ನವದೆಹಲಿ: ಸುಬ್ರಮಣ್ಯಂ ಸ್ವಾಮಿ ಮೂಲಕ ಬಿಜೆಪಿ ಕಾಂಗ್ರೆಸ್ಸಿಗರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಗುಲಾಂನಬಿ ಆಜಾದ್ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುಲಾಂನಬಿ ಅವರು, ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲು ಸುಬ್ರಮಣ್ಯಂ ಸ್ವಾಮಿ ಅವರಿಗೆ ಕೇಂದ್ರ ಸರ್ಕಾರ, ಪ್ರಧಾನಿ ಹಾಗೂ ಸಚಿವರುಗಳ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಬ್ರಮಣ್ಯಂ ಸ್ವಾಮಿ ಅವರು ಸಂಸದರಲ್ಲ. ಭಯೋತ್ಪಾದನೆ ಸಂಘಟನೆ ವಿರುದ್ಧ ಹೋರಾಡಿಲ್ಲ ಅಂತವರಿಗೆ ಕೇಂದ್ರ ಸರ್ಕಾರ ಸರ್ಕಾರಿ ಬಂಗಲೆ ಹಾಗೂ ಝಡ್ ಶ್ರೇಣಿಯ ಭದ್ರತೆ ನೀಡಿದೆ ಎಂದರು.
ಬಿಜೆಪಿ ಸಂಸದರು ಸ್ವಾಮಿ ಹಿಂದೆ ಇರುವ ಬಗ್ಗೆ ಕಾಂಗ್ರೆಸ್ ಪಕ್ಷ ಹಾಗೂ ದೇಶಕ್ಕೆ ಮೊದಲಿನಿಂದಲೂ ಸಂಶಯವಿತ್ತು. ಅದು ಹೀಗಾ ಸಾಭೀತಾಗಿದೆ ಎಂದು ಆಜಾದ್ ಹೇಳಿದ್ದಾರೆ.
ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?
ನ್ಯಾಷನಲ್ ಹೆರಾಲ್ಡ್ ಎನ್ನುವುದು ಒಂದು ಇಂಗ್ಲಿಷ್ ದಿನಪತ್ರಿಕೆ. 1938 ಸೆ.9ರಂದು ಈ ಪತ್ರಿಕೆ ಲಖನೌನಲ್ಲಿ ಆರಂಭಗೊಂಡಿದ್ದು, ಜವಾಹರಲಾಲ್ ನೆಹರೂ ಅವರು ಆರಂಭಿಸಿದ್ದರು. ಕಾಂಗ್ರೆಸ್ ಪಕ್ಷದ ಮಾಲಕತ್ವದಲ್ಲಿ ಈ ಪತ್ರಿಕೆ ಹೊರಬರುತ್ತಿತ್ತು. ಜೊತೆಗೆ ಹಿಂದಿಯಲ್ಲಿ ನವಜೀವನ್, ಮತ್ತು ಉರ್ದುವಿನಲ್ಲಿ ಕ್ವಾಮಿ ಆವಾಜ್ ಎಂಬ ಸೋದರಿ ಪತ್ರಿಕೆಯೂ ಇತ್ತು. 2008ರಲ್ಲಿ ನ್ಯಾಷನಲ್ ಹೆರಾಲ್ಡ್ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ಅದಕ್ಕೂ ಮುನ್ನ 1940ರಿಂದ 1979ರವರೆಗೆ ಇದು ಕಾರ್ಯಾಚರಿಸುತ್ತಿರಲಿಲ್ಲ. 2008ರಲ್ಲಿ ಕೊನೆಗೆ ಉಳಿದಿದ್ದ ದೆಹಲಿ ಆವೃತ್ತಿ ಕೂಡ ನಿಂತು ಹೋಗಿತ್ತು. ಪತ್ರಿಕೆ ಸಂಪೂರ್ಣ ಸ್ಥಗಿತವಾಗುವ ಮುನ್ನ ಅದರ ಆಡಳಿತವನ್ನು ನೋಡಿಕೊಳ್ಳುತ್ತಿದ್ದುದು ಅಸೋಸಿಯೇಟೆಡ್ ಜರ್ನಲ್ ಲಿ (ಎಜೆಎಲ್). ಬಳಿಕ ಇದು ರಿಯಲ್ ಎಸ್ಟೇಟ್ ಕಂಪನಿಯಾಗಿ ಬದಲಾಗಿತ್ತು. ಪತ್ರಿಕೆ ಸ್ಥಗಿತವಾಗುವ ವೇಳೆ ಅದರ ಮೇಲೆ 90 ಕೋಟಿ ರು. ಸಾಲದ ಹೊರೆ ಇತ್ತು. ಜೊತೆಗೆ ಪತ್ರಿಕೆಗೆ ದೆಹಲಿ, ಲಖನೌ ಮುಂಬೈಗಳಲ್ಲಿ ಆಸ್ತಿ ಇತ್ತು.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಒಡೆತನದ ಯಂಗ್ ಇಂಡಿಯನ್ ಎಂಬ ಸಂಸ್ಥೆಯು ಅಸೋಸಿಯೇಟೆಡ್ ಜರ್ನಲ್ಸ್ ಕಂಪನಿಯನ್ನು(ಎಜೆ) ಖರೀದಿ ಮಾಡಿದೆ. ಈ ಮೂಲಕ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಎಜೆಗೆ ಸೇರಿದ ಆಸ್ತಿಗಳೂ ಯಂಗ್ ಇಂಡಿಯನ್ ಕಂಪನಿಯ ಪಾಲಾಗಿವೆ. ಸುಬ್ರಮಣಿಯನ್ ಸ್ವಾಮಿ ಮಾಡುತ್ತಿರುವ ಆರೋಪವೇನೆಂದರೆ, ಪತ್ರಿಕೆಯನ್ನು ನಡೆಸುವ ಉದ್ದೇಶದಿಂದ ಈ ಸ್ಥಳಗಳನ್ನು ಅಸೋಸಿಯೇಟೆ ಜರ್ನಲ್ಸ್ ಕಂಪನಿಗೆ ನೀಡಲಾಗಿತ್ತು. ಆದರೆ, ಸೋನಿಯಾ ಮತ್ತು ರಾಹುಲ್ ಗಾಂಧಿ ಈ ಸ್ಥಳಗಳನ್ನು ಪತ್ರಿಕೆ ನಡೆಸುವ ಬದಲಾಗಿ ವಾಣಿಜ್ಯಾತ್ಮಕ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಸ್ವಾಮಿಯ ಮತ್ತೊಂದು ದೂರೆಂದರೆ, ಕಾಂಗ್ರೆಸ್ ಪಕ್ಷದ ನಿಧಿಯಿಂದ 90 ಕೋಟಿ ರೂಪಾಯಿ ಹಣವನ್ನು ಅಸೋಸಿಯೇಟೆಡ್ ಜರ್ನಲ್ಸ್ ಕಂಪನಿಗೆ ಶೂನ್ಯ ಬಡ್ಡಿದರದಲ್ಲಿ ಹಣ ವರ್ಗಾಯಿಸಲಾಗಿದೆ. ಇವೆಲ್ಲವೂ ಕಾನೂನು ಬಾಹಿರ ಎಂದು ಬಿಜೆಪಿ ಮುಖಂಡರು ಆಪಾದಿಸಿದ್ದರು.