸಿದ್ದಾರೆ.

ಗಾಳಿಗೂ ಕೊಡ್ಬೇಕು ಹಣ
ಚೀನಾದಲ್ಲಿ ಮುಂದುವರೆದ ಸ್ಮಾಗ್ (ಮಂಜುಮಿಶ್ರಿತ ಹೊಗೆ) ಸಮಸ್ಯೆ
ಕೆನಡಾದ ಬ್ಯಾನ್ಫ್ ಆ್ಯಂಡ್ ಲೇಕ್ ಲೂಯಿಸ್ ಕಂಪನಿಯ ಶುದ್ಧಗಾಳಿಯ ಬಾಟಲಿಗೆ ಭಾರಿ ಬೇಡಿಕೆ
ಪ್ರೀಮಿಯಂ ಆಕ್ಸಿಜನ್ ಬಾಟಲಿಗೆ ರು.1200, ಬ್ಯಾನ್ಫ್ ಏರ್‍ಗೆ ರು.1050
ಬೆಟ್ಟದಲ್ಲಿ ಸಂಗ್ರಹಿಸಿದ ತಾಜಾಗಾಳಿ ಎಂದು ಮಾರಲ್ಪಡುತ್ತಿದೆ
ಆನ್‍ಲೈನ್ ಶಾಪಿಂಗ್ ತಾಣಗಳಲ್ಲಿ ಈಗಾಗಲೇ ಸೋಲ್ಡï ಔಟ್ ಎಂಬ ಬೋರ್ಡ್

Write A Comment