ಬೆಂಗಳೂರು: ದೆಹಲಿಯ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ 3 ವರ್ಷ ಶಿಕ್ಷೆ ಪೂರ್ಣಗೊಳಿಸಿರುವ ಬಾಲಾಪರಾಧಿ ಬಿಡುಗಡೆಯನ್ನು ವಿರೋಧಿಸಿರುವ ಜ್ಯೋತಿಸಿಂಗ್ ಪೋಷಕರು ಭಾನುವಾರ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಬಾಲಾಪರಾಧಿ ಬಿಡುಗಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅತ್ಯಾಚಾರಕ್ಕೊಳಗಾದ ಜ್ಯೋತಿ ಸಿಂಗ್ ಪೋಷಕರು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದು, ಇದೇ ತೀರ್ಪು ರಾಜಕಾರಣಿಗಳ ಮಗಳ ಮೇಲೆ ಆಗಿದ್ದರೆ ಬರುತ್ತಿತ್ತಾ. ಜನಪ್ರತಿನಿಧಿಗಳ ಮಗಳ ಮೇಲೆ ಅತ್ಯಾಚಾರವಾಗಿದ್ದರೆ ತೀರ್ಪು ಬೇರೆಯದ್ದೇ ಆಗುತ್ತಿತ್ತು. ಕಳೆದ ಮೂರು ವರ್ಷಗಳಿಂದಲೂ ನಾವು ಪ್ರತಿಭಟನೆ ನಡೆಸುತ್ತಲೇ ಬಂದಿದ್ದೇವೆ. ಬೀದಿ ಬೀದಿಗಳಲ್ಲಿ ಪ್ರತಿಭಟನೆ ಮಾಡುತ್ತಾ ಬಂದಿದ್ದೇವೆ. ಆದರೆ, ನಮ್ಮ ಪ್ರತಿಭಟನೆಗೆ ನ್ಯಾಯ ದೊರಕಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಧಾನಮಂತ್ರಿ ಮೋದಿ ವಿರುದ್ಧ ಕಿಡಿಕಾರಿರುವ ಅವರು, ವಿದೇಶಕ್ಕೆ ಹೋಗಿ ಯೋಗ ಹೇಳಿಕೊಡುವ ಮೋದಿಗೆ ನಮ್ಮ ದೇಶದಲ್ಲಿ ಏನಾಗುತ್ತಿದೆ ಎಂದು ಗೊತ್ತಿಲ್ವ. ಎಲ್ಲಾ ತಿಳಿದಿದ್ದರೂ ಅದನ್ನು ಲೆಕ್ಕಿಸದೆ ಮೋದಿಯವರು ವಿದೇಶಕ್ಕೆ ಹೋಗುತ್ತಿದ್ದಾರೆ. ಮೋದಿಯವರು ಭರವಸೆ ನೀಡಿದ್ದಾರೆಯೇ ಹೊರತು ಯಾವುದನ್ನೂ ಈಡೇರಿಸಿಲ್ಲ. ನಮಗಾಗಿರುವ ಅನ್ಯಾಯಕ್ಕೆ ಹೊಣೆ ಯಾರು ಎಂದು ಹೇಳಿದ್ದಾರೆ.
ಬಾಲಾಪರಾಧಿ ಬಿಡುಗಡೆ ತೀರ್ಪು ನಮಗೆ ಜೀವನವಿಡೀ ದುಖಃವನ್ನುಂಟು ಮಾಡಲಿದೆ. ಇಷ್ಟಕ್ಕೆ ನಾವು ಬಿಡುವುದಿಲ್ಲ. ಆಂದೋಲನ ನಡೆಸುತ್ತೇವೆ. ತೀರ್ಪು ವಿರೋಧಿಸಿ ಇಂದು ಕೂಡ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಜ್ಯೋತಿ ಸಿಂಗ್ ತಾಯಿ ಆಶಾದೇವಿ ಹೇಳಿದ್ದಾರೆ.