ಅಂತರಾಷ್ಟ್ರೀಯ

ನೇಪಾಳ ಭೂಕಂಪ ಸಂತ್ರಸ್ತರನ್ನು ಕಾಡುತ್ತಿದೆ ತೀವ್ರ ಚಳಿ

Pinterest LinkedIn Tumblr

nepalಕಾಠ್ಮಂಡು: ನೇಪಾಳದಲ್ಲಿ ಏಪ್ರಿಲ್ 25 ರಂದು ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಲಕ್ಷಾಂತರು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಭೂಕಂಪದಿಂದ ಬದುಕಿ ಬಂದವರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಮುಂದಾಗಿರುವಾಗಲೇ ಚಳಿ ಅವರ ಬದುಕನ್ನು ಅಂತಂತ್ರಗೊಳಿಸಿದೆ.

ನೇಪಾಳದಾದ್ಯಂತ ಕಳೆದ 1 ತಿಂಗಳಿಂದ ಚಳಿ ತೀವ್ರವಾಗುತ್ತಿದ್ದು, ಚಳಿಗಾಳಿಗೆ ಇದುವರೆಗೆ ಕನಿಷ್ಠ 22 ಜನರು ಮೃತಪಟ್ಟಿದ್ದು, ಸಾವಿರಾರು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

ಭೂಕಂಪನವಾಗಿ 7 ತಿಂಗಳು ಕಳೆದರೂ ನೇಪಾಳ ಸರ್ಕಾರ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ವಿಫಲವಾಗಿದ್ದು, ಲಕ್ಷಾಂತರ ಜನರು ತಾತ್ಕಾಲಿಕ ಸೂರು ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಇದ್ದ ಮನೆಗಳನ್ನೂ ಕಳೆದುಕೊಂಡಿರುವ ಜನರು ಬದುಕು ಸಾಗಿಸಲು ಸಾಕಷ್ಟು ಪ್ರಯಾಸ ಪಡುತ್ತಿದ್ದಾರೆ. ಲಕ್ಷಾಂತರ ಜನರು ಟೆಂಟ್​ಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ನೇಪಾಳದಲ್ಲಿ ಚಳಿಗಾಲ ಆರಂಭವಾಗಿದ್ದು, ತೀವ್ರ ಚಳಿಗಾಳಿ ಬೀಸುತ್ತಿದ್ದು, ಜನರು ಚಳಿಯಿಂದ ಪಾರಾಗಲು ಹರ ಸಾಹಸ ಪಡುತ್ತಿದ್ದಾರೆ.

ಸರ್ಕಾರವು ಸೂಕ್ತ ಪರಿಹಾರ ಕಾರ್ಯಾಚರಣೆ ನಡೆಸಿಲ್ಲ, ನಮಗೆ ಅಗತ್ಯ ಸಾಮಗ್ರಿಗಳು ಮತ್ತು ವಸ್ತುಗಳನ್ನು ವಿತರಿಸಿಲ್ಲ. ಬೆಚ್ಚಗಿನ ಉಡುಪು ಇಲ್ಲದೆ, ಚಳಿಯಿಂದ ನಮ್ಮ ಬದುಕು ಅಸಹನೀಯವಾಗಿದೆ ಎಂದು ಭೂಕಂಪ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಏಪ್ರಿಲ್ 25 ರಂದು ಸಂಭವಿಸಿದ 7.8 ತೀವ್ರತೆಯ ಭೂಕಂಪನಕ್ಕೆ 9000 ಜನರು ಮೃತಪಟ್ಟು, ಸುಮಾರು 23 ಸಾವಿರ ಜನರು ಗಾಯಗೊಂಡಿದ್ದರು. ಲಕ್ಷಾಂತರು ಜನರು ನಿರಾಶ್ರಿತರಾಗಿದ್ದರು.

Write A Comment