ರಾಂಚಿ: ಸೋಮವಾರ ರೈಲು ಪ್ರಯಾಣದ ವೇಳೆ ಮೂವರು ಸೈನಿಕರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು 14ರ ಹರೆಯದ ಬಾಲಕಿಯೊಬ್ಬಳು ದೂರಿದ್ದಾಳೆ.
ಆಕೆಯ ದೂರಿನ ಮೇರೆಗೆ ಓರ್ವ ಸೈನಿಕನನ್ನು ಬಂಧಿಸಿದ್ದು, ಇನ್ನಿತರರಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಲುಧಿಯಾನದಲ್ಲಿರುವ ಫ್ರೆಂಡ್ ಒಬ್ಬರನ್ನು ಭೇಟಿ ಮಾಡುವ ಸಲುವಾಗಿ ಬಾಲಕಿ ಹೌರಾ-ಅಮೃತಸರ ಎಕ್ಸ್ಪ್ರೆಸ್ನಲ್ಲಿ ಪ್ರಯಾಣ ಬೆಳೆಸಿದ್ದಳು. ಆ ವೇಳೆ ಸೈನಿಕರು ಆಕೆಗೆ ಮದ್ಯ ಕುಡಿಸಿ ಆಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಹೇಳಲಾಗಿದೆ.
ಇದಾದ ನಂತರ ಈಕೆ ಜಾರ್ಖಂಡ್ನ ದಿಯೋಗರ್ ಜಿಲ್ಲೆಯ ಮಧುಪುರ್ ಸ್ಟೇಷನ್ನಲ್ಲಿ ಇಳಿದು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಓರ್ವ ಸೈನಿಕನನ್ನು ಪೊಲೀಸರು ಬಂಧಿಸಿದ್ದಾರೆ.
ಆದಾಗ್ಯೂ, ಈ ಬಗ್ಗೆ ಸೇನೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇತ್ತ, ದೂರು ನೀಡಿದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.