ಬೆಂಗಳೂರು: ಬೆಂಗಳೂರು ಎಂದರೆ ಎಲ್ಲರಿಗೂ ಇಷ್ಟ, ಆದರೆ ಬೆಂಗಳೂರಿಗೆ ಏನೇನು ಇಷ್ಟ ಅಂತ ನೀವು ತಿಳಿದುಕೊಳ್ಳಬೇಕೆ? ಹಾಗಿದ್ದರೆ ಹೃದಯವನ್ನು ಒಮ್ಮೆ ಗಟ್ಟಿ ಮಾಡಿಕೊಳ್ಳಿ?
ಸುಮಾರು 800 ಚದರ ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತಾರವಾಗಿರುವ ಬೆಂಗಳೂರು ಪ್ರತಿ ದಿನ ಬೆಳೆಯುತ್ತಲೇ ಇದೆ. ಇದಕ್ಕೆ ಪೈಪೋಟಿ ಎನ್ನುವಂತೆಯೇ ವಾಯುಮಾಲಿನ್ಯ, ಶಬ್ಧ ಮಾಲಿನ್ಯ, ಅತಿ ಹೆಚ್ಚು ಜನಸಂಖ್ಯೆಯೂ ಬೆಳೆಯುತ್ತಿದೆ. ಈಗ ದಿಗ್ಭ್ರಮೆ ಮೂಡಿಸಿರುವ ಅಂಶವೇನೆಂದರೆ ಇವಿಷ್ಟು ಅಂಶಗಳು ಇತಿಮಿತಿಯಿಲ್ಲದೆ ಬೆಳೆಯುತ್ತಿರುವುದು ಇಲ್ಲಿನ ನಾಗರಿಕರಿಗೆ ಗಾಬರಿ ಹುಟ್ಟಿಸಿದೆ. ಈ ಬಗ್ಗೆ ಸಮಗ್ರ, ಅಧ್ಯಯನ ನಡೆಸಿರುವ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವೈರ್ ಮೆಂಟ್ (ಸಿಎಸ್ಇ) ವರದಿಯೊಂದನ್ನು ಬಿಡುಗಡೆ ಮಾಡಿ, ಅದರ ಬಗ್ಗೆ ಶುಕ್ರವಾರ ಸಾರ್ವಜನಿಕರೊಂದಿಗೆ ಸಂವಾದ ನಡೆಸಿತು.
ನಗರದಲ್ಲಿ ಎಗ್ಗಿಲ್ಲದೆ ವ್ಯಾಪಿಸುತ್ತಿರುವ ವಾಯುಮಾಲಿನ್ಯದ ಪ್ರಮಾಣ ಶೇ.57 ರಷ್ಟು ಹೆಚ್ಚಿದೆ. ದಕ್ಷಿಣ ಭಾರತದ ಪ್ರಮುಖ ನಗರಗಳ ಪೈಕಿ ವಾಯುಮಾಲಿನ್ಯ ಹೆಚ್ಚಳದಲ್ಲಿ ಬೆಂಗಳೂರು (140 ಮೈಕ್ರೋಗ್ರಾಂ ಪರ್ ಕ್ಯೂಬಿಕ್ ಮೀಟರ್) ಮೊದಲ ಸ್ಥಾನದಲ್ಲಿದ್ದರೆ, ವಿಜಯವಾಡ (100), ಹೈದರಾಬಾದ್ (98), ಚೆನ್ನೈ (59), ಕೊಯಮತ್ತೂರು (48) ಮಧುರೈ (45) ನಂತರದ ಸ್ನಾನ ಪಡೆದುಕೊಂಡಿವೆ. ಇನ್ನು ನಗರದೊಳಕ್ಕೆ ಬಂದರೆ ವೈಟ್ ಫೀಲ್ಡ್ ಅತೀ ಹೆಚ್ಚು ವಾಯುಮಾಲಿನ್ಯ ಹೊಂದಿದೆ. ನಂತರ ಆಮ್ಕೋ ಬ್ಯಾಟರೀಸ್, ಸೆಂಟ್ರಲ್ ಸಿಲ್ಕ್ ಬೋರ್ಡ್, ವಿಕ್ಟೋರಿಯಾ ರಸ್ತೆಯ ಡಿಟಿಡಿಸಿ ಹೌಸ್ ಪಡೆದುಕೊಂಡಿವೆ. ಕೊನೆಯ ಸ್ಥಾನದಲ್ಲಿ ಅಂದರೆ ಅತಿ ಕಡಿಮೆ ಮಾಲಿನ್ಯ ಹೊಂದಿರುವ ಪ್ರದೇಶದಲ್ಲಿ ಬಸವೇಶ್ವರನಗರ, ದೊಮ್ಮಲೂರು ಸಮಾನ ಸ್ಥಾನ ಪಡೆದಿವೆ.
ರೋಗಗಳು ಉಚಿತ ವಾಯುಮಾಲಿನ್ಯ ಹೆಚ್ಚಾದರೆ ಮೊದಲು ಬಲಿಯಾಗುವುದು ರಸ್ತೆಯ ಅಕ್ಕಪಕ್ಕದಲ್ಲಿ ವಾಸಿಸುವವರು. ಉಳಿದಂತೆ ಮನೆಯೊಳಗಿದ್ದುಕೊಂಡು ಕೆಟ್ಟ ಗಾಳಿ ಸೇವಿಸಿ ಸತ್ತವರ ಸಂಖ್ಯೆ ಶೇ. 4.3 ರಷ್ಟಿದ್ದರೆ, ಮನೆಯ ಹೊರಗಿದ್ದು ಸತ್ತವರ ಸಂಖ್ಯೆ 3.7 ರಷ್ಟಿದೆ. ಹೆಚ್ಚುತ್ತಿರುವ ಮಾಲಿನ್ಯದಿಂದ ಕ್ಯಾನ್ಸರ್, ಪಾಶ್ರ್ವವಾಯು, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು, ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿ ಬಾಧಿಸುತ್ತವೆ. ಈ ಕಾಯಿಲೆಗಳ ನಿಯಂತ್ರಣಕ್ಕೆ ಹಣ್ಣು, ತರಕಾರಿ, ಬೆಣ್ಣೆ, ಮೊಸರು, ಮೀನು, ಉಪ್ಪಿನಕಾಯಿ, ವೈನ್ ಸೇವಿಸಬೇಕು. ಎಣ್ಣೆ ವಿಧದಲ್ಲಿ ಆಲೀವ್ ಎಣ್ಣೆ, ಸಫೋಲಾ ಎಣ್ಣೆ, ತೆಂಗಿನ ಎಣ್ಣೆ ಸೇವಿಸಬಹುದು ಎಂದು ವರದಿ ತಿಳಿಸಿದೆ.
ಎಲ್ಲೆಲ್ಲಿ, ಯಾವ ಯಾವ ಮಾಲಿನ್ಯ ಹೆಚ್ಚು?
ಬೆಂಗಳೂರಿನ ಆಮ್ಕೋ ಬ್ಯಾಟರೀಸ್ ಹೆಚ್ಚು ನೈಟ್ರೋಜನ್ ಆಕ್ಸಿಡ್ ಅನ್ನು ಬಿಡುಗಡೆ ಮಾಡಿ ವಾಯುವನ್ನು ಕಲುಷಿತಗೊಳಿಸಿದೆ.
ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರಾತ್ರಿ 8 ರಿಂದ ಮಧ್ಯರಾತ್ರಿ 1 ಗಂಟೆಯ ಅವಧಿಯಲ್ಲಿ ಉಸಿರಾಡುವ ಗಾಳಿಯಲ್ಲಿ ಹೆಚ್ಚು ಧೂಳಿನ ಕಣ ತೇಲುತ್ತವೆ.
ಇಂದಿರಾಗಾಂಧಿ ಚೈಲ್ಡ್ ಹೆಲ್ತ್ ಕೇರ್ ಸೆಂಟರ್ನಲ್ಲಿ ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯ ಉಂಟಾಗಿದೆ. ಕಾರಣ ಹೆಚ್ಚು ಆಟೋಗಳ ಓಡಾಟದಿಂದ.
ವಿಕ್ಟೋರಿಯಾ ಆಸ್ಪತ್ರೆ ಬಳಿ 2012-13, 2014-15ನೇ ಸಾಲಿನ ಹೆಚ್ಚು ವಾಯು ಮಾಲಿನ್ಯ ಉಂಟಾಗಿದೆ. ಕಾರಣ ಮೆಟ್ರೋ ಕಾಮಗಾರಿ.
ನಗರದ ಸೆಂಟ್ರಲ್ ಸಿಲ್ಕ್ ಬೋರ್ಡ್ ಬಳಿ ವರ್ಷದಿಂದ ವರ್ಷಕ್ಕೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆಯೇ ಹೊರತು ನಿಯಂತ್ರಣ ಕಷ್ಟಸಾಧ್ಯ ಎನ್ನಲಾಗಿದೆ.
ಯಶವಂತಪುರದಲ್ಲಿ 2012-13 ರಲ್ಲಿ ಬಸ್ ನಿಲ್ದಾಣ ನಿರ್ಮಿಸುತ್ತಿದ್ದರಿಂದ ಮಾಲಿನ್ಯ ಹೆಚ್ಚಾಗಿತ್ತು. ನಂತರ ಒಂದು ವರ್ಷ ಬಿಟ್ಟು, ಈಗ ಮತ್ತೆ ಮಾಲಿನ್ಯ ಹೆಚ್ಚಾಗಿದೆ.
ವಿಷ ಗಾಳಿಯಲ್ಲೂ ಫಸ್ಟ್
ವಿಷಕಾರಿ ಗಾಳಿಯುಳ್ಳ ಪ್ರದೇಶಗಳ ಪೈಕಿ ಇಡೀ ದೇಶಕ್ಕೆ ಬೆಂಗಳೂರೇ ನಂಬರ್ ಒನ್. ನಂತರದಲ್ಲಿ ಪುಣೆ, ಕಾನ್ಪುರ್, ಕೋಲ್ಕತಾ, ಚೆನ್ನೈ ಇದ್ದರೆ, ದೆಹಲಿ ಕೊನೆಯಲ್ಲಿದೆ. ವಿಶೇಷವೆಂದರೆ ಇಡೀ ದ.ಭಾರತದ ಮೆಟ್ರೋ ನಗರಗಳಲ್ಲಿ ವಾಯುಮಾಲಿನ್ಯದಲ್ಲಿ ಮುಂಚೂಣಿಯಲ್ಲಿರುವುದು ಇದೇ ಸಿಲಿಕಾನ್ ಸಿಟಿ! ಅಲ್ಲದೆ ಅತಿ ಹೆಚ್ಚು ವಾಹನ ಹೊಂದಿರುವ ಮೆಟ್ರೋ ನಗರಗಳ ಪೈಕಿ ದೆಹಲಿ ಮೊದಲ ಸ್ಥಾನ (ಮುಂಬೈ, ಕೋಲ್ಕತಾ ಹಾಗೂ ಚೆನ್ನೈನಲ್ಲಿರುವ ವಾಹನಗಳ ಕೂಡಿಸಿದರೆ ಆಟುವ ಒಟ್ಟು ಮಾಲಿನ್ಯ ದೆಹಲಿಯೊಂದರಲ್ಲೇ ಆಗುತ್ತದೆ), ಎರಡನೇ ಸ್ಥಾನದಲ್ಲಿ ಬೆಂಗಳೂರಿಗಿದೆ.
ಎಲೆಕ್ಟಿಕಲ್ ಬಸ್ ಬೇಕು
ನಗರದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರು ಬಿಎಂಟಿಸಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಪರಿಹಾರವೇ? ಹೌದು ಎನ್ನುತ್ತಾರೆ ತಜ್ಞರು. 2010ರಲ್ಲಿ ಆರಂಭವಾದ ಬಸ್ ದಿನಾಚರಣೆ ಖಾಸಗಿ ವಾಹನಗಳ ಓಡಾಟ ತಪ್ಪಿಸಿ ಮಾಲಿನ್ಯ ನಿಯಂತ್ರಿಸಲು ಸೂಕ್ತ ಪರಿಹಾರವಾಗಿದೆ. ನಗರದಲ್ಲಿ 6419 ಬಸ್ಸುಗಳ ಪ್ರತಿದಿನ 12.15 ಲಕ್ಷ ಕಿಮೀ ಸಂಚರಿಸುತ್ತವೆ. 76066 ಟ್ರಿಪ್ ಗಳಿಗಾಗಿ ಸರ್ಕಾರ ರು.3.94 ಕೋಟಿ ವ್ಯಯಿಸುತ್ತಿದೆ. 52 ಲಕ್ಷ ಮಂದಿ ಪ್ರಯಾಣಿಕರು ಇದರ ಸೇವೆ ಪಡೆಯುತ್ತಿದ್ದಾರೆ. ಈಗ ಬಸ್ಸುಗಳ ಓಡಾಟದಿಂದಲೂ ವಾಯು ಮಾಲಿನ್ಯ ಹೆಚ್ಚುತ್ತಿದ್ದು, ಇದನ್ನು ತಪ್ಪಿಸಲು ಎಲೆಕ್ಟ್ರಿಕಲ್ ಬಸ್ ಗಳ ಅವಶ್ಯಕತೆಯನ್ನು ಬಿಎಂಟಿಸಿ ಮನಗಂಡಿದೆ. 2014 ಫೆ.28ರಿಂದ 2014 ಮೇ 31 ರವರೆಗೆ ಈ ಬಸ್ಸುಗಳ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಆದರೆ ಈ ಬಸ್ ಖರೀದಿಸಲು ಒಂದಕ್ಕೆ ಬರೋಬ್ಬರು ರು.2.50 ಕೋಟಿ ತಗಲುವುದರಿಂದ ಮುಂದಿನ ನಿರ್ಧಾರ ಸರ್ಕಾರಕ್ಕೆ ಬಿಡಲಾಗಿದೆ.
ಮಾಲಿನ್ಯ ತಡೆಗೆ ಹೈ ಕೋರ್ಟ್ ಏನು ಹೇಳಿದೆ?
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮತ್ತು ಶಬ್ಧ ಮಾಲಿನ್ಯ ತಡೆಗಟ್ಟಲು ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಡಬ್ಲ್ಯೂ ಪಿ ನಂ.39432/2015) ದಾಖಲಿಸಿಕೊಂಡ ಹೈ ಕೋರ್ಟ್ ಬಿಬಿಎಂಪಿ, ಬಿಡಿಎ, ಸರ್ಕಾರ ಪೊಲೀಸ್, ಸಾರಿಗೆ ಇಲಾಖೆಗೆ ಈ ಕೆಳಗಿನ ನಿರ್ದೇಶನಗಳನ್ನು ನೀಡಿದೆ.
ನೂತನ ವಾಹನ ನೋಂದಣಿ ನಿಯಂತ್ರಣ ಭಾರೀ ವಾಹನ ಪ್ರವೇಶ ನಿರ್ಬಂಧ
ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಸ್ಟ್ರೋಕ್ ದ್ವಿಚಕ್ರ ವಾಹನ ನಿಷೇಧ
ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಆಟೋರಿಕ್ಷಾ ಸಂಚಾರ ನಿರ್ಬಂಧ
15 ವರ್ಷಗಳಿಗಿಂತ ಹಳೆಯದಾದ ಭಾರಿ ವಾಹನ ನಿಷೇಧ
ಕಾಲಕಾಲಕ್ಕೆ ವಾಹನಗಳ ಹೊಗೆ ಪರೀಕ್ಷಿಸಲು ಕೇಂದ್ರ ಸ್ಥಾಪನೆ
ಮಾಲಿನ್ಯ ತಪ್ಪಿಸುತ್ತಿದೆ ಬಸ್
ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ದ್ವಿಚಕ್ರ ವಾಹನಗಳು ಶೇ.69, ಕಾರುಗಳು ಶೇ.20, ಆಟೋರಿಕ್ಷಾ ಶೇ.3 ಹಾಗೂ ಇತರೆ ಶೇ.8ರಷ್ಟು ಕೊಡುಗೆ ನೀಡುತ್ತಿದೆ. ಆದರೆ ಬಸ್ಸುಗಳ ಓಡಾಟ ಶೇ.65ರಿಂದ 80 ವಾಯುಮಾಲಿನ್ಯ ತಪ್ಪಿಸುತ್ತಿವೆ. ಅಂದರೆ ಇತರೆ ಎಲ್ಲ ವಾಹನಗಳ ಓಡಾಟದಿಂದಾಗುವ ಶೇ.21 ರಷ್ಟು ಮಾಲಿನ್ಯವನ್ನು ತಪ್ಪಿಸುತ್ತದೆಯಂತೆ!
ಮಾಲಿನ್ಯ ತಡೆಗೆ ಏನು ಕ್ರಮ?
ಸಾರ್ವಜನಿಕ ಬಸ್ಸುಗಳ ಸಂಖ್ಯೆ ಹೆಚ್ಚುಸುವುದು
ವಾಹನಗಳ ಕಾರ್ಯಕ್ಷಮತೆ, ಗುಣಮಟ್ಟ ಕಾಪಾಡುವುದು
ತಂತ್ರಜ್ಞಾನ, ಮೂಲಸೌಕರ್ಯ, ಸೇವೆಯಲ್ಲಿ ಸುಸ್ಥಿರತೆ
ಮಾದರಿ ಬಸ್ ಡಿಪೋ, ಸಂಚಾರ ನಿರ್ವಹಣೆಗೆ ಅಗತ್ಯ ಕ್ರಮ
ಕೇಂದ್ರ ಕಚೇರಿಯಲ್ಲೇ ಮಾಲಿನ್ಯ!
ಕರ್ನಾಟಕ ಪರಿಸರ ವಾಯುನಿಯಂತ್ರಣ ಮಂಡಳಿಯ ಕೇಂದ್ರ ಕಚೇರಿ ಇರುವ ನಗರದ ಚರ್ಚ್ ರಸ್ತೆಯಲ್ಲಿರುವ ಪರಿಸರ ಭವನವೇ ಹೆಚ್ಚು ಶಬ್ಧ ಮಾಲಿನ್ಯ ಹೊಂದಿದೆ ಎಂಬುದು ಆಘಾತಕಾರಿ ಅಂತ ಈ ವರದಿಯಿಂದ ತಿಳಿದುಬಂದಿದೆ.
ಇದು ಸಿಎಸ್ಇ ವರದಿ
ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವೈರ್ ಮೆಂಟ್ (ಸಿಎಸ್ಇ) ಈ ವರದಿಯನ್ನು ಬಿಡುಗಡೆ ಮಾಡಿದೆ. ಈ ಸಂಶೋಧನೆಯಲ್ಲಿ ಶೇ.31 ಸಂಶೋಧಕರು, ಶೇ.53 ವೈದ್ಯರು, ಶೇ.15 ಸಂಶೋಧಕರು ಮತ್ತು ವೈದ್ಯರು, ಶೇ.1 ರಷ್ಟು ಪಾಲಿಕೆ ಮತ್ತು ವೈದ್ಯರು ಪಾಲ್ಗೊಂಡಿದ್ದರು. ಪ್ರಮುಖವಾಗಿ ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ನಡೆಸಿದ ಅಧ್ಯಯನ ಇದಾಗಿದೆ.
ಅತಿ ಹೆಚ್ಚು ವಾಯುಮಾಲಿನ್ಯ
ವೈಟ್ ಫೀಲ್ಡ್ ಕೈಗಾರಿಕಾ ಪ್ರದೇಶ
ಕೆಎಚ್ ಬಿ ಕೈಗಾರಿಕಾ ಪ್ರದೇಶ
ಯಲಹಂಕ
ಪೀಣ್ಯ ಕೈಗಾರಿಕಾ ಪ್ರದೇಶ
ಅತಿ ಕಡಿಮೆ ವಾಯುಮಾಲಿನ್ಯ
ಬಸವೇಶ್ವರ ನಗರ
ಟಿಇಆರ್ಐ ದೊಮ್ಮಲೂರು
ಅತಿ ಹೆಚ್ಚು ಶಬ್ಧ ಮಾಲಿನ್ಯ ಪ್ರದೇಶಗಳು
ಪೀಣ್ಯ ಕೈಗಾರಿಕಾ ಪ್ರದೇಶ
ಪರಿಸರ ಭವನ, ಚರ್ಚ್ ರಸ್ತೆ
ವೈಟ್ ಫೀಲ್ಡ್ ಕೈಗಾರಿಕಾ ಪ್ರದೇಶ
ಅತಿ ಕಡಿಮೆ ಶಬ್ಧ ಮಾಲಿನ್ಯ
ಆರ್ ವಿಸಿ/ಇ ಮೈಸೂರು ರಸ್ತೆ
ನಿಮ್ಹಾನ್ಸ್ ಆಸ್ಪತ್ರೆ
ಬಿಟಿಎಂ ಲೇ ಔಟ್