ರಾಷ್ಟ್ರೀಯ

ಜೇಟ್ಲಿ – ಆಜಾದ್ ‘ಜಟಾಪಟಿ’, ಒಟ್ಟಾದ ಅಡ್ವಾಣಿ, ಬಿಜೆಪಿ ಹಿರಿಯರು

Pinterest LinkedIn Tumblr

bjpನವದೆಹಲಿ: ದೆಹಲಿ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮೇಲೆ ಹರಿಹಾಯ್ದಿರುವ ಸಂಸತ್ ಸದಸ್ಯ ಕೀರ್ತಿ ಆಜಾದ್ ಅಮಾನತಿನ ಹಿನ್ನೆಲೆಯಲ್ಲಿ ಸಂಭವಿಸುತ್ತಿರುವ ವಿದ್ಯಮಾನಗಳ ಬಗ್ಗೆ, ಪಕ್ಷ ನಾಯಕತ್ವ ವಿರುದ್ಧ ಈ ಹಿಂದೆಯೇ ಸೆಟೆದು ನಿಂತಿದ್ದ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಶಾಂತ ಕುಮಾರ್ ಮತ್ತು ಯಶವಂತ ಸಿನ್ಹಾ ಒಟ್ಟಾಗಿ ಚರ್ಚಿಸಿದ್ದಾರೆ.

ಅಡ್ವಾಣಿ, ಜೋಷಿ, ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಒಳಗೊಂಡ ‘ಮಾರ್ಗದರ್ಶಕ ಮಂಡಲ’ವು ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶ ಮಾಡಬೇಕು ಎಂದು ಆಜಾದ್ ಆಗ್ರಹಿಸಿದ್ದಾರೆ. ಪಕ್ಷವು ಅಧಿಕಾರ ವಹಿಸಿಕೊಂಡ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಈ ಮಾರ್ಗದರ್ಶಕ ಮಂಡಲವನ್ನು ರಚಿಸಿದ್ದರು.

ಮೂಲಗಳ ಪ್ರಕಾರ ಅಡ್ವಾಣಿ ಅವರು ಗುರುವಾರ ಜೋಷಿ ಅವರ ಮನೆಗೆ ತೆರಳಿದ್ದು, ಶಾಂತ ಕುಮಾರ್ ಮತ್ತು ಸಿನ್ಹಾ ಅವರು ಮಧ್ಯಾಹ್ನದ ವೇಳೆಗೆ ಅವರ ಜೊತೆಗೂಡಿದ್ದಾರೆ. ನಾಲ್ವರೂ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಸಭೆ ನಡೆಸಿ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ. ಈ ನಾಲ್ಕೂ ಮಂದಿ ಹಿರಿಯ ನಾಯಕರು ಕಳೆದ ತಿಂಗಳು ಬಿಹಾರ ಚುನಾವಣೆಯಲ್ಲಿ ಪಕ್ಷವು ದಯನೀಯ ಸೋಲು ಅನುಭವಿಸಿದಾಗ ಮೋದಿ-ಷಾ ತಂಡದ ವಿರುದ್ಧ ವಸ್ತುಶಃ ಬಂಡೆದ್ದಿದ್ದರು. ನಾಲ್ವರೂ ಇಂದಿನ ಸಭೆಯಲ್ಲಿ ಕೀರ್ತಿ ಆಜಾದ್ ಅಮಾನತಿನಿಂದ ಉದ್ಭವಿಸಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

Write A Comment