ಕನ್ನಡ ವಾರ್ತೆಗಳು

ಜನನುಡಿ-2015 : ವೌಢ್ಯಾಚರಣೆ ಮತ್ತು ಮತೀಯ ಅಸಹಿಷ್ಣುತೆ ಕುರಿತು ವಿಚಾರಗೋಷ್ಠಿ

Pinterest LinkedIn Tumblr

Jananudi_vichara_gosti_1

ಮಂಗಳೂರು, ಡಿ.21: ಯಾವ ವಿಚಾರಗಳು, ಯಾವ ಮೂಢ ನಂಬಿಕೆಗಳು ಸಮಾಜವನ್ನು ತನ್ನ ಹಿಡಿತದಲ್ಲಿಟ್ಟಿದೆಯೋ ಅದರ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ಚಿಂತಕ ಪ್ರೊ.ಬಿ.ಗಂಗಾಧರ ಮೂರ್ತಿ ಹೇಳಿದರು.

ಅವರು ಬಾನುವಾರ ನಗರದ ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ನಡೆದ ‘ಜನನುಡಿ-2015’ರಲ್ಲಿ ‘ವೌಢ್ಯಾ ಚರಣೆ ಮತ್ತು ಮತೀಯ ಅಸಹಿಷ್ಣುತೆ’ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಇಂದು ವೈದಿಕ ನೆಲೆಯ ಮೇಲೆ ದೇಶದ ರಾಜಕೀಯ ಶಕ್ತಿ ನಿಂತಿದೆ. ಪ್ರಸಕ್ತ ವೈದಿಕ ಪರಂಪರೆ ನಿಂತಿರುವುದು ಪುರಾಣ ಮತ್ತು ಮೂಢನಂಬಿಕೆಗಳ ಮೇಲೆ. ವೈದಿಕ ವಿಚಾರಗಳನ್ನು ಇಂದು ಶಿಕ್ಷಣದಲ್ಲಿ ತುರುಕಿಸಲಾಗುತ್ತಿದೆ. ಅವೈದಿಕ ಆಚಾರ-ವಿಚಾರಗಳನ್ನು ಹೇಳುವ ಜೊತೆಗೆ ಆಚರಿಸಿದರೆ ವೌಢ್ಯತೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವೌಢ್ಯತೆ, ಅಸಹಿಷ್ಣುತೆಯ ವಿರುದ್ಧ ಅವೈದಿಕವಾದ ವಿಚಾರಗಳನ್ನು ಪಾಲಿಸುತ್ತಾ ಉತ್ತರ ನೀಡಬೇಕಾಗಿದೆ. ಬುದ್ಧನಿಂದ ಆರಂಭವಾಗಿ ಅಂಬೇಡ್ಕರ್‌ರವರೆಗೂ ಮುಂದುವರಿದ ವಿಚಾರವನ್ನು ಆಚರಣೆಗೆ ತರುವ ಮೂಲಕ ಹೊಸಯುಗವನ್ನು ರಚಿಸಬೇಕಾಗಿದೆ ಎಂದು ಹೇಳಿದರು.

ವಿಚಾರಗೋಷ್ಠಿಯಲ್ಲಿ ವಿಚಾರಮಂಡನೆ ಮಾಡಿದ ಹಿರಿಯ ಪತ್ರಕರ್ತ ಶಶಿಧರ್ ಭಟ್ ಮಾತನಾಡಿ, ಎಲ್ಲ ಧರ್ಮಸಂಘಟನೆ ಗಳು ಏಕಕಾಲದಲ್ಲಿ ಎರಡು ರೀತಿಯ ಕೆಲಸಗಳನ್ನು ಮಾಡುತ್ತಿರು ತ್ತವೆ. ಧರ್ಮವನ್ನು ಅನುಸರಿಸುವವರನ್ನು ಒಗ್ಗೂಡಿಸುತ್ತವೆ ಮತ್ತು ಧರ್ಮವನ್ನು ಒಪ್ಪದವರನ್ನು ಪ್ರತ್ಯೇಕಿಸುತ್ತವೆ. ಧರ್ಮವು ಯಾವತ್ತಿಗೂ ನಿಂತ ನೀರಾಗದೆ ಆಯಾ ಕಾಲಕ್ಕೆ ತಕ್ಕಂತೆ ಬದಲಾವಣೆ ಯಾದರೆ ಜನವಿರೋಧಿಯಾಗುವುದಿಲ್ಲ. ಎಲ್ಲ ಧರ್ಮಗಳು ಆಯಾ ದೇಶದ ಸಂವಿಧಾನವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.

ವಿಚಾರಮಂಡನೆ ಮಾಡಿದ ಮಹಿಳಾ ಹೋರಾಟಗಾರ್ತಿ ಕೆ.ಎಸ್. ವಿಮಲಾ ಮಾತನಾಡಿ, ಯುವಜನರಲ್ಲಿ ವೌಢ್ಯವನ್ನು ತುಂಬಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಯುವಜನರ ಮೆದುಳಿನಲ್ಲಿ ವೌಢ್ಯವನ್ನು ತುಂಬಲಾಗುತ್ತಿದ್ದು, ಇದರಿಂದ ದೇಶದ ಮೆದುಳಿಗೂ ಸೋಂಕು ತಗಲಿದೆ. ದೇಶದ ಜನರಲ್ಲಿ ವೌಢ್ಯವನ್ನು ಬಿತ್ತುತ್ತಾ ಅಸಹಿಷ್ಣುತೆಯನ್ನು ಸೃಷ್ಟಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಚಿಂತಕ ಹುಲಿಕುಂಟೆ ಮೂರ್ತಿ ಮಾತನಾಡಿ, ಪ್ರತಿಭೆ ಇದ್ದರೂ ದಲಿತರಿಗೆ ಎಲ್ಲ ರಂಗದಲ್ಲೂ ಅವಕಾಶ ನೀಡದಿರುವುದು ಕೂಡ ವೌಢ್ಯವಾಗಿದೆ. ದಲಿತರಿಂದ ಯಾವುದೂ ಸಾಧ್ಯವಿಲ್ಲ ಎಂಬ ಭಾವನೆಯಲ್ಲಿ ನೋಡುವುದು ಕೂಡ ವೌಢ್ಯವಾಗಿದೆ. ಮಾದಪ್ಪನ ಪೂಜೆಯಲ್ಲಿ ಪ್ರಸಾದವಾಗಿ ಬಳಸುತ್ತಿದ್ದ ಗೋಮಾಂಸ ತಿನ್ನುವುದು ವೌಢ್ಯವೆಂದು ಹೇಳುವವರು, ವೌಢ್ಯ ನಿಷೇಧ ಪ್ರತಿಬಂಧಕ ಕಾಯ್ದೆ ಬಂದಾಗ ಅದನ್ನು ವಿರೋಧಿಸುತ್ತಾರೆ ಎಂದು ಹೇಳಿದರು. ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ವರದಿ ಕೃಪೆ : ವಾಭಾ

Write A Comment