ಕರ್ನಾಟಕ

ಬಿಎಸ್ ವೈ, ದೇವೇಗೌಡ,ಎಚ್ ಡಿಕೆ ಕ್ಷೇತ್ರದಲ್ಲಿ ಕೈ ಮೇಲುಗೈ;ಹೊಣೆ ಯಾರು

Pinterest LinkedIn Tumblr

B.-Sಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯಾಗಿದ್ದ ಹಾಗೂ ವಿಪರೀತ ಹಣದ ಹೊಳೆ ಹರಿಯಲು ಕಾರಣವಾಗಿದ್ದ ರಾಜ್ಯದ 20ಕ್ಷೇತ್ರಗಳಲ್ಲಿನ 25 ವಿಧಾನಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 13 ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಚಂಡ ಜಯಭೇರಿ ಬಾರಿಸಿದೆ. ಆದರೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತೀವ್ರ ಮುಖಭಂಗಕ್ಕೊಳಗಾಗಿದೆ. ಅಲ್ಲದೇ ಬಿಜೆಪಿ, ಜೆಡಿಎಸ್ ನೊಳಗೆ ಮತ್ತೆ ಭಿನ್ನಮತದ ಹೊಗೆಯಾಗತೊಡಗಿದೆ.

ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು:
ಬಿಜೆಪಿಯ ಭದ್ರಕೋಟೆಯಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಕೆ ಸಿದ್ರಾಮಣ್ಣ ಪರಾಜಯಗೊಂಡು, ಕಾಂಗ್ರೆಸ್ ಅಭ್ಯರ್ಥಿ ಆರ್ ಪ್ರಸನ್ನ ಕುಮಾರ್ ಜಯ ಸಾಧಿಸಿದ್ದಾರೆ. ಪಕ್ಷದ ಹಿರಿಯ ಮುಖಂಡ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಸಿದ್ರಾಮಣ್ಣ ಬದಲು ವೀರಶೈವ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದು ಸೂಚಿಸಿದ್ದಾರೆನ್ನಲಾಗಿತ್ತು. ಆದರೆ ಯಡಿಯೂರಪ್ಪನವರ ಮಾತನ್ನು ಕಡೆಗಣಿಸಿ ಸಿದ್ರಾಮಣ್ಣನವರಿಗೆ ಟಿಕೆಟ್ ಕೊಡಲಾಗಿದ್ದರಿಂದ ಯಡಿಯೂರಪ್ಪನವರು ಕೇವಲ ಅರ್ಧ ದಿನ ಮಾತ್ರ ಅಭ್ಯರ್ಥಿ ಪರ ಪ್ರಚಾರ ಮಾಡಿ ಸುಮ್ಮನಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಹಾಸನದಲ್ಲಿ ಜೆಡಿಎಸ್ ಕೋಟೆಗೆ ಕೈ ಲಗ್ಗೆ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ತವರು ಕ್ಷೇತ್ರವಾದ ಹಾಸನದಲ್ಲಿ ಜೆಡಿಎಸ್ ಭದ್ರಕೋಟೆ. ಆದರೆ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನ ಹಾಲಿ ಸದಸ್ಯ ಪಟೇಲ್ ಶಿವರಾಂ ಅವರು ಪರಾಜಯಗೊಂಡಿದ್ದಾರೆ. ಕಾಂಗ್ರೆಸ್ ನ ಎಂಎ ಗೋಪಾಲಸ್ವಾಮಿ ಜಯ ಸಾಧಿಸುವ ಮೂಲಕ ಜೆಡಿಎಸ್ ಕೋಟೆಗೆ ಕಾಂಗ್ರೆಸ್ ಲಗ್ಗೆ ಇಟ್ಟಂತಾಗಿದೆ.

ಕೋಲಾರದಲ್ಲಿ ಮುನಿಯಪ್ಪ ಬೆಂಬಲಿತ ಅಭ್ಯರ್ಥಿಗೆ ಸೋಲು:
ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಕೋಲಾರ ಪರಿಷತ್ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲೇ ಗೊಂದಲದ ಗೂಡಾಗಿತ್ತು. ಸಂಸದ ಮುನಿಯಪ್ಪ, ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ವೀರಪ್ಪ ಮೊಯ್ಲಿ ಜಿದ್ದಾಜಿದ್ದಿನಿಂದಾಗಿ ಕೊನೆಗೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೋಲಾರದಲ್ಲಿ ಮುನಿಯಪ್ಪ ಬೆಂಬಲಿತ ಎಂಎಲ್ ಅನಿಲ್ ಕುಮಾರ್ ಗೆ ಟಿಕೆಟ್ ನೀಡಲಾಗಿತ್ತು. ಆದರೆ ಜೆಡಿಎಸ್ ನ ಸಿಆರ್ ಮನೋಹರ್ ಕುಮಾರ್ ಗೆಲುವು ಸಾಧಿಸಿದ್ದು, ಮುನಿಯಪ್ಪ ಮುಖಭಂಗ ಅನುಭವಿಸುವಂತಾಗಿದೆ.

ಬೆಂಗಳೂರು ಗ್ರಾಮಾಂತರದಲ್ಲಿ ಕುಮಾರಸ್ವಾಮಿಗೆ ಮುಖಭಂಗ:
ಬೆಂಗಳೂರು ಗ್ರಾಮಾಂತರ ಜೆಡಿಎಸ್ ಪ್ರಾಬಲ್ಯ ಹೊಂದಿತ್ತು. ಆದರೂ ಈ ಬಾರಿ ಜೆಡಿಎಸ್ ನ ಹಾಲಿ ಸದಸ್ಯ ಇ ಕೃಷ್ಣಪ್ಪ ಪರಾಜಯಗೊಂಡಿದ್ದಾರೆ. ಡಿಕೆಶಿ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ಜಯಭೇರಿ ಬಾರಿಸುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖಭಂಗಕ್ಕೊಳಗಾಗುವಂತಾಗಿದೆ.

ವಿಜಯಪುರದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಗೆದ್ದ ಯತ್ನಾಳ್:
ವಿಜಯಪುರ ದ್ವಿಸದಸ್ಯ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಗೆಲುವಿನ ನಗು ಬೀರಿದ್ದಾರೆ. ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ಜಿಎನ್ ನ್ಯಾಮಗೌಡ ಸೋತು ಮುಖಭಂಗ ಅನುಭವಿಸಿದ್ದಾರೆ.

ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಪರಾಕ್ರಮ;
ಬೆಳಗಾವಿ ದ್ವಿಸದಸ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದ ವಿವೇಕ್ ರಾವ್ ಪಾಟೀಲ್ ರಾಜ್ಯದಲ್ಲಿಯೇ ಅತಿ ಹೆಚ್ಚು ಮತ ಪಡೆದು ಜಯಗಳಿಸಿರುವುದು ಈ ಚುನಾವಣೆಯ ಹೈಲೈಟ್ ಆಗಿದೆ.

ಇದು ನನ್ನ ವೈಯಕ್ತಿಕ ಗೆಲುವು: ಸಂದೇಶ್ ನಾಗರಾಜ್
ಮೈಸೂರು ಚಾಮರಾಜನಗರ ದ್ವಿಸದಸ್ಯ ಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್ ನ ಸಂದೇಶ್ ನಾಗರಾಜ್ ಗೆಲುವು ಸಾಧಿಸಿದ್ದಾರೆ. ಇದು ನನ್ನ ವೈಯಕ್ತಿಕ ಗೆಲುವು. ಪಕ್ಷದ ನಾಯಕರ, ಮುಖಂಡರ ವರ್ಚಸ್ಸಿನಿಂದ ಗೆಲುವು ಸಾಧಿಸಿಲ್ಲ ಎಂದು ಸಂದೇಶ್ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.
-ಉದಯವಾಣಿ

Write A Comment