ಕರ್ನಾಟಕ

ಕಾಲೇಜುಗಳಲ್ಲಿ ರಾಷ್ಟ್ರಗೀತೆ-ನಾಡಗೀತೆ ಹಾಡುವುದು ಕಡ್ಡಾಯ

Pinterest LinkedIn Tumblr

athemಬೆಂಗಳೂರು, ಡಿ.28-ಇನ್ನು ಮುಂದೆ ರಾಜ್ಯದ ಎಲ್ಲಾ ಪದವಿಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಗತಿ ಆರಂಭಕ್ಕೂ ಮುನ್ನ ಬೆಳಗ್ಗೆ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಕಾಲೇಜು ಶಿಕ್ಷಣ ಮಂಡಳಿ ಸುತ್ತೋಲೆಯನ್ನು ಹೊರಡಿಸಿದೆ. ಇದರಂತೆ ಸರ್ಕಾರಿ, ಖಾಸಗಿ ಅನುದಾನ ಹಾಗೂ ಅನುದಾನರಹಿತ ಕಾಲೇಜುಗಳಲ್ಲಿ ಬೆಳಗ್ಗೆ ಹತ್ತು ನಿಮಿಷಗಳ ಕಾಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಾಡಗೀತೆ ಹಾಗೂ ರಾಷ್ಟ್ರಗೀತೆ ಹಾಡಬೇಕು. ಈವರೆಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಾತ್ರ ನಾಡಗೀತೆ ಹಾಗೂ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಇದರಿಂದ ವಿನಾಯಿತಿ ನೀಡಲಾಗಿತ್ತು.
ನಾಡಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡುವಾಗ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯೂ ಕಡ್ಡಾಯವಾಗಿಪಾಲ್ಗೊಳ್ಳುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಒಂದು ವೇಳೆ ಯಾರಾದರೂ ಗೈರು ಹಾಜರಾದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ನಿರ್ದೇಶನ ನೀಡಲಾಗಿದೆ.
ಈಗಾಗಲೇ ರಾಜ್ಯದಲ್ಲಿರುವ ಎಲ್ಲಾ ಕಾಲೇಜುಗಳಿಗೆ ಸುತ್ತೋಲೆಗಳನ್ನು ಕಳುಹಿಸಿಕೊಡಲಾಗಿದ್ದು, ಬರುವ ಶೈಕ್ಷಣಿಕ ವರ್ಷದಿಂದ ಇದನ್ನು ಕಡ್ಡಾಯಗೊಳಿಸಬೇಕು. ಒಂದು ವೇಳೆ ಯಾವುದೇ ಕಾಲೇಜುಗಳು ನಿಯಮಕ್ಕೆ ವಿರುದ್ಧ ನಡೆದುಕೊಂಡರೆ ನೋಟಿಸ್ ನೀಡಿ ವಿವರಣೆ ಪಡೆಯುವಂತೆ ಸೂಚನೆ ಕೊಡಲಾಗಿದೆ. ಪ್ರೌಢಶಾಲೆ ಮುಗಿದ ಬಳಿಕ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಒಲವು ಮರೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಕಡ್ಡಾಯಗೊಳಿಸಲಾಗಿದೆ.
ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ನಾಡಗೀತೆ ಯಾವುದು, ಅದನ್ನು ರಚಿಸಿದವರು ಯಾರು ಎಂಬ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ವಿದ್ಯಾರ್ಥಿಗಳಿದ್ದಾರೆ ಎಂಬುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಈ ಕ್ರಮಕೈಗೊಂಡಿದೆ.

Write A Comment