ಕರ್ನಾಟಕ

ಪದಚ್ಯುತಿ ನಿರ್ಣಯಕ್ಕೆ ಸ್ಪೀಕರ್ ನಕಾರ I ಉಪಲೋಕಾಯುಕ್ತ ಅಡಿ ಸೇಫ್ । ಕಾಂಗ್ರೆಸ್ ಗೆ ಮುಖಭಂಗ

Pinterest LinkedIn Tumblr

eleಬೆಂಗಳೂರು, ಡಿ.28-ಹಠಕ್ಕೆ ಬಿದ್ದು ಉಪಲೋಕಾ ಯುಕ್ತ ಸುಭಾಷ್ ಬಿ. ಅಡಿ ಅವರನ್ನು ಪದಚ್ಯುತಿಗೊಳಿಸಲು ಮುಂದಾಗಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ ಉಂಟಾಗಿದೆ. ಕಾರಣ ಸುಭಾಷ್ ಬಿ. ಅಡಿ ಅವರನ್ನು ಪದಚ್ಯುತಿಗೊಳಿ ಸುವಂತೆ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದ ಪದಚ್ಯುತಿ ನಿರ್ಣಯವನ್ನು ತಿರಸ್ಕರಿಸಲು ವಿಧಾನಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪ ತೀರ್ಮಾನಿಸಿದ್ದಾರೆ. ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದ್ದು, ಕಾಂಗ್ರೆಸ್ ಮಂಡಿಸಿದ್ದ ಪದಚ್ಯುತಿ ನಿರ್ಣಯ ಶೈತ್ಯಾಗಾರ ಸೇರುವುದು ಖಚಿತವಾಗಿದೆ. ಕಳೆದ ನ.27ರಂದು ಸ್ವಜನಪಕ್ಷಪಾತ, ಅಧಿಕಾರದಲ್ಲಿ ಹಸ್ತಕ್ಷೇಪ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರ ಸಂಬಂಧಿ ಡಾ.ಶೀಲಾ ಪಾಟೀಲ್ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದ್ದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಅಡಿ ವಿರುದ್ಧ ಪದಚ್ಯುತಿ ನಿರ್ಣಯ ಮಂಡಿಸಲಾಗಿತ್ತು.
ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ಪದಚ್ಯುತಿ ನಿರ್ಣಯವನ್ನು ಮಂಡಿಸಿದ್ದರು. ಇದಕ್ಕೆ ಕಾಂಗ್ರೆಸ್‌ನ 76 ಮಂದಿ ಶಾಸಕರು ಸಹಿ ಹಾಕಿದ್ದರು. ಅಂದು ಕಾಗೋಡು ತಿಮ್ಮಪ್ಪ ಈ ಪದಚ್ಯುತಿ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಘೋಷಿಸಿದ್ದರು.
ಸಿಗದ ದಾಖಲೆಗಳು: ಸುಭಾಷ್ ಬಿ.ಅಡಿ ವಿರುದ್ಧ ಕಾಂಗ್ರೆಸ್‌ನ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ನೀಡಬೇಕೆಂದು ಕಾಗೋಡು ಲೋಕಾಯುಕ್ತ ಅಧಿಕಾರಿಗಳಿಗೆ ಸೂಚಿಸಿದ್ದರು.
ಲೋಕಾಯುಕ್ತ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥ ಕಮಲ್‌ಪಂತ್ ಹಲವು ದಿನಗಳಿಂದ ಅಡಿ ವಿರುದ್ಧ ದಾಖಲೆಗಳನ್ನು ಶೋಧಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವರ ವಿರುದ್ಧ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ಮಾಹಿತಿ ನೀಡಿದ್ದರು.
ಹೀಗೆ ಕಾಂಗ್ರೆಸ್ ಮಂಡಿಸಿದ್ದ ಪದಚ್ಯುತಿ ನಿರ್ಣಯವನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಪರಿಶೀಲನೆಗೆ ಕಳುಹಿಸಿಕೊಟ್ಟರೆ ಮುಖಭಂಗ ಉಂಟಾಗಬಹುದೆಂಬ ಆತಂಕ ಕಾಗೋಡು ತಿಮ್ಮಪ್ಪ ಅವರಿಗೆ ಉಂಟಾಗಿತ್ತು.
ಯಾವಾಗ ಸರ್ಕಾರ ತಮ್ಮನ್ನು ಪದಚ್ಯುತಿಗೊಳಿಸಲು ಮುಂದಾಯಿತೋ ಸುಭಾಷ್ ಬಿ. ಅಡಿ ತಕ್ಷಣವೇ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ರಾಜ್ಯ ಸರ್ಕಾರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ಪತ್ರವೊಂದನ್ನು ಬರೆದಿತ್ತು.
ಈ ಪತ್ರದ ಪ್ರಕಾರ ಸುಭಾಷ್ ಬಿ.ಅಡಿ ವಿರುದ್ಧ ಪದಚ್ಯುತಿ ನಿರ್ಣಯ ಮಂಡನೆಯಾಗಿರುವುದರಿಂದ ಕರ್ತವ್ಯಕ್ಕೆ ಹಾಜರಾಗುವಂತಿಲ್ಲ ಎಂದು ಸೂಚನೆ ನೀಡಲಾಗಿತ್ತು. ಇತ್ತ ಹೈಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಲು ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿತ್ತು. ಒಂದೆಡೆ ಅಡಿ ವಿರುದ್ಧ ದಾಖಲೆಗಳು ಸಿಗದಿರುವುದು ಹಾಗೂ ನ್ಯಾಯಾಲಯವೇ ಕರ್ತವ್ಯ ನಿರ್ವಹಣೆಗೆ ಹಸಿರು ನಿಶಾನೆ ತೋರಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿತ್ತು. ಯಾವಾಗ ದಾಖಲೆಗಳು ಸಿಗಲಿಲ್ಲವೋ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಸುಭಾಷ್ ಬಿ. ಅಡಿ ವಿರುದ್ಧ ಮಂಡಿಸಲಾಗಿದ್ದ ಪದಚ್ಯುತಿ ನಿರ್ಣಯವನ್ನು ಸ್ಪೀಕರ್ ಅಂಗೀಕರಿಸಿಲ್ಲ ಎಂದು ಯು ಟರ್ನ್ ಹೊಡೆದರು. ಅಂತಿಮವಾಗಿ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯಲು ಮುಂದಾಗಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪ ಪದಚ್ಯುತಿ ನಿರ್ಣಯವನ್ನು ತಿರಸ್ಕರಿಸಲು ಸಮ್ಮತಿಸಿದ್ದಾರೆ.

Write A Comment