ಕರ್ನಾಟಕ

ಬೆಂಗಳೂರಲ್ಲಿ ಕಸ ವಿಂಗಡಿಸದಿದ್ದರೆ ಭಾರೀ ದಂಡ ಕಟ್ಟಿ; ಹೈಕೋರ್ಟ್ ಆದೇಶ

Pinterest LinkedIn Tumblr

kasa-18-12

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ಜನತೆ ಇನ್ನು ಮುಂದೆ ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಸ್ಕರಣೆಯಾಗುವ (ಹಸಿ) ತ್ಯಾಜ್ಯ ಮತ್ತು ಸಂಸ್ಕರಣೆಯಾಗದ (ಒಣ) ತ್ಯಾಜ್ಯವಾಗಿ ವಿಂಗಡಣೆ ಮಾಡಲು ‘ಎರಡು ಕಸದ ಡಬ್ಬಿ ಮತ್ತು ಒಂದು ಬ್ಯಾಗ್‌’ ಎಂಬ ನೂತನ ವಿಧಾನ ಅಳವಡಿಸಿಕೊಳ್ಳುವುದನ್ನು ಹೈಕೋರ್ಟ್‌ ಕಡ್ಡಾಯಗೊಳಿಸಿ ಗುರುವಾರ ಆದೇಶಿಸಿದೆ.

ನಿಯಮ ಉಲ್ಲಂಘಿಸುವ ನಾಗರಿಕರಿಗೆ ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ – 1976ರ ಸೆಕ್ಷನ್‌ 431(ಆ) ಪ್ರಕಾರ ದಂಡ ವಿಧಿಸಲು ಕೋರ್ಟ್‌ ಆದೇಶಿಸಿದ್ದು, ಅದರ ಅಡಿಯಲ್ಲಿ ಕನಿಷ್ಠ 100 ರೂ.ಗಳಿಂದ ಗರಿಷ್ಠ 5000 ರೂ. ದಂಡ ವಿಧಿಸಲು ಅವಕಾಶವಿದೆ ಎನ್ನಲಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಬೆಂಗಳೂರು ನಿವಾಸಿಗಳು ಹಸಿರು ಮತ್ತು ಕೆಂಪುಬಣ್ಣದ ಪ್ರತ್ಯೇಕ ಎರಡು ಕಸದ ಡಬ್ಬಿ ಮತ್ತು ಒಂದು ಬ್ಯಾಗ್‌ (ಚೀಲ)ನಲ್ಲಿ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವಿಂಗಡಿಸಿ ಸಂಗ್ರಹಿಸಬೇಕು. ಹಸಿರು ಬಣ್ಣದ ಡಬ್ಬಿಯಲ್ಲಿ ಹಸಿ ಅಥವಾ ಸಂಸ್ಕರಣೆಯಾಗುವ ತ್ಯಾಜ್ಯ ಮತ್ತು ಕೆಂಪುಬಣ್ಣದ ಡಬ್ಬಿಯಲ್ಲಿ ಔಷಧದಂತಹ ಪದಾರ್ಥಗಳನ್ನು ಸಂಗ್ರಹಿಸಬೇಕು. ಇನ್ನೂ ಒಂದು ಚೀಲದಲ್ಲಿ ಸಂಸ್ಕರಣೆಯಾಗದ ಅಥವಾ ಘನ ತ್ಯಾಜ್ಯವನ್ನು ಸಂಗ್ರಹಿಸಿ ಬಿಬಿಎಂಪಿ ನಿಯೋಜಿಸಿದ ಕಸ ಸಂಗ್ರಹ ವ್ಯಕ್ತಿಗೆ ನೀಡಬೇಕು ಎಂದು ಹೈಕೋರ್ಟ್‌ ಮಹತ್ವದ ನಿರ್ದೇಶನ ನೀಡಿದೆ.

ಇದರಿಂದ ಸದ್ಯ ಅಸ್ತಿತ್ವದಲ್ಲಿರುವ, ಎಲ್ಲ ಮಾದರಿಯ ಕಸವನ್ನು ಒಟ್ಟುಗೂಡಿಸಿ ಕಸದ ತೊಟ್ಟಿಗೆ ಹಾಕುವ ಹಾಗೂ ರಸ್ತೆಬದಿಯಲ್ಲಿ ಬಿಸಾಡುವ ಅವೈಜ್ಞಾನಿಕ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ ಪದ್ಧತಿ ಸ್ಥಗಿತಗೊಳ್ಳಲಿದೆ. ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಅಸಮರ್ಪಕವಾಗಿ ವಿಲೇವಾರಿ ಮಾಡುತ್ತಿದ್ದ ಬಿಬಿಎಂಪಿ ಕಾರ್ಯವೈಖರಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಎನ್‌. ಕುಮಾರ್‌ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಅನುಸರಿಸಬೇಕಾದ ವಿಧಾನಗಳ ಕುರಿತು ಇಂತಹ ನಿರ್ದೇಶನ ನೀಡುವ ಮೂಲಕ ಮಧ್ಯಂತರ ಆದೇಶ ಮಾಡಿದೆ. ಇಷ್ಟೇ ಅಲ್ಲದೇ ತ್ಯಾಜ್ಯ ವಿಲೇವಾರಿ ಸಂಬಂಧ ಇನ್ನೂ ಹಲವು ನಿರ್ದೇಶನಗಳನ್ನು ನ್ಯಾಯಪೀಠ ನೀಡಿದೆ. ಅವುಗಳೆಂದರೆ, ಮನೆ ಮನೆಯಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಕಸ ಸಂಸ್ಕರಣೆ ಘಟಕಗಳಿಗೆ ನೇರವಾಗಿ ಸಾಗಣೆ ಮಾಡಬೇಕು. ಮನೆಯಿಂದ ಸಂಗ್ರಹಿಸಿದ ವಿಂಗಡಿಸಿದ ಕಸವನ್ನು ಯಾವುದೇ ಸನ್ನಿವೇಶದಲ್ಲೂ ಮಿಶ್ರಣ ಮಾಡಿ ಸಾಗಣೆ ಮಾಡದಂತೆ ಇಲಾಖೆಗಳು ಖಾತರಿವಹಿಸಬೇಕು ಎಂದು ಪೀಠ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಮೇಲಿನ ಸಿದ್ಧತೆಗಳ ಅನುಪಸ್ಥಿತಿಯಲ್ಲಿ ಮಾತ್ರ ಎರಡನೇ ಹಂತದ ಕಸ ಸಂಗ್ರಹ (ಬಿಬಿಎಂಪಿ ನಿಗದಿಪಡಿಸಿದ ಕಸದ ತೊಟ್ಟಿಯಲ್ಲಿ) ಮಾತ್ರ ಕಸವನ್ನು ಸಂಗ್ರಹಿಸಬೇಕು ಎಂದಿದೆ.

ಹೊದಿಕೆ ಹಾಕಿ: ತ್ಯಾಜ್ಯ ಸಾಗಣೆ ಮಾಡುವ ವಾಹನಗಳು ಹೊದಿಕೆಯನ್ನು ಹೊದಿಸಬೇಕು. ವಾಹನಗಳಿಂದ ಕಸ ಸೋರಿಕೆಯಾಗದಂತೆ ಅಥವಾ ಕೆಳಗೆ ಬೀಳದಂತೆ ಎಚ್ಚರವಹಿಸಬೇಕು. ಸಾಗಣೆ ಮಾಡುವ ತ್ಯಾಜ್ಯವು ಜನರಿಗೆ ಕಾಣಬಾರದು. ಕಸದ ತೊಟ್ಟಿಯ ತ್ಯಾಜ್ಯ, ಕಸದ ಡಬ್ಬಿ ಅಥವಾ ಕಂಟೇನರ್‌ಗಳ ತ್ಯಾಜ್ಯವನ್ನು ದಿನನಿತ್ಯ ಸಂಗ್ರಹಿಸಬೇಕು. ರಸ್ತೆ ಗುಡಿಸುವುದು ಹಾಗೂ ತ್ಯಾಜ್ಯ ಸಂಗ್ರಹಣೆ ಕಾರ್ಯವನ್ನು ಅರ್ಧಕ್ಕೆ ಬಿಡಬಾರದು. ಕಸದ ಡಬ್ಬಿಗಳ ಮೇಲೆ ಹೊದಿಕೆ ಹೊದಿಸಬೇಕು ಎಂದು ಪೀಠ ಆದೇಶದಲ್ಲಿ ಹೇಳಿದೆ.

ಉಲ್ಲಂಘಿಸಿದರೆ ದಂಡಾಸ್ತ್ರ: ಬಿಬಿಎಂಪಿಯು 3 ವಿಧಾನದಲ್ಲಿ ತ್ಯಾಜ್ಯವನ್ನು ಬೇರ್ಪಡಿಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಜನರು ನಿಯಮ ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ -1976ರ ಸೆಕ್ಷನ್‌ 431(ಆ) ಪ್ರಕಾರ ದಂಡ ವಿಧಿಸುವುದರ ಜೊತೆಗೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಹೈಕೋರ್ಟ್‌ ಆದೇಶಿಸಿದೆ.
-ಉದಯವಾಣಿ

Write A Comment