ಮನೋರಂಜನೆ

ಅಭಿಮಾನಿಗಳಿಂದ… ಅಭಿಮಾನಿಗಳಿಗಾಗಿ…ಅಭಿಮಾನಿಗಳಿಗೋಸ್ಕರ: ಗೋಲ್ಡನ್ ಸ್ಟಾರ್ ಗಣೇಶ್

Pinterest LinkedIn Tumblr

crec18style3_0ಚಿನ್ನ ತೆಗೆಯಬೇಕೆಂದರೆ ಅದು ಅಷ್ಟು ಸುಲಭವೇ? ಎಂದು ಪ್ರಶ್ನಿಸಿದ ಗಣೇಶ್, ಆ ವಿವರವನ್ನು ಚುಟುಕಾಗಿ ತೆರೆದಿಟ್ಟರು. ‘ನೆಲ ಬಗೆದು, ಅದಿರು ತೆಗೆಯಬೇಕು. ಅದನ್ನು ಮತ್ತೆಲ್ಲಿಗೋ ಒಯ್ದು ಹತ್ತಾರು ಸಲ ಕುಟ್ಟಿ, ಪುಡಿ ಮಾಡಿ, ಸಂಸ್ಕರಿಸಿದರೆ ಬಂಗಾರ ಸಿಗುತ್ತದೆ. ಆಗಲೇ ಅದಕ್ಕೆ ಬೆಲೆ. ನನ್ನನ್ನು ಅಭಿಮಾನಿಗಳು ಪ್ರೀತಿಯಿಂದ ‘ಗೋಲ್ಡನ್ ಸ್ಟಾರ್’ ಅನ್ನುತ್ತಾರೆ. ನಾನೂ ಪೋಷಕನಟನಾಗಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ ಬಳಿಕವೇ ಹೀರೊ ಆಗಿದ್ದು’ ಎಂದ ಗಣೇಶ್, ತಮಗೆ ಸಿಕ್ಕಿರುವ ಬಿರುದು ಅಭಿಮಾನಿಗಳಿಗೆ ಸಮರ್ಪಿತ ಎಂದರು.

ವಿಭಿನ್ನ ಬಗೆಯ ಪೋಷಾಕಿನಲ್ಲಿ ಗಣೇಶ್ ಕಾಣಿಸಿಕೊಂಡಿರುವ ‘ಸ್ಟೈಲ್‌ ಕಿಂಗ್’ ಚಿತ್ರದ ಹಾಡುಗಳ ಸಮಾರಂಭ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾವಿರಾರು ಅಭಿಮಾನಿಗಳ ಹರ್ಷೋದ್ಗಾರದ ಮಧ್ಯೆ ನಡೆಯಿತು. ನಾಯಕಿಯನ್ನು ಹೊರತುಪಡಿಸಿ ಚಿತ್ರತಂಡದ ಎಲ್ಲರೂ ಭಾಗವಹಿಸಿದ್ದರು. ಅವರಿಗೆ ಶುಭ ಕೋರಲು ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಅಧ್ಯಕ್ಷ ಸಾ.ರಾ. ಗೋವಿಂದು ಬಂದಿದ್ದರು.

ನಿರ್ಮಾಪಕರು ಯಾವುದೇ ಸಮಸ್ಯೆಗೆ ಸಿಲುಕಿದಾಗ ಕಲಾವಿದರು ನೆರವಾಗಬೇಕು ಎಂದ ಗೋವಿಂದು, ಅಂಥ ಹಲವು ಸಂದರ್ಭಗಳಲ್ಲಿ ನೆರವಿನ ಹಸ್ತ ಚಾಚಿದ ಸುದೀಪ್, ಶಿವಣ್ಣ ಹಾಗೂ ಗಣೇಶ್ ಅವರನ್ನು ಶ್ಲಾಘಿಸಿದರು. ನಿರ್ಮಾಪಕರ ಸಮಸ್ಯೆ ಪರಿಹರಿಸಲು ಮಂಡಳಿ ಶ್ರಮಿಸಲಿದೆ ಎಂಬ ಭರವಸೆಯನ್ನು ನೀಡಿದರು.

‘ತೆರೆ ಮೇಲೆ ಮಾತ್ರವಲ್ಲ; ವಾಸ್ತವ ಬದುಕಿನಲ್ಲೂ ಗಣೇಶ್ ಗೋಲ್ಟನ್ ಸ್ಟಾರ್’ ಎಂದು ಹೇಳಿದ್ದು ನಿರ್ದೇಶಕ ಪಿ.ಸಿ. ಶೇಖರ್. ಗಣೇಶ್ ಅಭಿಮಾನಿಗಳಿಗೆ ಹೊಸತೇನನ್ನಾದರೂ ಕೊಡುವ ಯೋಚನೆ ಮಾಡಿದಾಗ ಹೊಳೆದ ಚಿತ್ರವೇ ‘ಸ್ಟೈಲ್‌ ಕಿಂಗ್‌’ ಎಂದ ಶೇಖರ್, ಇಡೀ ಸಿನಿಮಾದ ಪ್ರತಿಯೊಂದು ದೃಶ್ಯವನ್ನು ಅಭಿಮಾನಿಗಳಿಗೆ ಅರ್ಪಿಸಿದ್ದಾಗಿ ಹೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಗಣೇಶ್, ಸಣ್ಣಪುಟ್ಟ ಪಾತ್ರಗಳಿಂದ ಈ ಹಂತ ತಲುಪುವವರೆಗೆ ತಾವು ನಡೆಸಿದ ಹೋರಾಟವನ್ನು ಚುಟುಕಾಗಿ ತೆರೆದಿಟ್ಟರು. ಅಭಿಮಾನಿಗಳೇ ತಮಗೆ ದೇವರು ಎಂದ ಅವರು, ‘ಈ ಚಿತ್ರದಲ್ಲಿ ನಿರ್ದೇಶಕರು ನನ್ನನ್ನು ಸ್ಟೈಲ್‌ ಆಗಿ ತೋರಿಸಿದ್ದಾರೆ. ಚಿತ್ರದ ನಿರ್ಮಾಪಕರು ಕಿಂಗ್. ಅವರಿಬ್ಬರ ಸಹಕಾರದಿಂದ ನಾನು ಸ್ಟೈಲ್‌ ಕಿಂಗ್‌ ಆಗಿ ತೆರೆ ಮೇಲೆ ಕಾಣಿಸಿಕೊಂಡಿದ್ದೇನೆ ಅಷ್ಟೇ’ ಎಂದರು.

ಗಣೇಶ್ ಜತೆ ನಟಿಸುವ ತಮ್ಮ ಆಸೆ ಈ ಚಿತ್ರದ ಮೂಲಕ ನನಸಾಗಿದೆ ಎಂದು ಕಲಾವಿದ ಗಿರೀಶ್ ಖುಷಿಪಟ್ಟರೆ, ‘ಗಣೇಶ್ ಅಂದರೆ ಕನ್ನಡದ ರಾಜೇಶ್ ಖನ್ನಾ’ ಎಂದು ಹಿರಿಯ ಕಲಾವಿದ ಸುಂದರ ರಾಜ್ ಹೊಗಳಿದರು. ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ನಿರ್ಮಾಪಕ ಮಾರುತಿ, ನಟಿ ಪದ್ಮಜಾ ರಾವ್ ಇತರರು ಮಾತನಾಡಿದರು.

Write A Comment