ಕರ್ನಾಟಕ

ಮಹಿಳೆಯರಿಂದ ಕ್ರೈಮ್‌: ರಾಜ್ಯದಲ್ಲಿ ಭಾರೀ ಏರಿಕೆ!

Pinterest LinkedIn Tumblr

Ban27121501Medn-(1)ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಹೆಚ್ಚಾಗುತ್ತಿದೆ…!

ಹೌದು, ರಾಜ್ಯ ಅಪರಾಧ ದಾಖಲೀಕರಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಮಹಿಳೆಯರು ತೊಡಗುವುದು ಹೆಚ್ಚಾಗುತ್ತಿದ್ದು, 2015ನೇ ಸಾಲಿನಲ್ಲಿ 18 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮಹಿಳೆಯರೇ ಆರೋಪಿಗಳು.

ಅದರಲ್ಲೂ ಅಪರಾಧ ಕೃತ್ಯಗಳಲ್ಲಿ ಮೊದಲ ಸ್ಥಾನದಲ್ಲಿರುವ ರಾಜಧಾನಿ ಬೆಂಗಳೂರು ಮಹಿಳಾ ಆರೋಪಿಗಳು ಎಸಗುವ ಅಪರಾಧ ಕೃತ್ಯಗಳಲ್ಲೂ ಮುಂಚೂಣಿಯಲ್ಲಿದೆ. ನಂತರದ ಸ್ಥಾನ ಮಂಡ್ಯ ಜಿಲ್ಲೆಯದ್ದು.

ರಾಜ್ಯ ಅಪರಾಧ ದಾಖಲೀಕರಣ ಇಲಾಖೆ ನೀಡಿರುವ ಮಾಹಿತಿಯಂತೆ ಈ ವರ್ಷದ ಜನವರಿಯಿಂದ ಅಕ್ಟೋಬರ್‌ 10ರವರೆಗೆ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಅಂದಾಜು 1.9 ಲಕ್ಷ ಅಪರಾಧ ಪ್ರಕರಣಗಳಲ್ಲಿ 18,296 ಅಪರಾಧ ಕೃತ್ಯಗಳಲ್ಲಿ ಮಹಿಳೆಯರು ಭಾಗಿಯಾಗಿದ್ದಾರೆ. ವರ್ಷಾಂತ್ಯದ ವೇಳೆಗೆ ಇದು 24 ಸಾವಿರ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೊಲೆ, ಸುಲಿಗೆ, ಕಳ್ಳತನ, ಪಿಕ್‌ಪಾಕೆಟ್‌, ಸರಗಳ್ಳತನ, ವಂಚನೆ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗುತ್ತಿರುವುದು ಆತಂಕಕಾರಿ ವಿಷಯ.
ರಾಜ್ಯ ಅಪರಾಧ ದಾಖಲೀಕರಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 2015ರಲ್ಲಿ ಇದುವರೆಗೂ ನಡೆದ ಒಟ್ಟಾರೆ ಅಪರಾಧ ಕೃತ್ಯಗಳ ಪೈಕಿ ಶೇ.11ರಷ್ಟು ಪ್ರಕರಣಗಳಲ್ಲಿ ಮಹಿಳೆಯರೇ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. 2005ರ ಜನವರಿಯಿಂದ ಅಕ್ಟೋಬರ್‌ವರೆಗೆ ರಾಜ್ಯದಲ್ಲಿ 1.90 ಲಕ್ಷ ಅಪರಾಧ ಪ್ರಕರಣಗಳು ದಾಖಲಾಗಿದ್ದು, 18252 ಪ್ರಕರಣಗಳಲ್ಲಿ ಮಹಿಳೆಯರು ಭಾಗಿಯಾಗಿದ್ದಾರೆ.

ಮಹಿಳೆಯರೇ ಆರೋಪಿಗಳಾಗಿರುವ ಅಪರಾಧ ಕೃತ್ಯಗಳು ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 3,059 ನಡೆದಿದ್ದು, ಮಂಡ್ಯದಲ್ಲಿ 1087, ಬೆಳಗಾವಿಯಲ್ಲಿ 882, ಶಿವಮೊಗ್ಗದಲ್ಲಿ 797 ಹಾಗೂ ಹಾಸನದಲ್ಲಿ 741 ಕೃತ್ಯಗಳು ನಡೆದಿವೆ.

ಮಹಿಳೆಯರು ಆರೋಪಿಗಳಾಗಿರುವ ಅಪರಾಧ ಪ್ರಕರಣಗಳಲ್ಲಿ ಕೊನೆಯ ಸ್ಥಾನದಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್ ಇದೆ. ಅಲ್ಲಿ ಕೇವಲ 110 ಪ್ರಕರಣಗಳು ವರದಿಯಾಗಿವೆ ಎಂದು ಎಸ್‌ಸಿಆರ್‌ಬಿ ವರದಿಯಲ್ಲಿ ದಾಖಲಾಗಿದೆ.

ಈ ವರ್ಷ 25 ಸಾವಿರ ಪ್ರಕರಣ?:
2010ರಿಂದಲೂ ರಾಜ್ಯದಲ್ಲಿ ನಡೆದಿರುವ ಅಪರಾಧ ಕೃತ್ಯಗಳಲ್ಲಿ ಮಹಿಳೆಯರು ಭಾಗಿಯಾಗುವ ಸಂಖ್ಯೆ ಹೆಚ್ಚುತ್ತಲೇ ಇದೆ. ರಾಜ್ಯ ಅಪರಾಧ ದಾಖಲಾತೀಕರಣ ವಿಭಾಗ ನೀಡಿರುವ ಮಾಹಿತಿಯಂತೆ ರಾಜ್ಯದಲ್ಲಿ 2013ರಲ್ಲಿ ಮಹಿಳೆಯರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪ್ರಕರಣಗಳ ಸಂಖ್ಯೆ 23,022. 2014ರಲ್ಲಿ 23,959. ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ಅಪರಾಧ ಕೃತ್ಯಗಳಲ್ಲಿ ಮಹಿಳೆಯರು ಭಾಗಿಯಾಗಿರುವ ಪ್ರಕರಣಗಳ ಸಂಖ್ಯೆ 66 ಸಾವಿರ.

2015ರ ಅಂತ್ಯದ ವೇಳೆ ಮಹಿಳೆಯರು ಭಾಗಿಯಾಗುವ ಅಪರಾಧ ಕೃತ್ಯಗಳ ಸಂಖ್ಯೆ 25 ಸಾವಿರದ ಗಡಿ ಮುಟ್ಟುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಕೊಲೆ, ಸುಲಿಗೆ, ಕಳ್ಳತನ, ಪಿಕ್‌ಪಾಕೆಟ್‌, ಸರಗಳ್ಳತನ, ವಂಚನೆ ಇತ್ಯಾದಿ ಹೊರತುಪಡಿಸಿದರೆ ಮಹಿಳೆಯರ ವಿರುದ್ಧ ದಾಖಲಾಗಿರುವ ಹೆಚ್ಚಿನ ಅಪರಾಧ ಪ್ರಕರಣಗಳು ವೇಶ್ಯಾವಾಟಿಕೆಯದು.

ಸಮಾಜದ ವಾತಾವರಣ ಪುರುಷನ ಮೇಲೆ ಬೀರುವ ಪರಿಣಾಮವನ್ನೇ ಮಹಿಳೆಯರ ಮೇಲೂ ಬೀರುತ್ತಿದೆ. ಬದುಕನ್ನು ಚೆನ್ನಾಗಿ ಅನುಭವಿಸಬೇಕು ಎಂಬ ಪರಿಸ್ಥಿತಿಗೆ ಆಕೆ ಹೋಗಿ ನಿಂತಿದ್ದಾಳೆ. ಮಹಿಳೆ ಕೆಲವೊಮ್ಮೆ ವಿಕೃತಿಯ ಸರಕಾಗಿ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುಬಹುದು ಇಲ್ಲವೇ ಪರಿಸ್ಥಿತಿಯ ಒತ್ತಡದಿಂದ ಅಪರಾಧ ಕೃತ್ಯಗಳಲ್ಲಿ ಆಕಸ್ಮಿಕವಾಗಿ ಅಥವಾ ಉದ್ದೇಶ ಪೂರ್ವಕವಾಗಿ ತೊಡಗುತ್ತಿರಬಹುದು. ಜಾಗೃತಿಯಿಂದ ಇದರ ನಿರ್ಮೂಲನೆ ಸಾಧ್ಯ.
– ವಿಮಲಾ, ಜನವಾದಿ ಮಹಿಳಾ ಸಂಘಟನೆ
…………………………
ಸಂಪತ್‌ ತರೀಕೆರೆ
………………………….
ಉದಯವಾಣಿ

Write A Comment