ಮಂಗಳೂರು, ಡಿ.26: ಜಗತ್ತಿಗೆ ಪ್ರೀತಿ-ಶಾಂತಿ ಹಾಗೂ ಸಹ ಬಾಳ್ವೆಯ ಸಂದೇಶ ನೀಡಿದ ಯೇಸುಕ್ರಿಸ್ತನ ಜನ್ಮ ದಿನವನ್ನು ದ.ಕ. ಜಿಲ್ಲೆಯಲ್ಲಿಂದು ಕ್ರೈಸ್ತರು ಸಂಭ್ರಮೋಲ್ಲಾಸಗಳಿಂದ ಆಚರಿಸಿದರು. ಕ್ರಿಸ್‌ಮಸ್ ಸಂಭ್ರಮದ ಹಿನ್ನೆಲೆಯಲ್ಲಿ ಮಂಗಳೂರು ನಗರ ಸೇರಿದಂತೆ ನಾಡಿನೆಲ್ಲೆಡೆಯ ಚರ್ಚ್‌ಗಳು ಹಾಗೂ ಕ್ರೈಸ್ತ ಬಾಂಧವರ ಮನೆಗಳು ಗೋದಲಿ, ಕ್ರಿಸ್‌ಮಸ್ ಟ್ರೀ, ನಕ್ಷತ್ರ ಗಳೊಂದಿಗೆ ಸಿಂಗಾರಗೊಂಡು ಹಬ್ಬಕ್ಕೆ ಮೆರುಗು ನೀಡಿವೆ.
ಗುರುವಾರ ರಾತ್ರಿ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಮಿಲಾಗ್ರಿಸ್, ರೊಸಾರಿಯೊ ಚರ್ಚ್‌ಗಳು ಸೇರಿದಂತೆ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ, ಯೇಸುವಿನ ಸಂದೇಶ ಗಳನ್ನು ನೀಡುವ ಕಾರ್ಯಕ್ರಮ ನಡೆಯಿತು. ನಗರದ ಅತೀ ಹಳೆಯ ಮತ್ತು ಪ್ರತಿಷ್ಠಿತ ಚರ್ಚ್‌ಗಳಲ್ಲಿ ಒಂದಾದ ರೊಸಾರಿಯೊ ಕೆಥಡ್ರಲ್‌ನಲ್ಲಿ ಸಾಮೂಹಿಕ ಪೂಜೆಯಲ್ಲಿ ಪಾಲ್ಗೊಂಡ ಮಂಗಳೂರು ಬಿಷಪ್ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಕ್ರಿಸ್‌ಮಸ್ ಸಂದೇಶ ನೀಡಿದರು.
ಬಳಿಕ ಬಿಷಪ್ ಕ್ರಿಸ್‌ಮಸ್ ಕೇಕ್ ಕತ್ತರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮೊನ್ಸಿಂಜರ್ ಡೆನ್ನಿಸ್ ಮೊರಾಸ್ ಪ್ರಭು, ವಂ. ಜೆ.ಬಿ.ಕ್ರಾಸ್ತಾ, ವಂ.ವಿನ್ಸೆಂಟ್ ಡಿಸೋಜ, ವಂ. ರಾಕಿ ಫೆರ್ನಾಂಡಿಸ್ ಮತ್ತು ವಂ. ಪೌಲ್ ಸೆಬಾಸ್ಟಿಯನ್ ಡಿಸೋಜ ಉಪಸ್ಥಿತರಿದ್ದರು. ಬೆಳಗ್ಗೆ ಚರ್ಚ್‌ಗಳಲ್ಲಿ ವಿಶೇಷ ಪೂಜೆಗಳು ನಡೆದು, ಕ್ರೈಸ್ತ ಬಾಂಧವರು ಮನೆಗಳಲ್ಲಿ ಹಬ್ಬದ ಊಟದ ಜತೆಗೆ ನೆರೆಹೊರೆಯವರಿಗೆ ಕುಸ್ವಾರ್ ಹಂಚುವ ಮೂಲಕ ಹಬ್ಬವನ್ನು ಆಚರಿಸಿದರು.