ಬೆಂಗಳೂರು: ಕನ್ನಡ ಚಿತ್ರೋದ್ಯಮ ನಿರ್ಮಾಪಕರ ಹೊಸ ಪೀಳಿಗೆಯ ನೂತನ ಕುಡಿ ಎನ್ ಕೆ ಲೋಹಿತ್ ಬದಲಾವಣೆಗೆ ತಮ್ಮನ್ನು ಒಡ್ಡಿಕೊಳ್ಳುವವರು. ತಮ್ಮ ಚೊಚ್ಚಲ ನಿರ್ಮಾಣ ಸಿನೆಮಾಗೆ ನಟ ಪುನೀತ್ ರಾಜಕುಮಾರ್ ಅವರನ್ನು ಒಪ್ಪಿಸಲು ಸಾಧ್ಯವಾದಾಗ ಎಲ್ಲರೂ ನಿಬ್ಬೆರಗಾಗಿದ್ದರು. ಅಲ್ಲದೆ ನಿರ್ದೇಶನಕ್ಕೆ ತಮಿಳು ನಿರ್ದೇಶಕ ಸರವಣನ್ ಅವರನ್ನು ಕರೆತರುವ ಮೂಲಕ ಗುಸುಗುಸು ಸುದ್ದಿ ಮಾಡಿದ್ದರು. ಈಗ ಸಿನೆಮಾಗೆ ಟಾಲಿವುಡ್ ಸಂಬಂಧ ಕೂಡ ಬೆಳೆಯುತ್ತಿದೆ.
ಮೂಲಗಳ ಪ್ರಕಾರ ಲೋಹಿತ್ ಅವರ ನಿಕಟ ಗೆಳೆಯ ತೆಲುಗು ನಟ ಜೂನಿಯರ್ ಎನ್ ಟಿ ಆರ್ ಅವರು ಸಿನೆಮಾದ ಹಾಡೊಂದಕ್ಕೆ ಕಂಠದಾನ ನೀಡಲಿದ್ದಾರಂತೆ. ಇದು ನಿಜವಾದಲ್ಲಿ ಈ ನಾಯಕ ನಟ ಯಾವುದೇ ಭಾಷೆಯಲ್ಲಾದರೂ ಮೊದಲ ಬಾರಿಗೆ ಹಿನ್ನಲೆ ಗಾಯಕರಾಗಲಿದ್ದಾರೆ. ಅವರ ಮತ್ತೊಂದು ಕರ್ನಾಟಕ ಸಂಬಂಧವೆಂದರೆ ಇವರ ತಾಯಿ ಶಾಲಿನಿ ರಾಜ್ಯದವರು.
ಇದರ ಬಗ್ಗೆ ಲೋಹಿತ್ ಅವರನ್ನು ಕೇಳಿದಾಗ “ಅವರು ನನ್ನ ಗೆಳೆಯ. ಅವರು ನಮ್ಮ ಸಿನೆಮಾಗೆ ಒಂದು ಹಾಡು ಹಾಡಬೇಕೆಂಬುದು ನನ್ನ ಇಚ್ಛೆ. ಅವರು ಸ್ಪೇನ್ ನಿಂದ ಹಿಂದಿರುಗಿದ ಮೇಲೆ ಎಲ್ಲವು ತಿಳಿಯುತ್ತದೆ. ಸದ್ಯಕ್ಕೆ ಯಾವುದನ್ನೂ ಧೃಢೀಕರಿಸಲು ಸಾಧ್ಯವಿಲ್ಲ” ಎನ್ನುತ್ತಾರೆ ಲೋಹಿತ್.
ರಿಂಗ್ ರೋಡಿನಲ್ಲಿ ಚೇಸಿಂಗ್ ದೃಶ್ಯಗಳನ್ನು ಚಿತ್ರೀಕರಿಸುತ್ತಿರುವ ತಂಡ ಸದ್ಯದಲ್ಲೇ ಹಾಡುಗಳ ಚಿತ್ರೀಕರಣವನ್ನು ಪ್ರಾರಂಭಿಸಲಿದೆಯಂತೆ.
ಜನವರಿಯಲ್ಲಿ ಹಾಡುಗಳ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಲಿರುವ ವಿಷಯವನ್ನು ಬಿಚ್ಚಿಡುವ ನಿರ್ಮಾಪಕ “ಜನವರಿ ೭ ರಂದು ಪೋರ್ಚುಗಲ್ ಗೆ ತೆರಳಲಿದ್ದೇವೆ. ರವಿ ತೇಜಾ ಅವರ ‘ಬಲುಪು’ ಸಿನೆಮಾದ ಹಾಡೊಂದನ್ನು ಹೊರತುಪಡಿಸಿದರೆ ದಕ್ಷಿಣ ಭಾರತದ ಸಿನೆಮಾದ ಹಾಡೊಂದು ಇಲ್ಲಿ ಚಿತ್ರೀಕರಣವಾಗುತ್ತಿರುವುದು ಈಗಲೇ” ಎನ್ನುತ್ತಾರೆ.
ಸಿನೆಮಾವನ್ನು ಜನವರಿ ಕೊನೆಗೆ ಬಿಡುಗಡೆ ಮಾಡಲು ಚಿತ್ರತಂಡ ಅವಿರತವಾಗಿ ಶ್ರಮಿಸುತ್ತಿದೆ. ‘ರಣವಿಕ್ರಮ’ದ ನಂತರ ಪುನೀತ ಅವರ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ರಚಿತಾ ರಾಮ್ ಚಕ್ರವ್ಯೂಹದ ನಾಯಕ ನಟಿ.