ಮನೋರಂಜನೆ

ಆರು ದಿನಗಳಲ್ಲಿ ಒಂಟಿ ಕಾಲಲ್ಲಿ ದಿಲ್ಲಿಯಿಂದ ಮುಂಬೈ ತಲುಪಿದ ಪ್ಯಾರಾಥ್ಲೀಟ್

Pinterest LinkedIn Tumblr

aditya

ಮುಂಬೈ: ಒಂಟಿ ಕಾಲಿನ ಪ್ಲಾರಾಥ್ಲೀಟ್ ಆದಿತ್ಯ ಮೆಹ್ತಾ ಹೈದರಾಬಾದ್‌ನ ನಿವಾಸಿ. ಆರು ದಿನಗಳಲ್ಲಿ 1,450 ಕಿ.ಮೀ ದೂರದ ದಿಲ್ಲಿಯಿಂದ ಮುಂಬೈಗೆ ತಲುಪಿರುವ ಸಾಹಸಿ. ಡಿ.16ರಂದು ಇಂಡಿಯಾ ಗೇಟ್‌ನಿಂದ ಸೈಕಲ್‌ನಲ್ಲಿ ಮುಂಬೈಗೆ ಹೊರಟಿದ್ದರು. ಸೋಮವಾರ ಮುಂಬೈನ ಗೇಟ್‌ವೇ ಆಫ್ ಇಂಡಿಯಾ ತಲುಪಿದ್ದಾರೆ. 2013ರಲ್ಲಿ ಪ್ಯಾರಾ -ಏಶ್ಯನ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬೆಳ್ಳಿ ಪದಕ ಜಯಿಸಿದ್ದ ಆದಿತ್ಯ ಇದೀಗ ನೂತನ ದಾಖಲೆ ನಿರ್ಮಿಸಿದ್ದಾರೆ.

ಅಪೂರ್ವ ಸಾಧನೆಯ ಗುರಿಯೊಂದಿಗೆ ಮೆಹ್ತಾ ಸೈಕಲ್ ಏರುವಾಗ ಕೃತಕ ಕಾಲನ್ನು ಬಳಸಲಿಲ್ಲ. ಒಂದೇ ಕಾಲಿನಲ್ಲಿ ಸೈಕಲ್ ತುಳಿದು ಗುರಿ ಮುಟ್ಟಿದ್ದಾರೆ. ಯುದ್ಧ ರಂಗದಲ್ಲಿ ಕೈ, ಕಾಲನ್ನು ಕಳೆದುಕೊಂಡ ಪ್ಯಾರಾಮಿಲಿಟರಿ ಸಿಬ್ಬಂದಿಗಳಿಗೆ ಗೌರವ ಮತ್ತು ಪ್ರೋತ್ಸಾಹ ನೀಡುವುದು ಅವರ ಈ ಸಾಧನೆಯ ಉದ್ದೇಶವಾಗಿತ್ತು.

2006ರಲ್ಲಿ ಬೈಕ್ ಅಪಘಾತದಲ್ಲಿ ಆದಿತ್ಯ ಮೆಹ್ತಾ ಕಾಲು ಕಳೆದುಕೊಂಡರು. ಅಷ್ಟರ ತನಕ ಕ್ರೀಡೆಯ ಬಗ್ಗೆ ಯೋಚಿಸದವರಲ್ಲ. ‘‘ಕಾಲು ಕಳೆದುಕೊಂಡಾಗ ಖಿನ್ನತೆ ಆವರಿಸಿತ್ತು. ಜನರು ನನ್ನನ್ನು ವಿಚಿತ್ರವಾಗಿ ನೋಡತೊಡಗಿದ್ದರು. ಈ ನೋವು ಮನಸ್ಸಿಗೆ ನಾಟಿತ್ತು. ನನ್ನಿಂದ ಇನ್ನು ಮುಂದೆ ಏನನ್ನು ಮಾಡಲು ಸಾಧ್ಯವಿಲ್ಲ ಎಂಬ ವಿಚಾರ ಅರಿವಾಗಿತ್ತು. ಆದರೆ ಪೊಲಿಯೋ ಪೀಡಿತ ಮಹಿಳೆಯೊಬ್ಬರು ನನ್ನ ಬದುಕನ್ನು ಬದಲಾಯಿಸಿದರು ’’ ಎನ್ನುತ್ತಾರೆ 32ರ ಹರೆಯದ ಆದಿತ್ಯ ಮೆಹ್ತಾ.

‘‘ ಆಕೆ ನನ್ನಲ್ಲಿ ವಿಚಿತ್ರವಾಗಿ ಮಾತನಾಡಿದಳು. ಆಕೆಯ ಮಾತಿನಲ್ಲಿ ಸಹಾನುಭೂತಿ ಇರಲಿಲ್ಲ. ಆಕೆಯ ಮಾತು ಬದುಕನ್ನು ಬದಲಾಯಿಸಿತು. ಮರುದಿನ ಸೈಕ್ಲಿಂಗ್ ಇವೆಂಟ್‌ನ ಪ್ರೋತ್ಸಾಹಿಸುವ ಫಲಕವೊಂದು ಕಣ್ಣಿಗೆ ಬಿತ್ತು. ಚಿಕ್ಕಂದಿನಲ್ಲಿ ಸ್ವಂತ ಸೈಕಲ್ ಇತ್ತು. ಸೈಕ್ಲಿಂಗ್ ಬಗ್ಗೆ ಪ್ರೀತಿ ಇತ್ತು. ಎಲ್ಲಿಗೆ ಹೋಗುವುದಿದ್ದರೂ ಸೈಕಲ್ ಬಳಸುತ್ತಿದ್ದೆ. ಅದೇ ಸೈಕಲ್ ನೆರವಿಗೆ ಬಂತು. ಸೈಕಲ್‌ನಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು. ಈಗ ನನಗೆ ಕಾಲು ಕಳೆದುಕೊಂಡಿರುವುದು ಒಂದು ರೀತಿಯಲ್ಲಿ ವರದಾನ’’ ಎಂದು ಮೆಹ್ತಾ ಹೇಳುತ್ತಾರೆ.

‘‘ ಒಂದು ವೇಳೆ ಅಪಘಾತದಿಂದ ಕಾಲು ಕಳೆದುಕೊಳ್ಳದೇ ಇರುತ್ತಿದ್ದರೆ ನಾನು ಕುಟುಂಬದ ವ್ಯವಹಾರಗಳಲ್ಲಿ ಬ್ಯುಸಿಯಾಗಿರುತ್ತಿದ್ದೆ. ತಂದೆಗೆ ಜವಳಿ ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದೆ. ಈಗ ತಾನು ಎಲ್ಲರಂತಲ್ಲ. ಕ್ರೀಡೆ ನನಗೆ ಹೊಸ ಬದುಕು ನೀಡಿದೆ’’ ಎನ್ನುತ್ತಾರೆ ಮೆಹ್ತಾ.

ಲಿಮ್ಕಾ ಪುಸ್ತಕದಲ್ಲಿ ಆದಿತ್ಯ ಮೆಹ್ತಾರ ಸಾಧನೆ ಸೇರ್ಪಡೆಗೊಂಡಿದೆ. ಆದರೆ ಇದರಲ್ಲಿ ಅವರಿಗೆ ತೃಪ್ತಿಯಿಲ್ಲ. ಪ್ಯಾರಾಥ್ಲೀಟ್‌ಗಳಿಗೆ ಸಮಾಜದಲ್ಲಿ ಮನ್ನಣೆ, ಗೌರವವನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಮೆಹ್ತಾ ಹೋರಾಟ ನಡೆಸುತ್ತಿದ್ದಾರೆ.

ಅಥ್ಲೀಟ್‌ಗಳು ಮತ್ತು ಪ್ಯಾರಾಥ್ಲೀಟ್‌ಗಳನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಪ್ಯಾರಾಥ್ಲೀಟ್‌ಗಳ ಸಾಧನೆಗೆ ಬೆಲೆ ಇಲ್ಲ ಎಂದು ಹೇಳುವ ಮೆಹ್ತಾ ‘‘ ಸೈನಾ ನೆಹ್ವಾಲ್ ಅವರಂತಹ ಕ್ರೀಡಾ ಸಾಧಕರು ಬರುತ್ತಾರೆಂದರೆ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿರುತ್ತಾರೆ. ಆದರೆ ನಮ್ಮಂತಹ ಪ್ಯಾರಾಥ್ಲೀಟ್‌ಗಳು ದೊಡ್ಡ ಸಾಧನೆ ಮಾಡಿ ಆಗಮಿಸಿದರೂ ನಮ್ಮನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಯಾರೂ ಇರುವುದಿಲ್ಲ. ಈ ದೃಷ್ಟಿಕೋನ ಬದಲಾಗಬೇಕು’’ ಎಂದು ಆದಿತ್ಯ ಮೆಹ್ತಾ ಅಭಿಪ್ರಾಯಪಟ್ಟರು.

2013ರಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸೈಕಲ್‌ನಲ್ಲಿ ಸಂಚರಿಸಿದ್ದರು. ಭಾರತದ 36 ನಗರಗಳಲ್ಲಿ ಸೈಕಲ್ ಮೂಲಕ ಸಂಚರಿಸಿದ ಮೊದಲ ಪ್ಯಾರಾಸೈಕ್ಲಿಸ್ಟ್ ಎನಿಸಿಕೊಂಡಿದ್ದರು. ಬಳಿಕ ಅವರು ಏಶ್ಯನ್ ಪ್ಯಾರಾ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಪಡೆದಿದ್ದರು.

Write A Comment