ಕನ್ನಡ ವಾರ್ತೆಗಳು

ಕಬಡ್ಡಿ ಪಟು ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದ ಪತ್ನಿಯ ಬಂಧನ

Pinterest LinkedIn Tumblr

ranjusha_arrest_photo

ಕಾಸರಗೋಡು, ಡಿ.18 : ನಿಲೇಶ್ವರದ ಕಬಡ್ಡಿ ಪಟು ಸಂತೋಷ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಕೆ.ವಿ. ರಂಜುಷಾ (30)ಳನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷರ ಚಿಕ್ಕಮ್ಮನ ಮಗ ಕಾಯಂಗೋಡು ನಿವಾಸಿ ಸಿ.ಮನೋಜ್ (37) ನನ್ನು ಈಗಾಗಲೇ ಬಂಧಿಸಲಾಗಿದ್ದು, ಇದೀಗ ಬಂಧಿತರ ಸಂಖ್ಯೆ ಎರಡಕ್ಕೇರಿದೆ.

ಸಂತೋಷ್ (37) ಡಿ.7ರಂದು ನಿಲೇಶ್ವರದ ತನ್ನ ಮನೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಇದು ಹೃದಯಾಘಾತದಿಂದ ಸಂಭವಿಸಿದ ಸಾವು ಎಂದು ಭಾವಿಸಲಾಗಿತ್ತು. ಆದರೆ ಶವದ ಕುತ್ತಿಗೆಯಲ್ಲಿ ಪುಟ್ಟ ಗಾಯವೊಂದನ್ನು ಗಮನಿಸಿದ್ದ ಬಂಧುಗಳು ಸಾವಿನ ಬಗ್ಗೆ ಶಂಕೆ ವ್ಯಕ್ತ ಪಡಿಸಿದ್ದರು. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷಾ ವರದಿಯು ಸಂತೋಷರನ್ನು ಉಸಿರುಗಟ್ಟಿ ಕೊಲ್ಲಲಾಗಿದೆ ಎನ್ನುವುದನ್ನು ದೃಢಪಡಿಸಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಹಲವರನ್ನು ವಿಚಾರಣೆಗೊಳಪಡಿಸಿದ್ದರು. ಶಂಕೆಯಿಂದ ಮನೋಜ್ ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸಂತೋಷರನ್ನು ತಾನೇ ಕೊಂದಿದ್ದಾಗಿ ಒಪ್ಪಿಕೊಂಡಿದ್ದ.

ಘಟನೆಯ ಮುನ್ನಾದಿನ ಸಂತೋಷ್ ಮದ್ಯದ ಅಮಲಿನಲ್ಲಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದು, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯನ್ನು ನೋಡಿಕೊಳ್ಳಲು ರಂಜುಷಾ ಕೂಡ ಆಸ್ಪತ್ರೆಯಲ್ಲಿದ್ದು, ಸಂತೋಷ್ ಮನೆಯಲ್ಲಿ ಒಂಟಿಯಾಗಿದ್ದರು. ಈ ಸಂದರ್ಭ ಸಾಧಿಸಿದ ಮನೋಜ್ ಅವರನ್ನು ಉಸಿರುಗಟ್ಟಿಸಿ ಸಾಯಿಸಿದ್ದ. ಆಗಾಗ್ಗೆ ಸಂತೋಷರ ಮನೆಗೆ ಬರುತ್ತಿದ್ದ ಮನೋಜ್ ರಂಜುಷಾಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಕೊಲೆ ನಡೆದಿತ್ತು.

ಆರಂಭದಿಂದಲೇ ರಂಜುಷಾಳನ್ನು ಅನುಮಾನ ಹೊಂದಿದ್ದ ಪೊಲೀಸರು ಆಕೆಯ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಕೊಲೆಗೆ ಮುನ್ನ ಮತ್ತು ಬಳಿಕ ಹಲವಾರು ಕರೆಗಳನ್ನು ಮನೋಜ್ ಗೆ ಮಾಡಿದ್ದು ಬೆಳಕಿಗೆ ಬಂದಿತ್ತು. ರಂಜುಷಾ ಮನೋಜ್ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದು, ಬಯಲಾಗಿತ್ತು.

ಈ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ.

Write A Comment