ನವದೆಹಲಿ: ಪಾಕಿಸ್ತಾನ ಮತ್ತು ಚೀನಾದ ಬಳಿ ಅತ್ಯಾಧುನಿಕ ವಾಯುದಾಳಿ ಶಸ್ತ್ರಾಸ್ತ್ರಗಳಿವೆ ಎಂದು ತಿಳಿದಿದೆಯಾದರೂ, ಅದನ್ನು ಸಮರ್ಥವಾಗಿ ಎದುರಿಸಲು ಇದೀಗ ಭಾರತ ಸಕಲ ರೀತಿಯಲ್ಲೂ ಸಜ್ಜಾಗಿದೆ.
ನೆರೆಹೊರೆಯ ದೇಶಗಳಿಂದ ಭಾರತ ದಶಕಗಳಿಂದಲೂ ದಾಳಿ ಭೀತಿ ಎದುರಿಸುತ್ತಿದೆಯಾದರೂ ಇದೀಗ ಅದಕ್ಕೆ ಸಮರ್ಥವಾಗಿ ಪ್ರತ್ಯುತ್ತರ ನೀಡಲು ಸಜ್ಜಾಗಿ ನಿಂತಿದೆ. ವಿಷಯವೇನೆಂದರೆ ಶತ್ರು ರಾಷ್ಟ್ರ ಪಾಕಿಸ್ತಾನ ಮತ್ತು ಅದಕ್ಕೆ ಪರೋಕ್ಷ ಕುಮ್ಮಕ್ಕು ನೀಡುತ್ತಿರುವ ಚೀನಾ ದೇಶಕ್ಕೆ ಸೆಡ್ಡು ಹೊಡೆಯಲು ಭಾರತ ರಷ್ಯಾ ದೇಶದೊಂದಿಗೆ ಕೈಜೋಡಿಸಿದ್ದು, ಇದರ ಫಲವಾಗಿ ಭಾರತ-ರಷ್ಯಾದಿಂದ ಸುಮಾರು 40 ಸಾವಿರ ಕೋಟಿ ಮೌಲ್ಯದ ಅತ್ಯಾಧುನಿಕ ಕ್ಷಿಪಣಿಗಳನ್ನು ಖರೀದಿಸಲು ಮುಂದಾಗಿದೆ.
ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಮಾತ್ರ ಇರುವ ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಂಗಳನ್ನು ಭಾರತ ರಷ್ಯಾದಿಂದ ಖರೀದಿಸಲು ಈಗಾಗಲೇ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಆ ಮೂಲಕ ಚೀನಾ ಮತ್ತು ಪಾಕಿಸ್ತಾನದಿಂದ ಎದುರಾಗಬಹುದಾದ ಎಂಥಹುದೇ ರೀತಿಯ ವಾಯುದಾಳಿಯನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಭಾರತ ಹೊಂದಲಿದೆ. ಕೇಂದ್ರ ರಕ್ಷಣಾ ಸಚಿವ ಮನೋಹರ ಪರ್ರಿಕರ್ ನೇತೃತ್ವದ ರಕ್ಷಣಾ ಖರೀದಿ ಪರಿಷತ್ತು ಟ್ರಿಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ 5 ಯೂನಿಟ್ಗಳನ್ನು ಖರೀದಿಸಲು ಒಪ್ಪಿದೆ. ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ರಷ್ಯಾದ ಎಸ್-400 ಟ್ರಯಂಫ್ ಕ್ಷಿಪಣಿಗಳನ್ನು ಭಾರತ ಖರೀದಿಗೆ ಮುಂದಾಗಿದ್ದು, ಪ್ರಸ್ತುತ ಚೀನಾ ಸೇನೆಯಲ್ಲಿರುವ ಅತ್ಯಂತ ಬಲಾಢ್ಯ ವಾಯುದಾಳಿಯನ್ನು ನಿಗ್ರಹಿಸುವ ಶಕ್ತಿ ಈ ಟ್ರಯಂಫ್ ಕ್ಷಿಪಣಿಗಳಿಗೆ ಇದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಉಭಯ ದೇಶಗಳು ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಶೀಘ್ರದಲ್ಲಿ ಭಾರತ ಮತ್ತು ರಷ್ಯಾ ಸುಮಾರು 40 ಸಾವಿರ ಕೋಟಿ ಮೌಲ್ಯದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಿವೆ. ಈ ಒಪ್ಪಂದದ ಪ್ರಕಾರ, ಭಾರತಕ್ಕೆ 5 ಎಸ್-400 ಟ್ರಯಂಫ್ ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಂಗಳು ಬರಲಿವೆ. ಎಸ್-400 ಟ್ರಯಂಫ್ ಕ್ಷಿಪಣಿಗಳು ನಾಲ್ಕನೇ ತಲೆಮಾರಿನ ಯುದ್ಧಾಸ್ತ್ರವಾಗಿದ್ದು, ತನ್ನ ವರ್ಗದಲ್ಲಿ ವಿಶ್ವದ ಅತ್ಯುತ್ತಮ ಕ್ಷಿಪಣಿ ಭಂಜಕವೆಂದು ಖ್ಯಾತಿಗಳಿಸಿದೆ.
ಚೀನಾದ ಬಳಿಯೂ ಇದೆ ಎಸ್400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ
ಇನ್ನು ಭಾರತ ಮಾತ್ರವಲ್ಲದೇ ರಷ್ಯಾದ ಈ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯನ್ನು ನೆರೆಯ ಚೀನಾ ದೇಶ ಕೂಡ ಈಗಾಗಲೇ ಖರೀದಿಸಿದ್ದು, 2014ರಲ್ಲೇ ಚೀನಾ ಸುಮಾರು 3 ಬಿಲಿಯನ್ ಡಾಲರ್ ವೆಚ್ಚದಲ್ಲಿ ಎಸ್-400 ಟ್ರಯಂಫ್ ಮಿಸೈಲ್ ಸಿಸ್ಟಮ್ ಅನ್ನು ಖರೀದಿಸಿದೆ. 2017ರ ವೇಳೆಗೆ ಚೀನಾ ಸೇನೆಗೆ ಈ ಕ್ಷಿಪಣಿಗಳು ಸೇರ್ಪಡೆಯಾಗಲಿರುವ ಸಾಧ್ಯತೆ ಇದೆ.
ಎಸ್-400 ಟ್ರಯಂಫ್ ಕ್ಷಿಪಣಿ ವಿಶೇಷತೆ ಏನು?
ಯುದ್ಧವಿಮಾನ, ಸ್ಟೀಲ್ತ್ ಫೈಟರ್ ಜೆಟ್, ಕ್ಷಿಪಣಿ, ಡ್ರೋನ್ ಹೀಗೆ ಯಾವುದೇ ವಾಯು ದಾಳಿಯನ್ನು ಯಶಸ್ವಿಯಾಗಿ ತಡೆದು ನಾಶ ಮಾಡುವ ಸಾಮರ್ಥ್ಯ ರಷ್ಯಾದ ಈ ಎಸ್-400 ಟ್ರಯಂಫ್ ಮಿಸೈಲ್ ಸಿಸ್ಟಂನಲ್ಲಿದೆ. ಇದರ ವ್ಯಾಪ್ತಿ ಸುಮಾರು 400 ಕಿ.ಮೀ.ವರೆಗೂ ಇದ್ದು, ಈ ಕ್ಷಿಪಣಿ ಮೂಲಕ ತನ್ನ ವಾಯು ಗಡಿಭಾಗವನ್ನು ರಕ್ಷಿಸಿಕೊಳ್ಳಲು ಭಾರತಕ್ಕೆ ಸರಿಯಾದ ಶಕ್ತಿ ದೊರೆದಂತಾಗಿದೆ. ಭಾರತದ ಕಡೆಗೆ ವೈರಿ ದೇಶಗಳಾದ ಚೀನಾ ಅಥವಾ ಪಾಕಿಸ್ತಾನದಿಂದ ವಾಯುದಾಳಿ ನಡೆಯಿತೆನ್ನಿ. ಆ ಕಡೆಯಿಂದ ತೂರಿ ಬರುವ ಕ್ಷಿಪಣಿ ಅಥವಾ ವಿಮಾನಗಳನ್ನು ಹೊಡೆದುರುಳಿಸುವ ಶಕ್ತಿ ಭಾರತಕ್ಕೆ ಲಭಿಸಿದಂತಾಗುತ್ತದೆ. ಈ ಐದು ಮಿಸೈಲ್ ಸಿಸ್ಟಂಗಳ ಪೈಕಿ ಭಾರತೀಯ ಸೇನೆ ಮೂರನ್ನು ಪಾಕ್ ಗಡಿಭಾಗದತ್ತ, ಹಾಗೂ ಉಳಿದ ಎರಡನ್ನು ಚೀನಾ ಗಡಿಭಾಗದತ್ತ ನಿಯೋಜಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.