ಮನೋರಂಜನೆ

ಬಾಜಿರಾವ್‌ ಮಸ್ತಾನಿ: ವಿನ್ಯಾಸಿತ ನಾಟಕ

Pinterest LinkedIn Tumblr

mastani–ವಿಶಾಖ ಎನ್‌.
ಚಿತ್ರ:
ಬಾಜಿರಾವ್‌ ಮಸ್ತಾನಿ
ತಾರಾಗಣ:
ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ತನ್ವಿ ಆಜ್ಮಿ ಮತ್ತಿತರರು.
ನಿರ್ದೇಶನ:
ಸಂಜಯ್‌ ಲೀಲಾ ಭನ್ಸಾಲಿ
ನಿರ್ಮಾಪಕರು:
ಕೃಷಿಕ್‌ ಲಲ್ಲ, ಸಂಜಯ್‌ ಲೀಲಾ ಭನ್ಸಾಲಿ

ವಿಷಾದ ರಾಗವನ್ನೂ ಸುಂದರವಾಗಿ ಕೇಳಿಸುವ ‘ಕಾಸ್ಮೆಟಿಕ್‌ ಕಾಲ’ ಇದು. ಸಂಜಯ್‌ ಲೀಲಾ ಭನ್ಸಾಲಿ ಕೂಡ ಕಾಲಕ್ಕೆ ತಕ್ಕಂತೆ ಹೆಜ್ಜೆ ಇಟ್ಟಿದ್ದಾರೆ. ಇತಿಹಾಸದ ವಸ್ತುವಿಗೆ ಸುವರ್ಣ ಚೌಕಟ್ಟು ತೊಡಿಸಿ, ವಿಷಾದದ ಗೆರೆಗಳ ದರ್ಶನ ಮಾಡಬೇಕಾದ ಪಾತ್ರಗಳಿಗೆ ಸಹಜ ಪ್ರಸಾಧನ ಮಾಡಿಸಿ ‘ಚೆಂದದ’ ಸಿನಿಮಾ ಮಾಡಿದ್ದಾರೆ. ಹೊಳಪಿನಲ್ಲಿ ಕಳೆದುಹೋಗುವುದೇ ಹೆಚ್ಚು ಅಲ್ಲವೇ? ಹಾಗಾಗಿ ಈ ಸಿನಿಮಾ ಕಾಡುವುದಿಲ್ಲ.

ಎನ್‌.ಎಸ್‌. ಇನಾಂದಾರ್‌ ಬರೆದ ಇದೇ ಹೆಸರಿನ ಕಾದಂಬರಿಯನ್ನು ಓದಿಕೊಂಡ ಭನ್ಸಾಲಿ ಅದನ್ನು ಸಿನಿಮಾ ಮಾಡುವ ಆಸೆ ಮೂಡಿಸಿಕೊಂಡು ಹನ್ನೆರಡು ವರ್ಷಗಳಾಗಿವೆ. ಅವರು ಚಿತ್ರಕಥೆಯ ಅದೆಷ್ಟು ಕರಡುಗಳನ್ನು ಬರೆದಿದ್ದಾರೋ ಬರೆಸಿದ್ದಾರೋ? ಹಾಗಿದ್ದಮೇಲೆ ಚಿತ್ರಕಥೆ ಬಲುಗಟ್ಟಿ ಆಗಬೇಕಿತ್ತು. ಆದರೆ, ಇಡೀ ಸಿನಿಮಾದ ದೃಶ್ಯಗಳು ವಿನ್ಯಾಸಗೊಳಿಸಿದ ನಾಟಕದ ರೂಹನ್ನು ತುಳುಕಿಸುತ್ತವೆಯೇ ವಿನಾ ದಾಟಿಸಲೇಬೇಕಿದ್ದ ಭಾವವನ್ನು ಅನಾವರಣಗೊಳಿಸುವುದಿಲ್ಲ.

ಐತಿಹಾಸಿಕ ಪಾತ್ರ ಎಂದಮೇಲೆ ಅದಕ್ಕೆ ಹಲವು ಸಾಧ್ಯತೆಗಳು ಒದಗಿಬರುತ್ತವೆ. ಪೇಶ್ವೆ ಬಾಜೀರಾವ್ ಪರಾಕ್ರಮಿ. ಆದ್ದರಿಂದ ಯುದ್ಧದ ಸನ್ನಿವೇಶಗಳ ರೋಮಾಂಚನವನ್ನು ದಟ್ಟವಾಗಿಸುವ ಸಾಧ್ಯತೆ ಇದೆ. ಭನ್ಸಾಲಿ ಅವರಿಗೆ ಇದು ಮುಖ್ಯ ಆಗಿಲ್ಲ. ಮುಸ್ಲಿಂ ರಾಜಕುಮಾರಿ ಮಸ್ತಾನಿ ಹಾಗೂ ಬಾಜಿರಾವ್‌ ಪ್ರೇಮ ಕಥಾನಕದ ಚುಂಗಷ್ಟೇ ಅವರಿಗೆ ಸಾಕು. ಯಾಕೆಂದರೆ, ಭಿನ್ನ ಧರ್ಮೀಯರ ನಡುವಿನ ಪ್ರೇಮ ಕಥಾನಕ ಸಾರ್ವಕಾಲಿಕ ‘ಸೂತ್ರ’.
ತಾಲೀಮಿಗೆ ಒಳಪಟ್ಟ ಸಕಲೇಷ್ಟ ಸುಳಿವನ್ನು ಎಲ್ಲಾ ಪಾತ್ರಗಳು ಉಳಿಸುವುದು ಸಿನಿಮಾದ ಇನ್ನೊಂದು ಲೋಪ. ಅಭಿನಯದಲ್ಲಿ ಎಲ್ಲರದ್ದೂ ಪ್ರಜ್ಞಾಪೂರ್ವಕ ನಿಲುವು. ಬಾಜಿರಾವ್‌ ತಾಯಿಯ ಪಾತ್ರದಲ್ಲಿ ತನ್ವಿ ಆಜ್ಮಿ ಮಾತನಾಡುವ ಲಯ ಇದಕ್ಕೆ ಒಳ್ಳೆಯ ಉದಾಹರಣೆ.

ಮೊದಲರ್ಧದಲ್ಲಿ ಅಂಜು ಮೋದಿ ವಿನ್ಯಾಸದ ವಸ್ತ್ರಗಳು, ದೆಹಲಿಯ ಶ್ರೀ ಹರಿ ಡಯಾಜೆಮ್ಸ್‌ ಅಂಗಡಿಯವರು ಮಾಡಿಕೊಟ್ಟ ಒಡವೆಗಳ ಜಾಹೀರಾತು ಪ್ರದರ್ಶನದಂತೆ ದೃಶ್ಯಗಳು ಕಂಡರೂ ಅವು ಸಿನಿಮಾದ ಚೌಕಟ್ಟಿನ ಒಳಗೇ ಇರುತ್ತವೆ. ಸಂದಿಗ್ಧ ಸ್ಥಿತಿಯಲ್ಲೂ ಹಾಡು ತುಳುಕಿಸುವ, ಒಂದೇ ದಿನದಲ್ಲಿ ಸಹ ನೃತ್ಯಗಾರ್ತಿಯರ ಜೊತೆಗೆ ಒಂದೇ ಲಯದಲ್ಲಿ ವರ್ತಿಸುವ ಮಸ್ತಾನಿ ಪಾತ್ರಕ್ಕೆ ದೀಪಿಕಾ ಪಡುಕೋಣೆ ನ್ಯಾಯ ಸಲ್ಲಿಸಿದ್ದಾರೆ. ತರ್ಕ ಮೀರಿದ ನಿರ್ದೇಶಕ ಭನ್ಸಾಲಿ ಎನ್ನುವುದಕ್ಕೆ ಇದು ಉದಾಹರಣೆ.

ಹಾಡುಗಳನ್ನೇ ಪ್ರತ್ಯೇಕವಾಗಿ ಗಮನಿಸಿದರೆ ಅವು ಸೊಗಸಾಗಿವೆ. ಸಂಚಿತ್‌ ಬಲ್ಹರ ಹಾಕಿರುವ ಮಟ್ಟುಗಳ ಹೆಚ್ಚುಗಾರಿಗೆ ಇದು. ‘ದಿವಾನಿ ಹೋಗಯಿ’ ಹಾಡಿನ ಶ್ರೇಯಾ ಕಂಠಕ್ಕೆ ಸಿನಿಮಾಗಿಂತ ಹೆಚ್ಚು ಕಾಡುವ ಗುಣವಿದೆ.

ರಣವೀರ್‌ ಸಿಂಗ್‌ ಕಷ್ಟಪಟ್ಟಿದ್ದಾರೆ. ಅವರ ಪಾತ್ರದ ಆಂಗಿಕ ಭಾಷೆಯಲ್ಲಿ ಅತಿಯಾದ ನಿಯಂತ್ರಣ, ಉತ್ಪ್ರೇಕ್ಷಿತ ಚಲನೆಗಳಿವೆ. ದೀಪಿಕಾ ಕಂಗಳಲ್ಲಿ ಬೆಳದಿಂಗಳು. ಪ್ರಿಯಾಂಕಾ ಚೋಪ್ರಾ ಅವರದ್ದು ಎಂದಿನ ಶ್ರದ್ಧೆ. ಸುದೀಪ್‌ ಚಟರ್ಜಿ ಛಾಯಾಗ್ರಾಹಣದ ಹದ ಸಿನಿಮಾದ ಗಮನಾರ್ಹ ಅಂಶಗಳಲ್ಲಿ ಒಂದು.

ಐತಿಹಾಸಿಕ ವಸ್ತುವೊಂದನ್ನು ದುರಂತ ಪ್ರೇಮ ಕಥಾನಕವಾಗಿ ಬಟ್ಟಿ ಇಳಿಸಿ, ಬೋಧನೆಯ ಬಿಂದುವಿಗೆ ತಂದು ನಿಲ್ಲಿಸಿದ್ದಾರೆ ಭನ್ಸಾಲಿ. ಅವರ ಭಾವಕಠಾರಿ ಮೊಂಡಾಗಿದೆ ಎನ್ನಲು ಇಷ್ಟು ಸಾಕಲ್ಲವೇ?

Write A Comment