ಕರ್ನಾಟಕ

ದರೋಡೆಗೆ ಹೊಂಚು ಹಾಕಿದ್ದ ರೌಡಿ ಭರತ್, ಸಹಚರರ ಸೆರೆ

Pinterest LinkedIn Tumblr

arres

ಬೆಂಗಳೂರು, ಡಿ.19: ದರೋಡೆಗೆ ಹೊಂಚು ಹಾಕುತ್ತಿದ್ದ ರೌಡಿ ಭರತ್ ಹಾಗೂ ಆತನ ಐವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಗೋಪಾಲನಗರ ಬಸಪ್ಪನಕಟ್ಟೆ ನಿವಾಸಿ ಕುಖ್ಯಾತ ರೌಡಿ ಭರತ್‌ಕುಮಾರ್ ಅಲಿಯಾಸ್ ಭರತ್ ಅಲಿಯಾಸ್ ಸ್ಲಂ ಭರತ್ (27) ಈತ ಸಹಚರರಾದ ಲಗ್ಗೆರೆಯ ಮಧು (23), ಬಸಪ್ಪನ ಕಟ್ಟೆಯ ಈಶ್ವರ ಅಲಿಯಾಸ್ ಜುಟ್ಟು (29), ರಾಜಗೋಪಾಲನಗರದ ಗೋಪಿ (24), ಚಂದ್ರಶೇಖರ್ ಅಲಿಯಾಸ್ ಗಠಾಯಿ (21) ಮತ್ತು ರಮೇಶ್ ಅಲಿಯಾಸ್ ಕುರ್‌ಕುರೆ ಬಂಧಿತರು.

ರಾಜರಾಜೇಶ್ವರಿ ನಗರ ಠಾಣೆ ವ್ಯಾಪ್ತಿಯ ಶ್ರೀನಿವಾಸಪುರ ಮುಖ್ಯರಸ್ತೆ ಬಳಿ ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಸಜ್ಜಾಗಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ 6 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಾಂಗ್, ಮಚ್ಚುಗಳು, ಚಾಕು, ಖಾರದಪುಡಿ ಪೊಟ್ಟಣ ವಶಪಡಿಸಿಕೊಂಡಿದ್ದು, ಈ ಸಂಬಂಧ ರಾಜರಾಜೇಶ್ವರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಭರತ್ ರಾಜಗೋಪಾಲನಗರ ಠಾಣೆಯ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಕೊಲೆ, ಹಲ್ಲೆ, ಕೊಲೆಯತ್ನ, ದರೋಡೆ ಯತ್ನ, ಪ್ರಾಣಬೆದರಿಕೆ, ದರೋಡೆ, ಅಪಹರಣ, ಡಕಾಯಿತಿ, ರಾಬರಿ ಪ್ರಕರಣಗಳು ದಾಖಲಾಗಿದ್ದು, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಧು ರಾಜಗೋಪಾಲನಗರ ಠಾಣೆಯ ರೌಡಿಪಟ್ಟಿಯಲ್ಲಿದ್ದು, ಈತನ ವಿರುದ್ಧ ಕೊಲೆ ಯತ್ನ, ದರೋಡೆಯತ್ನ, ದೊಂಬಿ ಗಲಾಟೆ ಪ್ರಕರಣಗಳು ದಾಖಲಾಗಿವೆ. ಆರೋಪಿ ಗೋಪಿ ವಿರುದ್ಧ ಪೀಣ್ಯ ಠಾಣೆಯಲ್ಲಿ ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿವೆ.

ಆರೋಪಿ ಚಂದ್ರಶೇಖರ್ ರಾಜಗೋಪಾಲನಗರ ಠಾಣೆಯ ರೌಡಿಪಟ್ಟಿಯಲ್ಲಿದ್ದು ಈತನ ವಿರುದ್ಧ ರಾಜಗೋಪಾಲನಗರ ಠಾಣೆಯಲ್ಲಿ ದರೋಡೆಯನ್ನು ಪ್ರಕರಣ ದಾಖಲಾಗಿದೆ. ಆರೋಪಿ ರಮೇಶನೂ ರಾಜಗೋಪಾಲನಗರ ಠಾಣೆಯ ರೌಡಿ ಪಟ್ಟಿಯಾಗಿದ್ದು ಈತನ ವಿರುದ್ಧ ದರೋಡೆಯನ್ನು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment