ಕರ್ನಾಟಕ

ಚುನಾವಣೆ ಪೂರ್ಣಗೊಳ್ಳುವವರೆಗೆ ಜನತಾ ಪರಿವಾರ ಒಗ್ಗೂಡುವಿಕೆ ಚರ್ಚೆ ಬೇಡ : ದೇವೇಗೌಡ

Pinterest LinkedIn Tumblr

Devegowda

ಬೆಂಗಳೂರು, ಡಿ.19: ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಮುಗಿಯುವವರೆಗೂ ಜನತಾ ಪರಿವಾರ ಒಗ್ಗೂಡುವಿಕೆ ಚರ್ಚೆ ಬೇಡ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈ ಬಗ್ಗೆ ಗೊಂದಲಕ್ಕೊಳಗಾಗುವುದು ಬೇಡ, ಈಗ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿ ಎಂದರು. ಜಿ.ಪಂ. ಮತ್ತು ತಾ.ಪಂ.ಚುನಾವಣೆಯಲ್ಲಿ ಎಡಪಕ್ಷಗಳಾದ ಬಿಎಸ್‌ಪಿ, ಸಿಪಿಐ ಮತ್ತು ಸಿಪಿಎಂ ಜೊತೆ ಸೀಟು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿದರು.

ಅದೇ ರೀತಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಈ ಮೂರೂ ಪಕ್ಷಗಳ ಜೊತೆ ಚುನಾವಣಾ ಮೈತ್ರಿ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ಕೇರಳದಲ್ಲಿ ಇನ್ನು 90 ದಿನಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದ್ದು ಆ ಸಂದರ್ಭದಲ್ಲಿ ನಮ್ಮ ಪಕ್ಷ ಎಡಪಂಥೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿ.ಪಂ. ಮತ್ತು ತಾ.ಪಂ.ಚುನಾವಣೆ ನಂತರ ಜನತಾ ಪರಿವಾರ ಒಗ್ಗೂಡುವಿಕೆಗೆ ಚಾಲನೆ ದೊರೆಯಲಿದೆ. ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಐಕ್ಯತೆಯಿಂದ ಚುನಾವಣೆ ನಡೆಸಬೇಕು. ಜನವರಿ ಮೊದಲ ವಾರದಲ್ಲಿ ಜಿ.ಪಂ. ಮತ್ತು ತಾ.ಪಂ.ಚುನಾವಣೆಗಳ ಅಧಿಸೂಚನೆ ಹೊರಬೀಳಲಿದ್ದು ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಬೇಕಿದೆ ಎಂದು ಹೇಳಿದರು.

Write A Comment