ಮನೋರಂಜನೆ

ಪ್ರೇಮ ಪಲ್ಲಕ್ಕಿ: ಪಲ್ಲಕ್ಕಿಯಿಂದ ಬಿದ್ದ ‘ಪ್ರೇಮ’

Pinterest LinkedIn Tumblr

prema–ಆನಂದತೀರ್ಥ ಪ್ಯಾಟಿ
ಚಿತ್ರ:
ಪ್ರೇಮ ಪಲ್ಲಕ್ಕಿ
ತಾರಾಗಣ:
ವಿಕ್ರಮ್, ಅಶ್ವಿನಿ ಚಂದ್ರಶೇಖರ್, ಅನಂತನಾಗ್, ಭವ್ಯಾ, ರಮೇಶ್‌ ಭಟ್, ಅಚ್ಯುತ ಕುಮಾರ್ ಇತರರು
ನಿರ್ದೇಶನ:
ಸುಧಾಕರ್ ಶೆಟ್ಟಿ
ನಿರ್ಮಾಪಕರು:
ಎಚ್.ಎನ್. ಗಂಗಾಧರ್

ಮಾತು ಕೇಳದ ಮಗಳನ್ನು ಪಾಲಕರು ತಿಂಗಳುಗಟ್ಟಲೇ ಗೃಹಬಂಧನದಲ್ಲಿಟ್ಟಿದ್ದ ಪ್ರಕರಣ ಕೆಲ ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಪ್ರೇಮಿಗಳಿಬ್ಬರೂ ಮರ ಸುತ್ತುವ ಹಳೇ ಕಥೆಯನ್ನಿಟ್ಟುಕೊಂಡೇ ಸಿನಿಮಾ ಮಾಡುವ ಗಾಂಧಿನಗರಕ್ಕೆ ಈ ಘಟನೆ ಸಾಮಾನ್ಯವೇ? ಹೀಗಾಗಿ, ಗೃಹ ಬಂಧನದ ಪ್ರಕರಣಕ್ಕೆ ಒಂದಷ್ಟು ರೆಕ್ಕೆಪುಕ್ಕ ಸೇರಿಸಿ ‘ಪ್ರೇಮ ಪಲ್ಲಕ್ಕಿ’ ತಯಾರಿಸಿದ್ದಾರೆ ನಿರ್ದೇಶಕ ಸುಧಾಕರ ಶೆಟ್ಟಿ. ಚಿತ್ರಕಥೆ ಗಟ್ಟಿಯಿಲ್ಲ; ಯಾಕೆಂದರೆ ಮೂಲ ಅಡಿಪಾಯವಾದ ಕಥೆ ಸಶಕ್ತವಾಗಿಲ್ಲ.

ಸಿನಿಮಾದ ಮುಕ್ಕಾಲು ಭಾಗವನ್ನು ಆವರಿಸುವುದು ಹಳ್ಳಿಯಲ್ಲಿ ನಡೆಯುವ ಕಥೆ. ರೈತನ ಮಗ ಪ್ರೇಮ್‌ (ವಿಕ್ರಮ್), ಪಲ್ಲವಿ(ಅಶ್ವಿನಿ)ಯನ್ನು ನೋಡಿದ ಮರುಕ್ಷಣವೇ ಆಕೆಯನ್ನು ಪ್ರೀತಿಸಲು ಶುರು ಮಾಡುತ್ತಾನೆ. ಆದರೆ ತನ್ನ ಪ್ರೀತಿಯನ್ನು ಹೇಳುವುದು ಅಷ್ಟು ಸುಲಭವಲ್ಲ ಎಂಬುದು ಗೊತ್ತಾಗುತ್ತದೆ. ಹಾಗೆಂದು ಆತ ಬಿಟ್ಟಾನೆಯೇ? ಪ್ರೇಮ ಪತ್ರ ಕೊಡುವುದರಲ್ಲೇ ಹೈರಾಣು ಆಗುತ್ತಾನೆ. ಆ ಪ್ರಯತ್ನವನ್ನು ಅರ್ಧ ಸಿನಿಮಾ ತಿಂದು ಹಾಕಿಬಿಡುತ್ತದೆ. ಆತ ತನ್ನ ಯತ್ನ ಕೈಬಿಡದಂತೆ ಮೂವರು ಆಪ್ತಸ್ನೇಹಿತರು ಪುಸಲಾಯಿಸುತ್ತಾರೆ. ಇನ್ನೇನು ಪ್ರೇಮ ಫಲಿಸಿತು ಎಂಬಷ್ಟರಲ್ಲಿ ದೊಡ್ಡ ತಿರುವು. ಪಲ್ಲವಿಯ ಗೃಹಬಂಧನ, ಪ್ರೇಮ್‌ನ ಕರಾಟೆ ಪ್ರೇಮ, ಅದರಲ್ಲಿ ಆತ ಚಾಂಪಿಯನ್‌ ಆಗುವುದು, ಗೃಹಬಂಧನದಿಂದ ಪಲ್ಲವಿಯನ್ನು ಪಾರು ಮಾಡುವುದು ಇತ್ಯಾದಿ ಇತ್ಯಾದಿ…

ಹಳೇ ಪ್ರೇಮಕಥೆಯನ್ನು ಹೊಸ ಶೈಲಿಯಲ್ಲಿ ಹೇಳಲು ನಿರ್ದೇಶಕರು ನಡೆಸಿದ ಪ್ರಯತ್ನ ಅಷ್ಟೊಂದು ಫಲ ಕೊಟ್ಟಿಲ್ಲ. ಈ ವೈಫಲ್ಯದಲ್ಲಿ ಸಂಕಲನಕಾರರ ಪಾತ್ರವೂ ಸಾಕಷ್ಟಿದೆ. ವಿದೇಶಿ ಕರಾಟೆ ಪಟುಗಳು ಭಾಗವಹಿಸುವ ಕರಾಟೆ ಸ್ಪರ್ಧೆ ಗಮನ ಸೆಳೆಯುವಂತಿದ್ದರೂ ಕಥೆಗೆ ಪೂರಕವಾಗಿಲ್ಲ. ಯುವಪೀಳಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಬರೆದ ಹಾಡುಗಳು (ಸಂಗೀತ: ವಿನೀತ್ ರಾಜ್) ಮತ್ತೊಮ್ಮೆ ಕೇಳುವಂತಿವೆ. ಹಳ್ಳಿಯ ಅಂದವನ್ನು ನಾಗಾರ್ಜುನ್ ಅವರ ಕ್ಯಾಮೆರಾ ಚೆನ್ನಾಗಿ ಸೆರೆಹಿಡಿದಿದೆ. ಕರಾಟೆ ಆಡಿದಷ್ಟು ಅಭಿನಯ ಸುಲಭವಲ್ಲ ಎಂಬುದು ವಿಕ್ರಮ್‌ ಅವರನ್ನು ನೋಡಿದಾಗ ಗೊತ್ತಾಗುತ್ತದೆ. ನಾಯಕಿ ಅಶ್ವಿನಿ ಅವರದೂ ಇದೇ ಕಥೆ. ಅನಂತನಾಗ್, ಭವ್ಯಾ, ರಮೇಶ್ ಭಟ್ ಹಾಗೂ ಅಚ್ಯುತಕುಮಾರ್ ಅವರಂಥ ಉತ್ತಮ ಕಲಾವಿದರ ದಂಡು ಚಿತ್ರದಲ್ಲಿದ್ದರೂ, ಅವರ ಪ್ರತಿಭೆ ವ್ಯರ್ಥವಾಗಿದೆ ಅನಿಸಿಬಿಡುತ್ತದೆ!

ಹಳ್ಳಿ ಬದುಕು, ಇಂದಿನ ಯುವಕರ ಮನಸ್ಥಿತಿ, ಕರಾಟೆ, ಪ್ರೇಮ, ಪಾಲಕರ ಹಠಮಾರಿತನ, ಗೃಹಬಂಧನ ಏನೆಲ್ಲ ‘ಪದಾರ್ಥ’ಗಳು ಬೆರೆತು ‘ಪಲ್ಲಕ್ಕಿ’ ಕಲಸುಮೇಲೋಗರವಾಗಿದೆ. ಪ್ರೀತಿ– ಪ್ರೇಮದ ನವಿರು ಭಾವನೆಗಳನ್ನು ಹೊತ್ತು ಸಾಗಬೇಕಿದ್ದ ‘ಪಲ್ಲಕ್ಕಿ’, ಪ್ರೇಕ್ಷಕನಿಗೆ ತೀರಾ ಭಾರ ಎಂದು ಭಾಸವಾಗುತ್ತದೆ.

Write A Comment