ಮನೋರಂಜನೆ

ಸುಳಿಗೆ ಸಿಕ್ಕಿದಾಗ: ಸುಳಿಯಲ್ಲಿ ಸ್ತ್ರೀಮಿಂಚು!

Pinterest LinkedIn Tumblr

suli_0

ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಚಿತ್ರಗಳು ಬಂದಿವೆ. ಆ ಹಾದಿಯಲ್ಲಿ ಮತ್ತೊಂದು ಚಿತ್ರ ‘ಸುಳಿಗೆ ಸಿಕ್ಕಿದಾಗ’. ಒಬ್ಬ ಮಹಿಳೆ ಅನಾರೋಗ್ಯ ಪೀಡಿತಳಾಗಿದ್ದು ಆಕೆಯನ್ನು ಗಂಡ ಮತ್ತು ಆತನ ಕುಟುಂಬ ತಿರಸ್ಕಾರದಿಂದ ನೋಡಿದರೆ ಮತ್ತು ಆಕೆ ಕೆಲಸ ಮಾಡುವ ಸ್ಥಳದಲ್ಲಿ ಕಿರುಕುಳ ಅನುಭವಿಸಿದರೆ ಆತ್ಮಹತ್ಯೆಯ ಹಾದಿ ಹಿಡಿಯಬೇಕಾಗುತ್ತದೆ.

ಅದೇ ಮಹಿಳೆಗೆ ಆತ್ಮವಿಶ್ವಾಸ ತುಂಬಿದರೆ ಆಕೆ ಸಮಾಜದಲ್ಲಿ ತನ್ನ ವಿರುದ್ಧದ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವಳು. ಹೀಗೆ ಮಹಿಳೆಗೆ ಸಂಬಂಧಿಸಿದ ಸಮಾಜದ ಎರಡು ದೃಷ್ಟಿಕೋನಗಳನ್ನು ತೋರಿಸುತ್ತದೆ ‘ಸುಳಿಗೆ ಸಿಕ್ಕಿದಾಗ’ ಚಿತ್ರ. ಚಿತ್ರದ ನಾಯಕಿ ಕಲ್ಪನಾ ಪಂಡಿತ್. ಅವರು ಎರಡು ಸನ್ನಿವೇಶಗಳನ್ನು ಎದುರಿಸುವ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮದ ಮಂದಿಯ ಎದುರು ಚಿತ್ರ ಪ್ರದರ್ಶನವಿತ್ತು. ಚಿತ್ರ ವೀಕ್ಷಣೆಯ ನಂತರ ಸುದ್ದಿಗೋಷ್ಠಿ. ‘ಸುಳಿಗೆ ಸಿಕ್ಕಿದಾಗ’ ಕೌಟುಂಬಿಕ ಚಿತ್ರ ಎನ್ನಬಹುದು. ರೀಲ್‌ನಲ್ಲಿರುವ ಬಹುತೇಕ ಪಾತ್ರಗಳು ರಿಯಲ್ ಬದುಕಿನಲ್ಲೂ ಸಂಬಂಧಿಗಳು. ಶೂಟಿಂಗ್‌ಗೆ ಮುನ್ನ ಎರಡು ಬಾರಿ ಕಾರ್ಯಾಗಾರ ನಡೆಸಲಾಗಿತ್ತಂತೆ. ಚಿತ್ರತಂಡದ ಬಹುಮಂದಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುವುದರಿಂದ ವಾರಾಂತ್ಯದ ಅವಧಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ.

‘ಒಬ್ಬ ಮಹಿಳೆ ಕೆಲಸ ಮಾಡುವ ಸ್ಥಳದಲ್ಲಿ ಮತ್ತು ಕುಟುಂಬದಲ್ಲಿ ಸಮಸ್ಯೆಯನ್ನು ಎದುರಿಸಿದರೆ ಅವಳ ಧೈರ್ಯ ಕುಂದುತ್ತದೆ ಎನ್ನುವುದನ್ನು ಮೊದಲ ಆಯಾಮದ ಕಥೆಯಲ್ಲಿ ಹೇಳಿದ್ದೇವೆ. ಮತ್ತೊಂದು ಕಥೆಯಲ್ಲಿ ಮಹಿಳೆ ಆತ್ಮರಕ್ಷಣೆಗಾಗಿ ಕರಾಟೆ ಕಲಿಯುವುದು ಮತ್ತಿತರ ವಿಶ್ವಾಸದ ಪ್ರತೀಕವಾಗಿ ತೋರಿಸಲಾಗಿದೆ’ ಎಂದರು ಚಿತ್ರದ ನಾಯಕಿ ಕಲ್ಪನಾ ಪಂಡಿತ್. ಚಿತ್ರದ ಕಥೆಗಾರರೂ ಅವರೇ. ಬೆಂಗಳೂರಿನಲ್ಲಿ ಹತ್ತು ದಿನ ಮತ್ತು ಅಮೆರಿಕೆಯಲ್ಲಿ ಆರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

‘ಸುಳಿಗೆ ಸಿಕ್ಕಿದಾಗ’ ಚಿತ್ರದ ನಿರ್ದೇಶಕ ಸಂದೀಪ್ ಮಲಾನಿ. ಈ ಹಿಂದೆ ಎಚ್‌ಐವಿ ಸೋಂಕಿತರ ಕುರಿತು ‘ಜೋ ಜೋ ಲಾಲಿ’ ಚಿತ್ರ ನಿರ್ದೇಶಿಸಿದ್ದರು. ಅದು ಹಲವು ಪ್ರಶಸ್ತಿಗಳನ್ನು ಪಡೆದಿತ್ತು. ಈ ಚಿತ್ರವನ್ನೂ ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದರು ಸಂದೀಪ್. ವಿವೇಕ್ ಚಿತ್ರದ ಮುಖ್ಯಪಾತ್ರಧಾರಿಗಳಲ್ಲಿ ಒಬ್ಬರು. ಒಟ್ಟಾರೆ ಚಿತ್ರದ ಪರಿಕಲ್ಪನೆಯನ್ನು ಮೆಚ್ಚಿ ನಟಿಸಿಲು ಅವರು ಒಪ್ಪಿಕೊಂಡರಂತೆ.

Write A Comment