ಕನ್ನಡ ವಾರ್ತೆಗಳು

ನಾಳೆಯಿಂದ ಶ್ರೀ ನಾಲ್ವರ್ ದೈವಸ್ಥಾನದ ಕಳಿಯಾಟ ಮಹೋತ್ಸವ ಆರಂಭ : ಒಂದೂವರೆ ಸಾವಿರ ಪ್ರೇತಗಳಿಗೆ ವಿಮೋಚನೆ..!

Pinterest LinkedIn Tumblr

Kaliyaata_kola_1

ಮಂಗಳೂರು, ಡಿ.27: ಉತ್ತರ ಕೇರಳ ಮತ್ತು ಕರ್ನಾಟಕದಲ್ಲಿ ಪರಮೋನ್ನತ ನ್ಶಾಯಸ್ಥಾನವೆಂದು ಪ್ರಸಿದ್ಧವಾಗಿರುವ ಸನಾತನ ಸತ್ಯಗಳ ಕಾಸರಗೋಡಿನ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದ ವಾರ್ಷಿಕ ಕಳಿಯಾಟ ಮಹೋತ್ಸವ ಡಿಸೆಂಬರ್ 28ರಿಂದ 2016ರ ಜನವರಿ 3ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಸರ್ವಸಿದ್ಧತೆಗಳು ಭರದಿಂದ ಸಾಗಿದೆ.

ಡಿ.28ರಂದು ಸಂಜೆ 4ಕ್ಕೆ ನಾಲ್ವರ್ ದೈವಸ್ಥಾನದ ಸನ್ನಿಧಿಗಳಾದ ಕೊಟ್ಟಾರ, ಪಡಿಪ್ಪುರೆ, ಕಳರಿವೀಡ್, ಕಾವ್‌ನಲ್ಲಿ ತಂತ್ರಿಯವರ ನೇತ್ರತ್ವದಲ್ಲಿ ಶುದ್ಧಿಕಲಶ, ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ.

ಡಿ. 29ರಂದು ಬೆಳಿಗ್ಗೆ ಕೊಟ್ಟಾರ, ಸನ್ನಿಧಿಗಳ ಆನೆ ಚಪ್ಪರ ಅಲಂಕಾರ ನಡೆಯಲಿದ್ದು, ಅಪರಾಹ್ನ ಶ್ರೀ ದೈವಗಳ ಮೂಲಸ್ಥಾನವಾದ ಕಾವಿನಿಂದ ಭಂಡಾರ ಆಗಮನ, ರಾತ್ರಿ 7 ಕ್ಕೆ ಎಳೆಯೋರ್ ದೈವಗಳ ದರ್ಶನ ಆರಂಭವಾಗಲಿದೆ.

ಡಿಸೆಂಬರ್ 30ರಂದು ಮುಂಜಾನೆ ಚಾಮುಂಡಿ ದೈವ ದರ್ಶನ, ಬೆಳಿಗ್ಗೆ 8.30 ಕ್ಕೆ ಪಂಜುರ್ಲಿ (ಉಗ್ರಮೂರ್ತಿ) ದೈವದರ್ಶನ, ಸಂಜೆ ಮೂತೋರ್ ದೈವಗಳ ದರ್ಶನ ನಡೆಯಲಿದೆ. ರಾತ್ರಿ ಭಾಗ್ಯತ್ತೂರು ಗದ್ದೆಯಲ್ಲಿ ಸುಡುಮದ್ದು ಪ್ರದರ್ಶನ ಬಳಿಕ ಬಂಬೇರಿಯಾ ಮತ್ತು ಮಾಣಿಚ್ಚಿ ದೈವಗಳ ದರ್ಶನ ನಡೆಯಲಿದೆ.

Kaliyaata_kola_2 Kaliyaata_kola_3 Kaliyaata_kola_4 Kaliyaata_kola_5 Kaliyaata_kola_6 Kaliyaata_kola_7 Kaliyaata_kola_8

ಡಿಸೆಂಬರ 31ರಂದು ಮುಂಜಾನೆ 4.30ಕ್ಕೆ ಚಾಮುಂಡಿ ದೈವ, ಬೆಳಿಗ್ಗೆ ಕುಂಡಂಕಲೆಯ ದೈವಗಳ ಸಂಚಾರ, 9.30 ರಿಂದ ಪಂಜುರ್ಲಿ (ಉಗ್ರ ಮೂರ್ತಿ) ದೈವ ದರ್ಶನ ನಡೆಯಲಿದೆ. ರಾತ್ರಿ 11.30ಕ್ಕೆ ಪಾಷಾಣ ಮೂರ್ತಿ ದೈವ ದರ್ಶನ ಆರಂಭವಾಗಲಿದೆ.

2016ಜನವರಿ 1ರಂದು ಬೆಳಿಗ್ಗೆ ರಕ್ತೇಶ್ವರಿ ದೈವದರ್ಶನ ಆರಂಭವಾಗಲಿದ್ದು ಭಾಗ್ಯತ್ತೂರು ಗದ್ದೆಯಲ್ಲಿ ಭಕ್ತರಿಗೆ ಅನುಗ್ರಹ ನೀಡಿ ತಿರುಮುಡಿ ಧರಿಸಿ ಕೊಟ್ಟಾರಕ್ಕೆ ಮೆರವಣಿಗೆ ಬಳಿಕ ತುಲಾಭಾರ ಸೇವೆ ಪ್ರಸಾದ ವಿತರಣೆ ನಡೆಯಲಿದೆ. ಅಪರಾಹ್ನ ವಿಷ್ಣುಮೂರ್ತಿ ದೈವ ದರ್ಶನ, ಬಳಿಕ ಪ್ರೇತ ವಿಮೋಚನೆ ನಡೆಯಲಿದೆ. ರಾತ್ರಿ 12ಕ್ಕೆ ಪಾಷಾಣಮೂರ್ತಿ ದರ್ಶನ ನಡೆಯಲಿದೆ.

2016 ಜನವರಿ 2ರಂದು ಮುಂಜಾನೆ 4ಕ್ಕೆ ದೈವಗಳ ಬೆಳಿಚ್ಚಪ್ಪಾಡರ ದರ್ಶನದೊಂದಿಗೆ ಇರಿಯಣ್ಣಿಗೆ ಎಳೆ ನೀರು ಸ್ನಾನಕ್ಕಾಗಿ ಮೆರವಣಿಗೆ, 9ಕ್ಕೆ ರಕ್ತೇಶ್ವರಿ ದೈವಾರಂಭ, ತುಲಾಭಾರ ಸೇವೆ, ಮಧ್ಯಾಹ್ನದ ಬಳಿಕ ವಿಷ್ಣುಮೂರ್ತಿ ದೈವದರ್ಶನ ಪ್ರಸಾದ ವಿತರಣೆ, ಪ್ರೇತ ವಿಮೋಚನೆ ನಡೆಯಲಿದೆ.

ಜನವರಿ 3ರಂದು ಬೆಳಿಗ್ಗೆ ಕಳಗ ಒಪ್ಪಿಸುವುದು ಬಳಿಕ ಭಂಡಾರ ನಿರ್ಗಮನದೊಂದಿಗೆ ಕಾರ್ಯಕ್ರಮಗಳ ಸಮಾಪ್ತಿಗೊಳ್ಳಲಿದೆ.

ವಿಶೇಷ ಸಿದ್ಧತೆ:

ಕಳಿಯಾಟ ಮಹೋತ್ಸವಕ್ಕೆ ಕೇರಳ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಿದ್ದು, ಇವರ ಅನುಕೂಲಕ್ಕಾಗಿ ವಿಶೇಷ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಮಹೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಭಕ್ತಾದಿಗಳಿಗೂ ಪ್ರಸಾದ ಭೋಜನ ವ್ಯವಸ್ಥೆಯಿದೆ.

1500 ಪ್ರೇತ ವಿಮೋಚನೆ:

ಅವಿಭಜಿತ ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು ಜಿಲ್ಲೆಯ ಜನತೆ ಕನಿಷ್ಠ ಹೆಸರೆತ್ತಲೂ ಭಯಪಡುವ ಶ್ರೀ ನಾಲ್ವರ್ ದೈವಸ್ಥಾನದಲ್ಲಿ ಪ್ರೇತ ವಿಮೋಚನೆ, ಅತ್ಯಂತ ಪ್ರಮುಖ ವಿಚಾರವಾಗಿದ್ದು ಈ ಬಾರಿಯೂ ಸುಮಾರು ಒಂದೂವರೆ ಸಾವಿರ ಪ್ರೇತಗಳಿಗೆ ವಿಮೋಚನೆ ನಡೆಯಲಿದೆ.

ದೈವಗಳ ಮುಂದೆ ನೊಂದ ಭಕ್ತರು ನಡೆಸುವ ಪ್ರಾರ್ಥನೆಯಲ್ಲಿ ಅಪರಾಧಿಗಳು ಸೂಕ್ತ ಪರಿಹಾರ ನಡೆಸದಿದ್ದಲ್ಲಿ ಅವರ ಮರಣಾನಂತರವೂ ಮೋಕ್ಷ ಸಿಗದೆ ದೈವಗಳ ಕೈಯಲ್ಲಿ ಸಿಲುಕಿಕೊಳ್ಳುವುದು ಇಲ್ಲಿನ ವಿಶೇಷತೆಯಾಗಿದ್ದು, ಇದಕ್ಕೆ ಅಗತ್ಯ ಪರಿಹಾರ ನಡೆಸಿ ಉತ್ಸವದ ಸಂದರ್ಭದಲ್ಲಿ ಸಂಬಂಧಪಟ್ಟವರು ದೈವಗಳ ಮುಂದೆ ಕ್ಷಮೆಯಾಚಿಸಿ ವಿಮೋಚನೆ ನಡೆಸುವುದು ವಾಡಿಕೆಯಾಗಿದೆ. ನೊಂದ ಭಕ್ತರ ಪ್ರಾರ್ಥನೆ ತಪ್ಪಿತಸ್ಥರ ಕುಟುಂಬಕ್ಕೆ ತಲೆ ಮಾರುಗಳ ಕಾಲ ಪರಿಣಾಮ ಬೀರುವುದು ಅನುಭವ ವೇದ್ಯ ಸತ್ಯವಾಗಿದ್ದು ದೈವಗಳ ಹೆಸರೆತ್ತಲು ಭಯಪಡಲು ಇದು ಮುಖ್ಯ ಕಾರಣವಾಗಿದೆ.

ಪರಮೋನ್ನತ ನ್ಯಾಯಸ್ಥಾನ:

ನ್ಯಾಯ ತೀರ್ಮಾನ ದೈವಸ್ಥಾನದಲ್ಲಿ ಅನಾದಿಕಾಲದಿಂದಲೂ ನಡೆದು ಬರುತ್ತಿರುವ ಸಂಪ್ರದಾಯವಾಗಿದ್ದು ಸತ್ಯಮೇವ ಜಯತೇ ಎಂಬ ಸಂದೇಶಕ್ಕೆ ಇದು ಪರ್ಯಾಯವಾಗಿ ಪ್ರಸಿದ್ಧವಾಗಿದೆ.

ಕೌಟುಂಬಿಕ ಜೀವನದಲ್ಲಿ ಕಲಹ, ಕಳವು, ಮೋಸ, ವಂಚನೆ ಪ್ರಕರಣಗಳಲ್ಲಿ, ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಲಾಗದ ಪರಸ್ಪರ ನಂಬಿಕೆಯ ವ್ಯವಹಾರಗಳಲ್ಲಿ ಅನ್ಯಾಯವಾದಾಗ ನೊಂದವರು ದೈವಸ್ಥಾನವನ್ನು ಸಂಪರ್ಕಿಸುವುದು ರೂಢಿಯಾಗಿದ್ದು ಪ್ರತಿವರ್ಷ ಸುಮಾರು ಎರಡು ಸಾವಿರದಷ್ಟು ಮಾತುಕತೆಗಳು ಈ ರೀತಿ ಬಗೆ ಹರಿಸಲ್ಪಡುತ್ತವೆ.

ಸ್ವಾತಂತ್ರ್ಯ ಪೂರ್ವದಲ್ಲಿ ನ್ಯಾಯ ತೀರ್ಮಾನಕ್ಕೆ ಕಾನತ್ತೂರು ಕ್ಷೇತ್ರವನ್ನು ಆಶ್ರಯಿಸುವುದೇ ಸಂಪ್ರದಾಯವಾಗಿದ್ದು ‘ಸತ್ಯ ಪ್ರಮಾಣ’ ದಂತಹ ಅಪೂರ್ವ ಸನ್ನಿವೇಷಗಳಿಗೂ ಸಾಕ್ಷಿಯಾಗಿತ್ತು. ಶ್ರೀ ದೈವಗಳ ಮುಂದೆ ನಡೆಯುವ ಆಣೆ, ಪ್ರಮಾಣದಲ್ಲಿ ತಪ್ಪಿತಸ್ಥರ ಭಾಗಕ್ಕೆ ವಂಶನಾಶದಂತಹ ಭೀಕರ ಪರಿಣಾಮ ಕಂಡು ಬಂದಿರುವುದರಿಂದ ಇತ್ತೀಚಿಗಿನ ದಿನಗಳಲ್ಲಿ ಇದಕ್ಕೆ ಅವಕಾಶ ನೀಡದೆ ಹಿಂಜರಿಸುವ ರೀತಿಯನ್ನು ಅನುಸರಿಸಲಾಗುತ್ತಿದೆ.

Write A Comment