ಕನ್ನಡ ವಾರ್ತೆಗಳು

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಹೇಳಿಕೆ ಪ್ರಕರಣ: ಓರ್ವನ ಬಂಧನ

Pinterest LinkedIn Tumblr

Punith_Kottary_arset

ಮಂಗಳೂರು, ಡಿ.27: ಸಾಮಾಜಿಕ ಕಾರ್ಯಕರ್ತೆ ಹಾಗೂ ಸಿಟಿಝನ್ ಫಾರ್ ಡೆವಲಪ್‌ಮೆಂಟ್‌ನ ಸಂಯೋಜಕಿ ವಿದ್ಯಾ ದಿನಕರ್ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿಯಾಗಿ ನಿಂದನೆ ಮಾಡಿದ ಪ್ರಕರಣದ ಆರೋಪಿ ಯೋರ್ವನನ್ನು ಕದ್ರಿ ಠಾಣಾ ಪೊಲೀಸರು ಇಂದು ಬಂಧಿಸಿದ್ದಾರೆ.

ಬಜರಂಗದಳದ ಕಾರ್ಯಕರ್ತ, ಅತ್ತಾವರ ಬಾಬುಗುಡ್ಡೆಯ ನಿವಾಸಿ ಪುನೀತ್ ರಾಜ್ ಕೊಟ್ಟಾರಿ (27) ಬಂಧಿತ ಆರೋಪಿ.

ಶಾರುಕ್ ಖಾನ್ ಅಭಿನಯದ ‘ದಿಲ್‌ವಾಲೆ’ ಹಿಂದಿ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿ, ಬೆದರಿಕೆ ಹಾಕಿದ ಬಜರಂಗದಳದ ಕಾರ್ಯಕರ್ತರ ವಿರುದ್ಧ ಸಾಮಾಜಿಕ ಕಾರ್ಯಕರ್ತೆಯಾಗಿರುವ ವಿದ್ಯಾ ದಿನಕರ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದರು. ಅದರಂತೆ ಆರೋಪಿಗಳ ವಿರುದ್ಧ ಪ್ರಕರಣವೂ ದಾಖ ಲಾಗಿತ್ತು. ಈ ಬೆಳವಣಿಗೆಯ ಬಳಿಕ ಕಿಡಿಗೇಡಿಗಳು ವಿದ್ಯಾ ದಿನಕರ್ ವಿರುದ್ಧ ಫೇಸ್‌ಬುಕ್, ವಾಟ್ಸ್ ಆ್ಯಪ್ ಮೊದಲಾದ ಜಾಲತಾಣಗಳಲ್ಲಿ ಅವಹೇಳನಕಾರಿ ಬರಹಗಳನ್ನು ಪ್ರಕಟಿಸಲಾಗಿತ್ತು.

ತನ್ನ ಫೇಸ್‌ಬುಕ್ ಅಕೌಂಟ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿದ್ದ ಬಜರಂಗ ದಳದ ಮುಖಂಡ ಪುನೀತ್‌ರಾಜ್ ಕೊಟ್ಟಾರಿ ಹಾಗೂ ವೀರಕೇಸರಿ ಎಂಬ ಫೇಸ್‌ಬುಕ್ ಅಕೌಂಟ್‌ನಲ್ಲಿ ಮಾನಹಾನಿಕಾರವಾಗಿ ಕಮೆಂಟ್ ಮಾಡಿದ್ದ 21 ಮಂದಿಯ ವಿರುದ್ಧ ವಿದ್ಯಾ ದಿನಕರ್ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವೀರಕೇಸರಿ ಫೇಸ್‌ಬಕ್ ಅಕೌಂಟ್‌ನಲ್ಲಿ ಅವಹೇಳನಕಾರಿಯಾಗಿ ಕಮೆಂಟ್ಸ್ ಮಾಡಿ ಅತ್ಯಾಚಾರ ಮತ್ತು ಕೊಲೆಗೆ ಪ್ರಚೋದನೆ ನೀಡಲಾಗಿದೆ ಎಂದವರು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರು ದಾಖಲಿಸಿದ ಬೆನ್ನಲ್ಲೇ ಪುನೀತ್‌ರಾಜ್‌ನ ಫೇಸ್ ಅಕೌಂಟ್‌ನಲ್ಲಿದ್ದ ಅವಹೇಳನಕಾರಿ ಪೋಸ್ಟ್‌ಗಳನ್ನು ಅಳಿಸಿ ಹಾಕಲಾಗಿತ್ತು. ಸಾಮಾಜಿಕ ತಾಣಗಳಲ್ಲಿ ಅವಹೇಳನಕಾರಿ ಮತ್ತು ಕೊಲೆ ಬೆದರಿಕೆ ಒಡ್ಡಿರುವ ಈ ಕೃತ್ಯದ ವಿರುದ್ಧ ಬೆಂಗಳೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದ್ದವು. ಇದೀಗ ಪ್ರಕರಣದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Write A Comment