ಕರ್ನಾಟಕ

ಚಳ್ಳಕೆರೆ ಹೈಡ್ರೋಜನ್ ಬಾಂಬ್ ಘಟಕಕ್ಕೆ ಭಾರಿ ವಿರೋಧ

Pinterest LinkedIn Tumblr

challakere

ಬೆಂಗಳೂರು ಡಿ. 18 : ಕರ್ನಾಟಕದ ರಹಸ್ಯ ಪ್ರದೇಶವೊಂದರಲ್ಲಿ ಭಾರತ ಸರ್ಕಾರ ಬೃಹತ್ ಹಾಗೂ ಉತ್ಕೃಷ್ಟ ಅಣು ಸ್ಥಾವರ ನಿರ್ಮಾಣ ಮಾಡುತ್ತಿದೆ ಎಂದು ಅಂತಾರಾಷ್ಟ್ರೀಯ ನಿಯತಕಾಲಿಕೆಯೊಂದು ವರದಿ ಮಾಡಿದೆ.  ಫಾರಿನ್ ಪಾಲಿಸಿ ಎಂಬ ಅಂತಾರಾಷ್ಟ್ರೀಯ ನಿಯತಕಾಲಿಕೆ ಈ ವರದಿ ಮಾಡಿದ್ದು, ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಜಲಜನಕ ಬಾಂಬ್ ತಯಾರಿಸುವ ಉದ್ದೇಶದಿಂದ ಭಾರತ ಸರ್ಕಾರ ಈ ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಪತ್ರಿಕೆ ವರದಿ ಮಾಡಿರುವಂತೆ ಕರ್ನಾಟಕದ ರಹಸ್ಯ ಪ್ರದೇಶದಲ್ಲಿ ಈ ಬೃಹತ್ ಅಣು ಸ್ಥಾವರವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕಾಗಿ ಸುಮಾರು ಸಾವಿರ ಎಕರೆ ಜಾಗ ಮೀಸಲಿಡಲಾಗಿದೆ ಎಂದು ಹೇಳಲಾಗಿದೆ.

ಭಾರತ ಸರ್ಕಾರದ ವತಿಯಿಂದ ಅತ್ಯಂತ ರಹಸ್ಯವಾಗಿ ಈ ಅಣು ಸ್ಥಾವರವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇಲ್ಲಿ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಜಲಜನಕ ಬಾಂಬ್ ತಯಾರಿಸುವ ಕನಸನ್ನು ಸಾಕಾರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪತ್ರಕರ್ತ ಆಡ್ರಿಯನ್ ಲೆವಿ ವರದಿ ಉಲ್ಲೇಖಿಸಿ ಫಾರಿನ್ ಪಾಲಿಸಿ ಸುದ್ದಿ ಪ್ರಕಟಿಸಿದೆ. ಕರ್ನಾಟಕ ಸರ್ಕಾರ ಈ ಬೃಹತ್ ಯೋಜನೆಗಾಗಿ ಚಳ್ಳಕೆರೆಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ರಕ್ಷಣಾ ಮತ್ತು ವಿಜ್ಞಾನ ಇಲಾಖೆಗಳಿಗೆ ಮಂಜೂರು ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಏಷ್ಯಾದಲ್ಲೇ ಅತಿ ದೊಡ್ಡ ರಕ್ಷಣಾ ನಗರವಾಗಿ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ ಯತ್ನಿಸುತ್ತಿದೆ. ಹೀಗಾಗಿ ಇಲ್ಲಿ ಅತ್ಯಂತ ಉತ್ಕೃಷ್ಟ ದರ್ಜೆಯ ಬಾಂಬುಗಳನ್ನು ತಯಾರಿಸುವ ಸಾಮರ್ಥ್ಯದ ಪರಮಾಣು ಸ್ಥಾವರವನ್ನು ನಿರ್ಮಿಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದೇ ವೇಳೆ ಚಿತ್ರದುರ್ಗದಲ್ಲಿ ಮೊದಲೇ ನೀರಿನ ಅಭಾವವಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಅಣು ಸ್ಥಾವರ ನಿರ್ಮಾಣ ಯೋಜನೆಗೆ ಸ್ಥಳೀಯ ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಬೆಂಗಳೂರಿನ ಎನ್ವಿರಾನ್‍ಮೆಂಟ್ ಸಪೋರ್ಟ್ ಗ್ರೂಪ್ ನೇತೃತ್ವದಲ್ಲಿ ಈ ಅಣು ಸ್ಥಾವರದ ವಿರುದ್ಧ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ಅಮೃತಮಹಲ್ ಕಾವಲ್‍ಗೆಂದು ಮೀಸಲಾಗಿದ್ದ ಜಾಗವನ್ನೆಲ್ಲ ಕರ್ನಾಟಕ ಸರ್ಕಾರ ರಕ್ಷಣಾ ಇಲಾಖೆಗಳಿಗೆ ನೀಡುತ್ತಿದೆ. ಇದರಿಂದ ಈ ಭಾಗದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೇ, ಹೈನುಗಾರಿಕೆ ಹಾಗೂ ಪಶುಸಂಗೋಪನೆಯನ್ನೇ ನೆಚ್ಚಿಕೊಂಡಿರುವ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ ಎಂದು ಹೋರಾಟ ಶುರುವಾಗಿತ್ತು.

Write A Comment