ಕರಾವಳಿ

ಡಿ.31 :ಲಯನ್ಸ್ ಕ್ಲಬ್‌ನಿಂದ ಸಂಭ್ರಮದ ಹೊಸ ವರ್ಷಾಚರಣೆ – ‘ಸುಳಿಗೆ ಸಿಕ್ಕಿದಾಗ’ ಕನ್ನಡ-ತುಳು ಚಲನ ಚಿತ್ರದ ಪ್ರಥಮ ಪ್ರದರ್ಶನ

Pinterest LinkedIn Tumblr

Sandeep_Malani_Press_1

ಮಂಗಳೂರು,ಡಿ.29: ಸಂದೀಪ್ ಮಲಾನಿ ನಿರ್ದೇಶನದ 45 ನಿಮಿಷಗಳ ಅವಧಿಯ ಕನ್ನಡ-ತುಳು ಕಿರು ಚಲನಚಿತ್ರ “ಸುಳಿಗೆ ಸಿಕ್ಕಿದಾಗ” ಇದರ ಪ್ರಥಮ ಪ್ರದರ್ಶನವನ್ನು ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ ಆಶ್ರಯದಲ್ಲಿ ಹೊಸ ವರ್ಷದ ಮುನ್ನಾದಿನ ಡಿಸೆಂಬರ್ 31ರಂದು ಮಂಗಳೂರು ಅಲೋಶಿಯಸ್ ಪಿಯು ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಹೊಸ ವರ್ಷ ಆಚರಣೆ ಅಂಗವಾಗಿ ಮಲಾನಿ ಟಾಕೀಸ್ ವತಿಯಿಂದ ಯಶ್ ರಾಜ್ ಹೀರೋಯಿನ್ಸ್ ಡೇ ಜಾಯೆಂಗೆ’ ಎಂಬ ಸಂಗೀತ ಕಾರ್ಯಕ್ರಮವನ್ನು ಸಾದರಪಡಿಸಲಿದ್ದಾರೆ ಎಂದು ಚಿತ್ರದ ನಿರ್ದೇಶಕ ಸಂದೀಪ್ ಮಲಾನಿ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈಗಾಗಲೇ ಚಿತ್ರ ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿದೆ. ಬಾಲಿವುಡ್ ನಟಿ ಕಲ್ಪನಾ ಪಂಡಿತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಕಿರುಚಿತ್ರ ಮಹಿಳಾ ಸಬಲೀಕರಣಕ್ಕೊಂದು ಕೊಡುಗೆಯಾಗಿದೆ ಎಂದರು.

ಸಬಲೇಯಾದ ಮಹಿಳೆ ಎಲ್ಲ ಅಡೆತಡೆಗಳನ್ನು, ತೊಂದರೆಗಳನ್ನು ಎದುರಿಸಿ ತನ್ನ ಸ್ವಂತ ಕಾಲುಗಳ ಮೇಲೆ ನಿಂತು ತೋರಿಸಬಲ್ಲಲು ಎಂಬುದನ್ನು ಮಲಾನಿ ಅವರ ಚಿತ್ರ ಪ್ರತಿಪಾದಿಸುತ್ತದೆ. ಕಿರುಚಿತ್ರವನ್ನು ಅಮೆರಿಕ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದ್ದು, ಚಿತ್ರದಲ್ಲಿ ತುಳು ಮಾತನಾಡುವ ಕೆಲವು ಪಾತ್ರಗಳು ನಮ್ಮ ಕರಾವಳಿಯ ಸ್ಪರ್ಶವನ್ನು ಚಿತ್ರಕ್ಕೆ ನೀಡಿದೆ. ಹೊಸದಾಗಿ ಇಂಗ್ಲೀಷ್ ಕವನದ ತುಣುಕುಗಳನ್ನು ಸೇರಿಸಿ ತುಳುವಿನ ಪ್ರಸಿದ್ಧ ದಾಣೇ ಪೊಣ್ಣೆ ಎಂಬ ಹಾಡನ್ನು ಚಿತ್ರದಲ್ಲಿ ಅಳವಡಿಸಲಾಗಿದೆ.

Sandeep_Malani_Press_2 Sandeep_Malani_Press_3

ಕಲ್ಪನಾ ಪಂಡಿತ್ ನಾಯಕಿಯಾಗಿ ಅಭಿನಯಿಸಿದ್ದು, ವಿವೇಕ್ ಪಂಜಾಬಿ, ಆಕಾಶ್ ಹೋರ, ಕ್ಲೆಮೆಂಟ್ ಸಿಕ್ವೇರ ಎಂಬ ಮೂರು ಹೊಸಬರನ್ನು ಪರಿಚಯಿಸಲಾಗುತ್ತಿದೆ. ಕ್ಲಿಫ್ ಜಾಂಕೆ ಚಿತ್ರದ ಕಾರ್ಯಕಾರಿ ನಿರ್ಮಾಪಕ. ಚಿತ್ರದ ತಾರಾಬಳಗದಲ್ಲಿ ಮಂಗಳೂರು ಮೀನಾ ಮಲಾನಿ, ಚರಣ್ ಸುವರ್ಣ, ಕ್ಸೇವಿಯರ್ ಫೆರ್ನಾಂಡಿಸ್ , ರೊಸ್ಲಿನ್ ಸಿಕ್ವೇರಾ, ಐವಿ ಫೆರ್ನಾಂಡಿಸ್, ಗ್ಯಾಡ್ವಿನ್ ಫೆರ್ನಾಂಡಿಸ್, ಸಿಲ್ವರ್ ಮಲಾನಿ, ಮರೀನಾ ರೂಪಾ, ಪ್ರಿಯಾ ನೊರೊನ್ಹಾ ಮತ್ತಿತರರು ಇದ್ದಾರೆ.

ನಿತಿನ್ ಆಚಾರ್ಯ ಚಿತ್ರಕ್ಕಾಗಿ ಎರಡು ಹಾಡುಗಳನ್ನು ರಚಿಸಿದ್ದಾರೆ. ಸಂಭಾಷಣೆ ಬರೆದಿರುವ ಲಲಿತಾ ರಾಜಗೋಪಾಲ್ ಚಲನಚಿತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಸಂತೋಷ್ ಚಾವ್ಲಾ ಚಿತ್ರದ ಎಡಿಟಿಂಗ್ ಮಾಡಿದ್ದು, ಕಲ್ಪನಾ ಪಂಡಿತ್ ಕಥೆಯನ್ನು ಹೊಂದಿದ್ದು, ಸಂದೀಪ್ ಮಲಾನಿ ಚಿತ್ರಕತೆ ರಚಿಸಿ ನಿರ್ದೇಶಿಸಿದಗ್ದಾರೆ.

ಕಲ್ಪನಾ ಪಂಡಿತ್ ಜೊತೆ ಸಂದೀಪ್ ಮಲಾನಿ ನಿರ್ಮಿಸಿರುವ ಮೂರನೇ ಚಿತ್ರ ಇದಾಗಿದೆ. ‘ಜೋ ಜೋ ಲಾಲಿ’ ಎಂಬ ಎಚ್‌ಐವಿ ಏಡ್ಸ್ ಜಾಗೃತಿ ಚಿತ್ರ ಒಟ್ಟು ೧೪ ಪ್ರಶಸ್ತಿಗಳನ್ನು ಗೆದ್ದುಕೊಂಡಿದಲ್ಲದೆ, ಭಾರತದಾದ್ಯಂತ ಪ್ರದರ್ಶನಗೊಂಡು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿದೆ. ಎರಡನೆಯ ಚಿತ್ರ ಹಿಂದಿಯಲ್ಲಿ ನಿರ್ಮಿಸಲಾದ ಲಾನ್ಲೇವ ೫೫೫ ಉತ್ತರ ಭಾರತದ ಚಿತ್ರಮಂದಿರಗಳಲ್ಲಿ ೧೫೦ ದಿನಗಳ ಪ್ರದರ್ಶನ ಕಂಡಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರೇಕ್ಷಕರು, ಮಾಧ್ಯಮದವರು ಮತ್ತು ಚಿತ್ರರಂಗದವರು ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿ ಪ್ರಶಂಸಿಸಿದ್ದಾರೆ. ಸುಳಿಕೆ ಸಿಕ್ಕಿದವರು ಚಿತ್ರತಂಡದ ಅದ್ಭುತ ಕೆಲಸಕ್ಕೆ ಕನ್ನಡ ಸಿನಿಮಾರಂಗದ ಹಿರಿಯರಾದ ಪಾರ್ವತಮ್ಮ ರಾಜಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ. ಚಿತ್ರಪ್ರದರ್ಶನದ ಅನಂತರ ಹಿರಿಯ ನಟಿ ಜಯಂತಿ, ಗಿರಿಜಾ ಲೋಕೇಶ್, ರಾಷ್ಟ್ರೀಯ ಪ್ರಶಸ್ತಿ ನಟ ಸಂಚಾರಿ ವಿಜಯ್ ಅವರೊಂದಿಗೆ ಪಾರ್ವತಮ್ಮ ಅವರನ್ನು ಚಿತ್ರತಂಡದ ವತಿಯಿಂದ ಗೌರವಿಸಲಾಯಿತು ಎಂದು ಮಲಾನಿ ವಿವರಿಸಿದರು.

Sulige_silukidga_1 Sulige_silukidga_2 Sulige_silukidga_3 Sulige_silukidga_4 Sulige_silukidga_5 Sulige_silukidga_7

ಲಯನ್ಸ್ ಕ್ಲಬ್ ಅಶ್ರಯದಲ್ಲಿ ಸಂಭ್ರಮದ ಹೊಸ ವರ್ಷಾಚರಣೆ – ಉಚಿತ ಕೃತಕಾಂಗ ವಿತರಣಾ ಯೋಜನೆಗೆ ಸಂಪನ್ಮೂಲ ಸಂಗ್ರಹ

ಮಂಗಳೂರು : ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್ ವತಿಯಿಂದ ಬೃಹತ್ ಉಚಿತ ಕೃತಕಾಂಗ ವಿತರಣಾ ಯೋಜನೆಗೆ ಸಂಪನ್ಮೂಲ ಸಂಗ್ರಹಣೆಗಾಗಿ ಮಂಗಳೂರಿನ ಸಂತ ಆಲೋಶಿಯಸ್ ಪಿಯು ಕಾಲೇಜಿನ ಗೋನ್ಸಾಂಗ ಮೈದಾನದಲ್ಲಿ ದಿನಾಂಕ 31-12-2015 ರಂದು 2016ಹೊಸ ವರ್ಷದ ಆಗಮನವನ್ನು ಸಂಭ್ರಮದಿಂದ ಆಚರಿಸುವ ವೈವಿದ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ.

ಚಿತ್ರರಂಗದ ತಾರಾಮಣಿಗಳು ಭಾಗವಹಿಸುವ ಸಂಗೀತ, ನೃತ್ಯ ಮತ್ತಿತರ ಮನೋರಂಜನಾ ಕಾರ್ಯಕ್ರಮವನ್ನು ಸಾದರಪಡಿಸುತ್ತಾರೆ.
ಹೆಸರಾಂತ ಸಿನಿಮಾ ನಿರ್ದೇಶಕ ಸಂದೀಪ್ ಮಲಾನಿ ಅವರ ಮಹಿಳಾ ಸಬಲೀಕರಣ ಕುರಿತ ‘ಸುಳಿಗೆ ಸಿಕ್ಕಿದಾಗ’ ಕನ್ನಡ-ತುಳು ಕಿರುಚಿತ್ರದ ಮೊಟ್ಟ ಮೊದಲ ಪ್ರದರ್ಶನ ಮಂಗಳೂರಿನಲ್ಲಿ ನಡೆಯುತ್ತಿರುವುದು ಕಾರ್ಯಕ್ರಮದ ಪ್ರಮುಖ ಆಕರ್ಷಣೆ.

ಸಿನಿಮಾದ ತಾರಾಗಣದಲ್ಲಿರುವ ಬಾಲಿವುಡ್ ತಾರೆ ಕಲ್ಪನಾ ಪಂಡಿತ್, ನಟ ಆಕಾಶ್ ಹೋರ ಮತ್ತು ವಿವೇಕ್ ಪಂಜಾಬಿ ಅವರ ಸಮ್ಮುಖದಲ್ಲಿ ಮೊದಲ ಪ್ರದರ್ಶನ ಏರ್ಪಡಿಸಲಾಗಿದೆ.

ನಟ, ಮಾಡೆಲ್ ಅರ್ಜುನ್ ಕಾಫಿಕಾಡ್, ಬಲೇ ತೆಲಿಪಾಲೇ ಟಿವಿ ಶೋ ಖ್ಯಾತಿಯ ಉಮೇಶ್ ಮಿಜಾರ್, ನಟಿ-ಮಾಡೆಲ್ ಸೊನಾಲ್ ಮೊಂತೆರೊ ಮತ್ತು ಡಾನ್ಸ್ ಇಂಡಿಯ ಡಾನ್ಸ್ ಲಿಟ್ಲ್ ಮಾಸ್ಟರ್ ಚಾಂಪಿಯನ್ ಜ್ಞಾನ ಐತಾಳ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಅಂದು ಸಂಜೆ ಗಂಟೆ ಏಳು ಗಂಟೆಗೆ ಸರಿಯಾಗಿ ಕಿರುಚಿತ್ರದೊಂದಿಗೆ ಆರಂಭವಾಗಲಿದೆ.

ಮಕ್ಕಳು, ಯುವಕ-ಯುವತಿಯರು ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನು ಮನರಂಜಿಸಲು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರುಚಿಕರವಾದ ೮೦ ಕ್ಕೂ ಹೆಚ್ಚು ಖಾದ್ಯ ಸಹಿತ ವೈವಿಧ್ಯಮಯ ಆಹಾರಗಳೊಂದಿಗೆ ಹೊಸ ವರ್ಷದ ಮೃಷ್ಟಾನ್ನ ಭೋಜನವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Write A Comment