ಕನ್ನಡ ವಾರ್ತೆಗಳು

ಫೇಸ್‌ಬುಕ್‌ನಲ್ಲಿ ಮಾನಹಾನಿಕರ ಹೇಳಿಕೆ : 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ ಕದ್ರಿ ಪೊಲೀಸರು

Pinterest LinkedIn Tumblr

Face_Book_coments

ಮಂಗಳೂರು,ಡಿ.26: ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ವಿರುದ್ಧ ಫೇಸ್‌ಬುಕ್ ಅಕೌಂಟ್ ಮೂಲಕ ಮಾನಹಾನಿಕರವಾಗಿ ಬರೆದ ಬಜರಂಗದಳ ಮುಖಂಡ ಪುನೀತ್ ರಾಜ್ ಕೊಟ್ಟಾರಿ ಮತ್ತು ಫೇಸ್‌ಬುಕ್ ವೀರಕೇಸರಿ ಅಕೌಂಟ್‌ನಲ್ಲಿ ಮಾನ ಹಾನಿಕರವಾಗಿ ಕಮೆಂಟ್ ಮಾಡಿದ್ದ 21 ಮಂದಿಯ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತೆಯಾಗಿರುವ ವಿದ್ಯಾ ದಿನಕರ್ 22 ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಬಜರಂಗದಳ ಮುಖಂಡ ಪುನೀತ್ ರಾಜ್ ಕೊಟ್ಟಾರಿ ತನ್ನ ಫೇಸ್‌ಬುಕ್ ಅಕೌಂಟ್‌ನಲ್ಲಿ ಮಾನಹಾನಿಕಾರವಾಗಿ ಬರೆದುಕೊಂಡಿದ್ದನು. ಈ ಬಗ್ಗೆ ವಿದ್ಯಾ ದಿನಕರ್ ಪೊಲೀಸ್ ಅಕಾರಿಗಳ ಗಮನಕ್ಕೆ ತಂದ ನಂತರ ಪುನೀತ್ ರಾಜ್ ಕೊಟ್ಟಾರಿ ಫೇಸ್‌ಬುಕ್ ನಲ್ಲಿನ ತನ್ನ ಸ್ಟೇಟಸ್ ಅಳಿಸಿ ಹಾಕಿದ್ದನು.

ಮತ್ತೊಂದೆಡೆ ಫೇಸ್‌ಬುಕ್ ನಲ್ಲಿರುವ ವೀರಕೇಸರಿ ಅಕೌಂಟ್‌ನಲ್ಲಿ ವಿದ್ಯಾ ದಿನಕರ್ ಬಗ್ಗೆ ಅವಹೇಳನಕಾರಿ ಕಮೆಂಟ್‌ಗಳನ್ನು ಮಾಡಿ ಅತ್ಯಾಚಾರ ಕೊಲೆಗೆ ಪ್ರಚೋದನೆ ನೀಡಲಾಗಿತ್ತು. ಇದರಲ್ಲಿನ 21 ಮಂದಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ವಿದ್ಯಾ ದಿನಕರ್ ದೂರಿನಲ್ಲಿ ತಿಳಿಸಿದ್ದಾರೆ.

ಸಿನಿಮಾ ಪ್ರದರ್ಶನ ನಡೆಯದಿದ್ದರೂ ‘ದಿಲ್‌ವಾಲೆ’ಗೆ ಪೊಲೀಸ್ ಭದ್ರತೆ:

ಮಂಗಳೂರು: ಶಾರುಕ್ ಖಾನ್ ಅಭಿನಯದ ದಿಲ್‌ವಾಲೆ ಸಿನಿಮಾ ಪ್ರದರ್ಶನಕ್ಕೆ ಬಜರಂಗದಳದ ಕಾರ್ಯಕರ್ತರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಸಿಟಿಸೆಂಟರ್‌ನ ಸಿನಿಪೋಲಿಸ್, ಬಿಗ್ ಬಝಾರ್‌ನ ಬಿಗ್ ಸಿನೆಮಾಸ್‌ ಹಾಗೂ ಪಾಂಡೇಶ್ವರ ಫೋರಂ ಮಾಲ್‌ನ ಪಿವಿಆರ್‌ಸಿನೆಮಾಸ್‌ನಲ್ಲಿ ಕೆಎಸ್‌ಆರ್‌ಪಿಯ ಒಂದು ತುಕಡಿ ಪೊಲೀಸರು ಮತ್ತು ಮಂಗಳೂರು ಉತ್ತರ ಠಾಣಾ ಪೊಲೀಸರು ಭದ್ರತೆಯನ್ನೊದಗಿಸಿದ್ದಾರೆ.

ಈ ಸಿನೆಮಾ ಮಂದಿರಗಳಲ್ಲಿ ದಿಲ್‌ವಾಲೆ ಸಿನಿಮಾ ಪ್ರದರ್ಶನ ನಡೆಯುತ್ತಿರಲಿಲ್ಲ. ಆದರೂ ಸಿನಿಮಾ ಮಂದಿರದವರಿಗೆ ಸಿನಿಮಾ ಪ್ರದರ್ಶನಕ್ಕೆ ಯಾವುದೇ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಭದ್ರತೆಯನ್ನು ಒದಗಿಸಲಾಗಿದೆ.

Write A Comment