ರಾಷ್ಟ್ರೀಯ

ಐಎಸ್ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ 16 ವರ್ಷದ ಹುಡುಗಿ ಮೇಲೆ ಪೊಲೀಸರ ಹದ್ದಿನ ಕಣ್ಣು

Pinterest LinkedIn Tumblr

gana

ಪುಣೆ, ಡಿ.18-ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಇತ್ತೀಚೆಗಷ್ಟೇ ಬಂಧಿಸಲ್ಪಟ್ಟ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಅಧಿಕಾರಿ ಮೊಹಮ್ಮದ್ ಸಿರಾಜುದ್ದೀನ್ ಜೊತೆ ಸಂಪರ್ಕದಲ್ಲಿದ್ದಳು ಎಂದು ಶಂಕಿಸಲಾಗಿರುವ 16 ವರ್ಷದ ಕಾಲೇಜು ವಿದ್ಯಾರ್ಥಿನಿ ಒಬ್ಬಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಇಲ್ಲಿನ ಉಗ್ರ ನಿಗ್ರಹ ದಳದ ಮುಖ್ಯಸ್ಥರಾದ ಭಾನುಪ್ರತಾಪ್ ಬರ್ಗೆ ತಿಳಿಸಿದ್ದಾರೆ.

ಸಿರಾಜುದ್ದೀನ್ ಫೇಸ್‌ಬುಕ್ ಮತ್ತು ವಾಟ್ಸ್ ಅಪ್‌ಮೂಲಕ ಅಪ್ರಾಪ್ತ ವಯಸ್ಸಿನ ಹುಡುಗರು ಮತ್ತು ಹುಡುಗಿಯರ ಜೊತೆ ಸಂಪರ್ಕ ಬೆಳೆಸಿ ಅವರನ್ನು ಐಎಸ್ ಸೇರುವಂತೆ ಪ್ರಚೋದಿಸುತ್ತಿದ್ದ.

ದೇಶಾದ್ಯಂತ ಐಎಸ್ ಧೋರಣೆಯನ್ನು ಪ್ರಚಾರ ಮಾಡುವುದು ಸಿರಾಜುದ್ದೀನ್ ಕೆಲಸವಾಗಿತ್ತು. ಹಾಗೆಯೇ ಸಾಧ್ಯವಾದಷ್ಟು ಯುವಕ-ಯುವತಿಯರನ್ನು ಐಎಸ್ ತಂಡಕ್ಕೆ ನೇಮಕ ಮಾಡಿಕೊಳ್ಳುವುದು, ಅವರ ಮನವೊಲಿಸಿ ಐಎಸ್‌ನತ್ತ ಅವರು ಆಸಕ್ತಿ ವಹಿಸುವಂತೆ ಮಾಡುವುದು ಇವನ ಪ್ರಮುಖ ಗುರಿ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಿರಾಜುದ್ದೀನ್‌ನನ್ನು ಜೈಪುರದಲ್ಲಿ ಬಂಧಿಸಲಾಗಿತ್ತು.

ಈ ನಿಟ್ಟಿನಲ್ಲಿ ಪುಣೆಯ ಮುಸ್ಲಿಂ ಕುಟುಂಬವೊಂದರ 16 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಐಎಸ್ ಸೇರುವಂತೆ ಮತ್ತು ಉಗ್ರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸಿರಾಜುದ್ದೀನ್ ಪ್ರೇರೇಪಿಸಿದ್ದ.  ಸಿರಾಜುದ್ದೀನ್ ಬಂಧನದ ನಂತರ ಅವನು ನೀಡಿದ ಮಾಹಿತಿಗಳನ್ನಾಧರಿಸಿ ನಾವೀಗ ಈ ಬಾಲಕಿಯ ಮೇಲೆ ನಿಗಾ ವಹಿಸಿದ್ದೇವೆ. ಅವಳು ಏನು ಚಟುವಟಿಕೆಗಳನ್ನು ನಡೆಸುತ್ತಿದ್ದಾಳೆ. ಯಾರ-ಯಾರ ಸಂಪರ್ಕದಲ್ಲಿದ್ದಾಳೆ ಎಂಬ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಬಾಲಕಿಯನ್ನು ಕರೆಸಿ ಅವಳಿಗೆ ಕೌನ್ಸಿಲಿಂಗ್ ಮಾಡಿ ಐಎಸ್ ಎಂತಹ ಅಪಾಯಕಾರಿ ಮತ್ತು ಅದನ್ನು ಬೆಂಬಲಿಸುವವರಿಗೆ ಏನು ಸ್ಥಿತಿ ಒದಗಲಿದೆ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ.

ಸಿರಾಜುದ್ದೀನ್ ಬಾಲಕಿಗೆ ಬ್ರೈನ್ ವಾಷ್ ಮಾಡಿ ಅವಳ ತಲೆಯ ತುಂಬಾ ಐಎಸ್ ಚಟುವಟಿಕೆಗಳು ಮಹತ್ವದ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪನೆಗೆ ಪ್ರಯತ್ನಿಸುತ್ತಿವೆ ಎಂದು ಮನವೊಲಿಸಿದ್ದಾನೆ. ಈಗ ನಿಧಾನವಾಗಿ ಬಾಲಕಿ ಅದರಿಂದ ಹೊರಬರುವ ಪ್ರಯತ್ನದಲ್ಲಿದ್ದಾಳೆ. ಪುಣೆ ಕಾಲೇಜೊಂದರಲ್ಲಿ 11ನೇ ತರಗತಿಯಲ್ಲಿ (ಪಿಯು) ಬಾಲಕಿ ವ್ಯಾಸಂಗ ಮಾಡುತ್ತಿದ್ದಾಳೆ. ಸಿರಾಜುದ್ದೀನ್ ಮಹಾರಾಷ್ಟ್ರ ಒಂದೇ ಅಲ್ಲದೆ ಕರ್ನಾಟಕ, ರಾಜಸ್ಥಾನ, ಆಂಧ್ರಪ್ರದೇಶ, ತಮಿಳುನಾಡು, ಜಮ್ಮು-ಕಾಶ್ಮೀರ ಮುಂತಾದ ರಾಜ್ಯಗಳು ಹಾಗೂ ಶ್ರೀಲಂಕಾ, ದುಬೈ, ಸೌದಿ ಅರೇಬಿಯಾ, ಕೀನ್ಯ ಮುಂತಾದ ದೇಶಗಳಿಂದಲೂ ಸುಮಾರು 200 ಮಂದಿ ಯುವಕ-ಯುವತಿಯರನ್ನು ಐಎಸ್‌ನತ್ತ ಸೆಳೆಯಲು ಪ್ರಯತ್ನ ನಡೆಸಿದ್ದ.

Write A Comment