ಕರ್ನಾಟಕ

ಬೀಫ್ ತಿಂತೀನಿ, ಕೇಳೋಕೆ ನೀವ್ಯಾರ್ರೀ?: ಸಿದ್ದು

Pinterest LinkedIn Tumblr

siddu

ಬೆಂಗಳೂರು: ದೆಹಲಿ, ಉತ್ತರ ಪ್ರದೇಶಗಳಲ್ಲಿ ಗೋಮಾಂಸ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ‘ಗೋಮಾಂಸ ಸೇವಿಸುವ ಆಸೆ ನನಗೂ ಆಗಿದೆ. ತಿಂದೇ ತೀರುತ್ತೇನೆ. ಅದನ್ನು ಕೇಳೋಕೆ ನೀವ್ಯಾರು (ಸಂಘ ಪರಿವಾರ)?’ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ‘ಸಂಘ ಪರಿವಾರದವರ ರಾದ್ಧಾಂತ ನೋಡಿ ನನಗೂ ಈ ಆಸೆಯಾಗಿದೆ. ದನದ ಮಾಂಸ ಅಥವಾ ಬೇರಾವುದೇ ಆಹಾರ ತಿನ್ನುವುದು ನನ್ನ ಸ್ವಾತಂತ್ರ್ಯ ಜೀವನದಲ್ಲಿ ನಾನೆಂದೂ ಗೋಮಾಂಸ ತಿಂದಿಲ್ಲ. ಆದರೆ ಈಗ ಸೇವಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ನಗರದ ಪುರಭವನದಲ್ಲಿ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಅವರದೇ ಆದ ಆಹಾರ ಸ್ವಾತಂತ್ರ್ಯದೆ. ಮತ್ತೊಬ್ಬರಿಗೆ ತೊಂದರೆ ಆಗದಂತೆ ಯಾವುದೇ ವ್ಯಕ್ತಿ ತನ್ನಿಷ್ಟದ ಆಹಾರ ಸೇವಿಸಬಹುದು. ಅದು ಆತನ ವೈಯಕ್ತಿಕ ಸ್ವಾತಂತ್ರ್ಯ ಯಾವುದನ್ನು ತಿನ್ನಬೇಕು ಅಥವಾ ತಿನ್ನಬಾರದು ಎಂದು ಹೇಳಲು ಬಿಜೆಪಿಯವರು ಯಾರು? ಎಂದು ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು. ಸಮಾಜದಲ್ಲಿ ಕೋಮು ಸೌಹಾರ್ದತೆ ಹಾಳು ಮಾಡಲೆಂದೇ ಇಂತಹ ಕುತಂತ್ರ, ರಾದ್ಧಾಂತಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಿಂದುತ್ವವಾದಿಗಳ ಈ ಹಿಡನ್ ಅಜೆಂಡಾವನ್ನು ಜನರ ಎದುರು ಬೆತ್ತಲುಗೊಳಿಸಲು ಯುವ ಕಾಂಗ್ರೆಸ್ ಕಾರ್ಯಕರ್ತರು ಹೋರಾಟಕ್ಕೆ ಇಳಿಯಬೇಕು ಎಂದು ಕರೆ ನೀಡಿದರು.

ಬಿಜೆಪಿಗೆ ಬೆಂಬಲ ಸಿಗದು:

ಅಹಿಂದ ಸಮುದಾಯದ ಒಗ್ಗಟ್ಟು ಮುರಿಯಲು ಬಿಜೆಪಿ ‘ಹಿಂದ’ವಾದದ ಮೊರೆ ಹೋಗಿದ್ದು, ಈ ಪ್ರಯತ್ನಕ್ಕೆ ಸಮಾಜದ ಬೆಂಬಲ ಸಿಗುವುದಿಲ್ಲ. ಅಹಿಂದ ಚಳವಳಿ ಹತ್ತಿಕ್ಕಿ ರಾಜಕೀಯ ಲಾಭ ಮಾಡಿಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿ ತೊಡಗಿದೆ. ಕಾಂಗ್ರೆಸ್ ಪಕ್ಷ ಜಾತ್ಯತೀತ ಕಲ್ಪನೆಯಲ್ಲಿ ವಿಶ್ವಾಸವಿಟ್ಟಿದ್ದರೆ, ಬಿಜೆಪಿ ಜಾತಿ ಆಧಾರದ ಮೇಲೆ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈಹಾಕಿದೆ ಎಂದು ಮುಖ್ಯಮಂತ್ರಿ ತೀವ್ರ ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಬಳಿಕ ದೇಶದಲ್ಲಿ ಕೋಮು ಶಕ್ತಿಗಳು ಬಲವಾಗುತ್ತಿದ್ದು, ನೈತಿಕ ಪೊಲೀಸ್​ಗಿರಿ ಮೂಲಕ ಜನರ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಯಾರು ಯಾವ ಆಹಾರ ಸೇವಿಸಬೇಕು, ಯಾವ ಉಡುಪು ಧರಿಸಬೇಕು ಎಂದು ನಿರ್ಧರಿಸಲು ಯಾರಿಗೂ ಹಕ್ಕಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ವಿನಯ ಕುಮಾರ್ ಸೊರಕೆ, ಯು.ಟಿ.ಖಾದರ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಅಮರೀಂದ್ರ ಸಿಂಗ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Write A Comment