ಕನ್ನಡ ವಾರ್ತೆಗಳು

ಡಿ.24 -27: ಪಿಲಿಕುಳ ಹಬ್ಬಕ್ಕೆ ಸರ್ವ ಸಿದ್ಧತೆ ಪ್ರಾರಂಭ.

Pinterest LinkedIn Tumblr

pilikula_habba_strat

ಮಂಗಳೂರು, ಡಿ.23 : ದ.ಕ. ಜಿಲ್ಲಾಡಳಿತದ ವತಿಯಿಂದ ತುಳು, ಕೊಂಕಣಿ, ಬ್ಯಾರಿ, ಕೊಡವ ಹಾಗೂ ಅರೆಭಾಷೆ ಅಕಾಡಮಿಗಳ ಸಹಯೋಗದಲ್ಲಿ ಡಿ.24ರಿಂದ 27ರವರೆಗೆ ನಡೆಯುವ ‘ಪಿಲಿಕುಳ ಹಬ್ಬ’ಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ನಿಸರ್ಗ ಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಪ್ರಭಾಕರ ಶರ್ಮ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜನಪದ ಆಟ, ಕ್ರೀಡೆ, ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂದರ್ಭ ಪ್ರದರ್ಶನಗೊಳ್ಳ ಲಿದ್ದು, ಸ್ಪರ್ಧೆಗಳಿಗೆ ನೋಂದಣಿ ಶುಲ್ಕ ಇರುವುದಿಲ್ಲ ಎಂದರು. ವಾಮಂಜೂರು ಮತ್ತು ಪಿಲಿಕುಳ ನಡುವೆ ಹಬ್ಬದ 4 ದಿನ ಸಂಜೆ 3ರಿಂದ 8ರ ತನಕ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಸಾವಯವ-ಸ್ವಾವಲಂಬಿ ಸಂತೆ, ಸಾಂಪ್ರದಾಯಿಕ ಆಹಾರ, ಕುಸ್ವಾರ್, ವೈವಿಧ್ಯಮಯ ಕೇಕ್ ಸಹಿತ ವಿವಿಧ ಆಹಾರ ಮಳಿಗೆಗಳು ಇರುವುದು ಎಂದವರು ಹೇಳಿದರು.

24ರಂದು ಪೂರ್ವಾಹ್ನ 11 ಗಂಟೆಗೆ ತೆಂಗಿನಕಾಯಿ ಕುಟ್ಟು ವುದು, ಲಗೋರಿ ಸಹಿತ ವಿವಿಧ ಸಾಂಪ್ರದಾಯಿಕ ಪಂದ್ಯಗಳು, ಅಪರಾಹ್ನ 2 ಗಂಟೆಗೆ ತುಳು ಭಾಷೆ, ಜಾನಪದ ಸಂಸ್ಕೃತಿ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ, 4 ಗಂಟೆಗೆ ಸಾಂಸ್ಕೃತಿಕ ತಂಡಗಳ ಮೆರವಣಿಗೆ, ಬಳಿಕ ತುಳುಹಾಡು, ಜಾನಪದ ರೂಪಕ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಜಾದೂಗಾರ ಕುದ್ರೋಳಿ ಗಣೇಶ್ ಮ್ಯಾಜಿಕ್ ಪ್ರದರ್ಶನ ನಡೆಯುಲಿದೆ ಎಂದು ತುಳು ಅಕಾಡಮಿಯ ಅಧ್ಯಕ್ಷೆ ಜಾನಕಿ ಎಂ.ಬ್ರಹ್ಮಾವರ ವಿವರಿಸಿದರು.

25ರಂದು ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಪೂರಕ ಸಂಭ್ರಮಾ ಚರಣೆ ನಡೆಸಲಾಗುವುದು. ಕುಸ್ವಾರ್ ಮತ್ತು ಕ್ರಿಸ್‌ಮಸ್ ಕೇಕ್ ಪ್ರದರ್ಶನ ಮತ್ತು ಮಾರಾಟ, ಗ್ಲಾಡ್ಸನ್ ಮಾಬೆನ್ ಮತ್ತು ತಂಡದ ಕ್ರಿಸ್‌ಮಸ್ ಕ್ಯಾರೆಲ್ಸ್ ತಂಡದಿಂದ ಕೊಂಕಣಿ, ತುಳು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕ್ರಿಸ್‌ಮಸ್ ಕ್ಯಾರೆಲ್ಸ್, ಸುನೀತಾ ರೋಸ್ ಕ್ರಾಸ್ತಾರಿಂದ ಕ್ರಿಸ್‌ಮಸ್ ಕ್ವಿಝ್, ಸಂತೋಷ್ ಸಿಕ್ವೇರಾ ಕೆಲರಾಯಿ ತಂಡದಿಂದ ಕ್ರಿಸ್‌ಮಸ್ ಕ್ರಿಬ್, ರೊನಾಲ್ಡ್ ಡಿಸೋಜ ತಂಡದಿಂದ ಕೊಂಕಣಿ ಬ್ರಾಸ್‌ಬ್ಯಾಂಡ್, ರೋಶನ್ ಕಾಮತ್ ವಾಮಂಜೂರು ತಂಡದಿಂದ ಕ್ರಿಸ್‌ಮಸ್ ಖೆಳ್ ನಡೆಯುವುದು. ಸಂಜೆ 4ರಿಂದ 7ರತನಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕೊಂಕಣಿ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಹೇಳಿದರು.

ವಾಲಿಬಾಲ್ ಸ್ಪರ್ಧೆಯಲ್ಲಿ ದ.ಕ. ಜಿಲ್ಲೆಯವರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಎಲ್ಲಾ ಆಟಗಾರರು ಸಮವಸ್ತ್ರ ಧರಿಸಬೇಕು. ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಹಾಗೂ ವೈಯಕ್ತಿಕ ಬಹುಮಾನಗಳಿದ್ದು, ನಗದು ಹಾಗೂ ಟ್ರೋಫಿ ಒಳಗೊಂಡಿರುತ್ತದೆ. 26ರಂದು ಅಪರಾಹ್ನ 3ರಿಂದ ದಫ್ ಸ್ಪರ್ಧೆ, ಬಳಿಕ ವೇದಿಕೆ ಕಾರ್ಯಕ್ರಮ, ಅರೆಬಿಕ್ ನೃತ್ಯ, ಬ್ಯಾರಿ-ಕೊಡವ ಆರ್ಕೆಸ್ಟ್ರಾ, ಕೋಳ್ಕಳಿ ಕೊಡವ ನೃತ್ಯ, ಮಹಿಳೆಯರಿಗೆ ಮೆಹಂದಿ ಸ್ಪರ್ಧೆ, ಬ್ಯಾರಿ ಜಾನಪದ ಆಟ, ಬಿಲ್ಲಿಸ್, ಲಗೋರಿ, ಬಚ್ಚಾ, ಗೋಳಿಯಾಟ ನಡೆಯಲಿದೆ ಎಂದು ಬ್ಯಾರಿ ಅಕಾಡಮಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಹೇಳಿದರು.

27ರಂದು ಸಂಜೆ 3 ಗಂಟೆಯಿಂದ ಫೈರ್‌ಲೆಸ್ ಕುಕ್ಕಿಂಗ್ ಸ್ಪರ್ಧೆ, ಐಸ್‌ಕ್ರೀಂ ತಿನ್ನುವ ಸ್ಪರ್ಧೆ, ವಿದುಷಿ ಪ್ರಮೀಳಾ ಲೋಕೇಶ್ ತಂಡದಿಂದ ‘ಹೆಜ್ಜೆ-ಗೆಜ್ಜೆ’, ಕೋಲಾಟ, ಅರೆಭಾಷೆ ಜಾನಪದ ನೃತ್ಯ, ಗಾಯನ, ಶೋಬಾನೆ, ಸಂಗೀತ ಕಾರ್ಯಕ್ರಮ ನಡೆಯುವುದು. ಐಸ್‌ಕ್ರೀಂ ತಿನ್ನುವ ಸ್ಪರ್ಧೆಯಲ್ಲಿ 5ರಿಂದ 12 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ಮಕ್ಕಳು ಜನನ ಪ್ರಮಾಣಪತ್ರ ಹಾಗೂ ಭಾವಚಿತ್ರವಿರುವ ಗುರುತು ಕಾರ್ಡ್ ಹೊಂದಿರಬೇಕು. ಫೈರ್‌ಲೆಸ್ ಕುಕ್ಕಿಂಗ್ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ಸಿಗಲಿದೆ ಎಂದು ಪ್ರಭಾಕರ ಶರ್ಮ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತುಳು ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ, ಬ್ಯಾರಿ ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ಉಪಸ್ಥಿತರಿದ್ದರು.

Write A Comment