ಕರ್ನಾಟಕ

ವಿಧಾನಪರಿಷತ್ ಚುನಾವಣೆ ಆರಂಭ; 25 ಸ್ಥಾನಗಳಿಗೆ 125 ಮಂದಿ ಪೈಪೋಟಿ

Pinterest LinkedIn Tumblr

ele

ಬೆಂಗಳೂರು: ಆಡಳಿತ ಹಾಗೂ ವಿಪಕ್ಷಗಳ ನಡುವೆ ಜಿದ್ದಾಜಿದ್ದಿ ಹೋರಾಟ ನಡೆದಿರುವ ರಾಜ್ಯದ 20 ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿನ 25 ಸ್ಥಾನಗಳ ಮತದಾನ ಭಾನುವಾರ ಆರಂಭವಾಗಿದ್ದು. 125 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಪರಿಷತ್ ಚುನಾವಣೆಯಲ್ಲಿ ಇತರೆ ಚುನಾವಣೆಯಂತಿಲ್ಲದೆ, ಚುನಾವಣೆಗೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಗಳ ಮೂಲಕ ಮತದಾನ ಮಾಡಲಾಗುತ್ತಿದೆ. ಇಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನಕ್ಕೆ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗದಂತೆ ಈಗಾಗಲೇ ಎಚ್ಚರಿಕೆ ವಹಿಸಿರುವ ಚುನಾವಣಾ ಆಯೋಗವು 30 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಿದ್ದು, 6,314 ಮತಗಟ್ಟೆಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಆಯೋಗ ಸರ್ವಸಿದ್ಧಗಳೊಂದಿಗೆ ಸಜ್ಜಾಗಿದೆ. ರಾಜ್ಯದ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರ ಜತೆಗೆ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ತಿನ ಸದಸ್ಯರಿಗೆ ಮಾತ್ರ ಈ ಚುನಾವಣೆಯಲ್ಲಿ ಮತದಾನ ಹಕ್ಕಿದೆ. ಒಟ್ಟು 1,07,123 ಮಂದಿ ಮತದಾರರು ಪಕ್ಷೇತರರು ಸೇರಿದಂತೆ 125 ಮಂದಿ ಅಭ್ಯರ್ಥಿಗಳ ಹಣೆಬರಹ ಇಂದು ತೀರ್ಮಾನವಾಗಲಿದೆ.

ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಆಯ್ಕೆಯಾಗಿರುವ 25 ಮಂದಿ ಸದಸ್ಯರು ಜನವರಿ 5 ರಂದು ನಿವೃತ್ತಿಗೊಳ್ಳುತ್ತಿರುವುದರಿಂದ ಆ ಸ್ಥಾನಗಳಿಗೆ ಈಗ ಚುನಾವಣೆ ನಡೆದಿದೆ. ಸದ್ಯ ಬಿಜೆಪಿಯಿಂದ 7, ಕಾಂಗ್ರೆಸ್‍ನಿಂದ 12 ಹಾಗೂ ಜೆಡಿಎಸ್‍ನಿಂದ ಐವರು ಸದಸ್ಯರು ಮೇಲ್ಮನೆಯನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 20 ಸ್ಥಾನಗಳಿಗೆ ಸ್ಪರ್ಧಿಸಿದ್ದರೆ ಜೆಡಿಎಸ್ ಬೆಂಗಳೂರು ನಗರ ಜಿಲ್ಲಾ ಕ್ಷೇತ್ರ ಹೊರತುಪಡಿಸಿ ಉಳಿದ 19 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆಡಳಿತ ಪಕ್ಷಕ್ಕೆ ಮೇಲ್ಮನೆಯಲ್ಲಿ ಬಹುಮತದ ಕೊರತೆ ಇರುವುದರಿಂದ ಕಾಂಗ್ರೆಸ್ ಪಾಲಿಗೆ ಇದು ಅತ್ಯಂತ ಮಹತ್ವದ ಚುನಾವಣೆ ಆಗಿದೆ. ನಿವೃತ್ತಿಗೊಳ್ಳುತ್ತಿ ರುವ 25 ಸದಸ್ಯರ ಪೈಕಿ 15 ಮಂದಿ ಪುನರಾಯ್ಕೆ ಬಯಸಿದ್ದಾರೆ.

ಕಣದಲ್ಲಿರುವ ಪ್ರಮುಖರು
ಸಚಿವ ಎಸ್.ಆರ್.ಪಾಟೀಲ್, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಮಾಜಿ ಸಿಎಂ ಧರ್ಮಸಿಂಗ್ ಪುತ್ರ ವಿಜಯ್ ಸಿಂಗ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ.

ಕಾಂಗ್ರೆಸ್‍ನಿಂದ ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್, ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ ವಿಜಯಸಿಂಗ್, ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಬಸನಗೌಡ ಪಾಟೀಲ್ ಯತ್ನಾಳ್, ಬೀದರ್ ಶಾಸಕ ಅಶೋಕ್ ಖೇಣಿ ಸಹೋದರ ಸಂಜಯ ಖೇಣಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು. ಬಿಜೆಪಿಗೆ ವಿಜಯಪುರ, ಕಾಂಗ್ರೆಸ್‍ಗೆ ಬೆಂಗಳೂರು ನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಎದುರಾಳಿಗಳಾಗಿದ್ದಾರೆ.

ಬಿಜೆಪಿಯು ಬಳ್ಳಾರಿ, ರಾಯಚೂರು ಹಾಗೂ ಬೀದರ್‍ನಲ್ಲಿ ಹಾಲಿ ಸದಸ್ಯರ ಬದಲಿಗೆ ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಕೂಡ ಕೋಲಾರ, ಕೊಡಗು, ಬೆಂಗಳೂರು ನಗರ ಜಿಲ್ಲಾ ಕ್ಷೇತ್ರದಲ್ಲಿ ಹಾಲಿ ಸದಸ್ಯರಿಗೆ ಟಿಕೆಟ್ ತಪ್ಪಿಸಿ ಹೊಸ ಮುಖಗಳಿಗೆ ಅವಕಾಶ ನೀಡಿದೆ. ಇನ್ನು ಧಾರವಾಡದಿಂದ ಕಾಂಗ್ರೆಸ್‍ನ ಹಾಲಿ ಸದಸ್ಯ ನಾಗರಾಜ್ ಛಬ್ಬಿ ಅವರು ನಾಮಪತ್ರ ಸಲ್ಲಿಸಿ ಕಣದಲ್ಲಿದ್ದರು, ಆದರೆ ಅಂತಿಮವಾಗಿ ಪಕ್ಷದ ಸೂಚನೆ ಮೇರೆಗೆ ಕಣದಿಂದ ನಿವೃತ್ತಿಯಾದರು. ಜೆಡಿಎಸ್ ಕೂಡ ಮಂಡ್ಯ ಹಾಗೂ ತುಮಕೂರಿನಲ್ಲಿ ಹೊಸ ಮುಖಗಳೊಂದಿಗೆ ಚುನಾವಣೆ ಎದುರಿಸುತ್ತಿದೆ. ತುಮಕೂರಿನಿಂದ ಜೆಡಿಎಸ್ ಸದಸ್ಯರಾಗಿ ಗೆದ್ದಿದ್ದ ಹುಲಿನಾಯ್ಕರ್ ಈಗ ಅದೇ ಕ್ಷೇತ್ರದಿಂದ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಚುನಾವಣಾ ಕಣ ರಂಗೇರುವಂತೆ ಮಾಡಿದ್ದಾರೆ.

ಈ ಕ್ಷೇತ್ರದಿಂದ ಹಾಲಿ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಪುನರಾಯ್ಕೆ ಬಯಸಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಕ್ಷೇತ್ರದಿಂದ ಕಾಂಗ್ರೆಸ್‍ನ ಹಾಲಿ ಸದಸ್ಯ ದಯಾನಂದ ರೆಡ್ಡಿ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ವಿಜಯಪುರದಿಂದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಎಲ್ಲಾ ಪಕ್ಷಗಳು ಬಂಡಾಯ ಅಭ್ಯರ್ಥಿಗಳನ್ನು ಪಕ್ಷದಿಂದ ಅಮಾನತುಪಡಿಸಿವೆ.

ಕಳೆದ 13 ದಿನಗಳಿಂದ ನಡೆದ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದರು. ಶುಕ್ರವಾರ ಬೆಳಿಗ್ಗೆಯೇ ಬಹಿರಂಗ ಪ್ರಚಾರಕೆ ತೆರೆ ಬಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಹಾಗೂ ಶನಿವಾರ ಅಭ್ಯರ್ಥಿಗಳ ವೈಯಕ್ತಿಕ ಭೇಟಿ ಹಾಗೂ ಕೊನೆ ಕಸರತ್ತಿಗೆ ಆದ್ಯತೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ, ಪ್ರಹ್ಲಾದ್ ಜೋಶಿ ಸೇರಿದಂತೆ ಎಲ್ಲಾ ರಾಜ್ಯವ್ಯಾಪಿ ಪ್ರವಾಸ ನಡೆಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮ ಹಾಕಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆ ಹಾಗೂ ಸವಾಲಿನಿಂದ ಕೂಡಿದೆ. ಮೇಲ್ಮನೆಯಲ್ಲಿ ಈಗಿರುವ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಬೇಕಾದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅನಿವಾರ್ಯತೆ ಎದುರಾಗಿದೆ.

Write A Comment