ನವದೆಹಲಿ: ಈ ಸುದ್ದಿ ಓದಿದರೆ ಇವರಿಬ್ಬರ ಸಾವಿರಾರು ಅಭಿಮಾನಿಗಳಿಗೆ ಶಾಕ್ ಆಗುವುದಂತೂ ಗ್ಯಾರಂಟಿ. ಇಷ್ಟು ದಿನ ಲವ್ ಬರ್ಡ್ಸ್ ಗಳಂತೆ ಓಡಾಡಿಕೊಂಡಿದ್ದವರಿಗೆ ಇದ್ದಕ್ಕಿದ್ದಂತೆ ಏನಾಯ್ತಪ್ಪಾ ಅಂತ ಜನ ಅಂದುಕೊಳ್ಳುತ್ತಾರೆ.
ಅಲ್ಲಲ್ಲಿ ಹರಿದಾಡುತ್ತಿರುವ ಗಾಸಿಪ್ ನಿಜವೇ ಆಗಿದ್ದರೆ, ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಮಧ್ಯೆ ಬಿರುಕು ಮೂಡಿದೆ. ಇಬ್ಬರೂ ದೂರವಾಗುತ್ತಿದ್ದಾರಂತೆ. ಇದಕ್ಕೆ ಕಾರಣ ತಮಾಶಾ ಚಿತ್ರ. ರಣಬೀರ್ ಮತ್ತೆ ತನ್ನ ಮಾಜಿ ಪ್ರಿಯತಮೆ ದೀಪಿಕಾ ಪಡುಕೋಣೆ ಜೊತೆ ಹತ್ತಿರವಾಗಿರುವುದು.
ಫಾರಿನ್ ನಲ್ಲಿ ಬೀಚು, ಹೊಟೇಲ್ ಎಂದು ಸುತ್ತಾಡಿಕೊಂಡು ಬಂದು ಸುದ್ದಿಯಾಗಿದ್ದ ರಣಬೀರ್ ಕಪೂರ್-ಕತ್ರಿನಾ ಜೋಡಿ ಕಳೆದ ವರ್ಷ ಕೊನೆಯ ಹೊತ್ತಿಗೆ ಮುಂಬೈನ ಅಪಾರ್ಟ್ ಮೆಂಟ್ ವೊಂದರಲ್ಲಿ ಒಟ್ಟಿಗೆ ವಾಸಿಸಲು ಆರಂಭಿಸಿದ್ದಾರೆ ಎಂಬಲ್ಲಿವರೆಗೆ ಹೋಗಿತ್ತು. ಆದರೆ ಈಗ ಅವರಿಬ್ಬರ ನಡುವಿನ ಸಂಬಂಧ ಹಳಸಿದೆ ಎಂಬ ಮಾತು ಬಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ. ರಣಬೀರ್ ತಮಾಶಾ ಚಿತ್ರದ ಪ್ರೊಮೋಶನ್ ನಲ್ಲಿ ಬ್ಯುಸಿಯಾಗಿರುವುದು ಮತ್ತು ಈ ನೆಪದಲ್ಲಿ ದೀಪಿಕಾಳ ಜೊತೆ ಅತ್ಯಂತ ಸಲುಗೆಯಿಂದ ಮತ್ತು ಆಪ್ತವಾಗಿ ರಣಬೀರ್ ವರ್ತಿಸುತ್ತಿರುವುದು ಕತ್ರಿನಾಗೆ ಬೇಸರ ಮತ್ತು ಅಭದ್ರತೆ ಭಾವನೆ ತರಿಸಿದೆಯಂತೆ.
ಈ ಹಿಂದೆ ಜಿ ಕ್ಯು ಮ್ಯಾಗಜೀನ್ ಗೆ ನೀಡಿದ ಸಂದರ್ಶನದಲ್ಲಿ ಕತ್ರಿನಾ, ನಾನು ರಣಬೀರ್ ಕಪೂರ್ ಕುಟುಂಬದವರ ಜೊತೆ ಅಷ್ಟೊಂದು ಹತ್ತಿರವಾಗಿಲ್ಲ, ಅವರನ್ನು ಇನ್ನೂ ತಿಳಿಬೇಕಾಗಿದೆ. ಮದುವೆ ವಿಚಾರ ಬಂದಾಗ ನನ್ನನ್ನು ಮದುವೆಯಾಗುವವನು ನನ್ನನ್ನೇ ಸಂಪೂರ್ಣವಾಗಿ ಪ್ರೀತಿಸುತ್ತಾನೆಯೇ ಇಲ್ಲವೇ ಎಂದು ಮದುವೆ ಮಂಟಪದಲ್ಲಿ ಅನುಮಾನ ಬರಬಹುದು ಎಂದು ಹೇಳಿದ್ದಳು. ಅಲ್ಲದೆ ರಣಬೀರ್ ಮಾಜಿ ಪ್ರಿಯತಮೆ ಕತ್ರಿನಾ ಜೊತೆ ಸಿನಿಮಾದಲ್ಲಿ ನಟಿಸುವುದು ಅಷ್ಟೊಂದು ಇಷ್ಟವಿಲ್ಲ ಎಂದು ಕೂಡ ಹೇಳಿದ್ದಳು.
”ನಿಮ್ಮ ಬಾಯ್ ಫ್ರೆಂಡ್ ದೀಪಿಕಾಳ ಜೊತೆ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ, ನನ್ನ ಅಭಿಪ್ರಾಯವನ್ನು ರಣಬೀರ್ ಮೇಲೆ ಹೇರಲು ಸಾಧ್ಯವಿಲ್ಲ. ಅದು ಅವರವರ ಆಯ್ಕೆ. ಜೀವನದಲ್ಲಿ ವರ್ಷಗಳು ಕಳೆದಂತೆ, ಬೌದ್ಧಿಕ ಪ್ರೌಢಿಮೆ ಬೆಳೆದಂತೆ ಜನರ ಆಯ್ಕೆಗಳೂ ಬದಲಾಗುತ್ತವೆ ಎಂದು ಹೇಳಿದ್ದಳು.
ರಣಬೀರ್-ಕತ್ರಿನಾ ಇನ್ನೇನು ಮದುವೆ ದಿನಾಂಕವನ್ನು ಘೋಷಿಸುವುದೊಂದು ಬಾಕಿ ಎಂದು ಹೇಳುತ್ತಿದ್ದವರಿಗೆ ಈಗ ಬ್ರೇಕ್ ಅಪ್ ಸುದ್ದಿ ಬರಸಿಡಿಲಿನಂತೆ ಬಂದೆರಗಿದರೆ ಅಚ್ಚರಿಯಿಲ್ಲ!