ಕರ್ನಾಟಕ

ನೀಲಿನಾಲಿಗೆ ರೋಗಕ್ಕೆ ಸಾವಿರಾರು ಕುರಿ ಬಲಿ

Pinterest LinkedIn Tumblr

STATE_67ಹೊಸಹಟ್ಟಿ ಕುಮಾರ
ಬೆಂಗಳೂರು: ರಾಜಧಾನಿ ಸುತ್ತಲಿನ ಜಿಲ್ಲೆಗಳಲ್ಲಿ ನೀಲಿನಾಲಿಗೆ ರೋಗ ವ್ಯಾಪಕವಾಗಿದ್ದು, 3-4 ತಿಂಗಳಲ್ಲಿ 4600ಕ್ಕೂ ಹೆಚ್ಚು ಕುರಿಗಳು ಬಲಿಯಾಗಿವೆ.

ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೋಗ ತೀವ್ರವಾಗಿದ್ದು, ರಾಮನಗರಕ್ಕೂ ಹರಡುವ ಸಾಧ್ಯತೆಯಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರದ ಜಿಲ್ಲೆಯ ಹೊಸಕೋಟೆ ತಾಲೂಕಿನ ಹಲವೆಡೆ ಈ ಮಾರಣಾಂತಿಕ ರೋಗ ಕಾಣಿಸಿಕೊಳ್ಳುತ್ತಿದೆ. ಕೋಲಾರ ಜಿಲ್ಲೆಯಲ್ಲಿ 2000 ಕುರಿಗಳು ಮೃತಪಟ್ಟಿದ್ದು, ಶ್ರೀನಿವಾಸಪುರ ತಾಲೂಕಲ್ಲಿ 900, ಮುಳಬಾಗಿಲಲ್ಲಿ 500 ಕುರಿಗಳು ಸಾವನ್ನಪ್ಪಿವೆ. ತುಮಕೂರು ಜಿಲ್ಲೆಯಲ್ಲಿ 1227, ಚಿಕ್ಕಬಳ್ಳಾಪುರದಲ್ಲಿ 1375 ಕುರಿಗಳು ಅಸುನೀಗಿವೆ.

ರೋಗದ ಲಕ್ಷಣಗಳೇನು?: ಬಾಯಿ, ಮೂಗಿನ ಒಳಪದರ ಕೆಂಪಾಗಿ, ತುಟಿ, ವಸಡು ಹಾಗೂ ನಾಲಿಗೆ ಊದಿಕೊಳ್ಳುತ್ತದೆ. ಕೆಲವೊಮ್ಮೆ ನಾಲಿಗೆ ನೀಲಿವರ್ಣಕ್ಕೆ ತಿರುಗುತ್ತದೆ. ವಿಪರೀತ ಜೊಲ್ಲು ಕಾಣಿಸುತ್ತದೆ. ಬಳಿಕ ಜ್ವರ ಕಾಣಿಸಿಕೊಂಡು ಆಹಾರ ತಿನ್ನುವುದನ್ನು ನಿಲ್ಲಿಸುತ್ತವೆ. ಜ್ವರ ಕಡಿಮೆಯಾಗುತ್ತಿದ್ದಂತೆ ಭೇದಿ, ಕುಂಟುವಿಕೆ ಕಾಣಿಸಿಕೊಳ್ಳುತ್ತದೆ. ನಂತರ ಕತ್ತನ್ನು ಒಂದು ಕಡೆ ತಿರುಗಿಸಿಟ್ಟುಕೊಳ್ಳುತ್ತವೆ. ಚಿಕಿತ್ಸೆ ಜತೆಗೆ ಸೂಕ್ತ ಆರೈಕೆ ಸಿಗದಿದ್ದರೆ ಕುರಿ/ ಮೇಕೆಗಳು ಸಾವನ್ನಪ್ಪುತ್ತವೆ.

ಪರಿಹಾರ ಕ್ರಮವೇನು?: ವೈರಸ್​ನಿಂದ ಕಾಣಿಸಿಕೊಳ್ಳುವ ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಲಸಿಕೆ ಹಾಕಿಸುವುದು, ರೋಗಪೀಡಿತ ಕುರಿಯನ್ನು ಮಂದೆಯಿಂದ ಬೇರ್ಪಡಿಸುವುದರಿಂದ ರೋಗ ಹರಡುವಿಕೆಯನ್ನು ಸ್ವಲ್ಪಮಟ್ಟಿಗೆ ತಡೆಯಬಹುದು. ಕ್ಯೂಲಿಕಾಯ್್ಡ್ಸಕುರುಡು ನೊಣ) ಈ ರೋಗವನ್ನು ಹರಡುತ್ತದೆ. ಕುರಿ ಅಥವಾ ಮೇಕೆಯ ನಾಲಿಗೆ, ವಸಡು ಹಾಗೂ ಮೂಗಿನ ಕೆಳಗೆ ಸೋಡಾ ಬೆರೆಸಿದ ನೀರಿನಿಂದ ದಿನಕ್ಕೆರಡು ಬಾರಿ ತೊಳೆದು ಶುಚಿಗೊಳಿಸಬೇಕು. ನಂತರ ಬಾಯಿಯಲ್ಲಿನ ಹುಣ್ಣುಗಳಿಗೆ ಬೊರಾಕ್ಸ್ ಪುಡಿಮಿಶ್ರಿತ ಗ್ಲಿಸರಿನ್ ಅಥವಾ ಜೇನುತುಪ್ಪ ಸವರಬೇಕು ಎಂಬುದು ಪಶುವೈದ್ಯರ ಸಲಹೆ.

ಪರಿಹಾರ ಅವೈಜ್ಞಾನಿಕ: ರೋಗಗಳಿಂದ ಮೃತಪಡುವ ಕುರಿಗಳಿಗೆ ಸರ್ಕಾರ ನೀಡುವ ಪರಿಹಾರ ಅವೈಜ್ಞಾನಿಕ ವಾಗಿದೆ. ಎಷ್ಟೇ ಕುರಿ ಸತ್ತರೂ ಒಬ್ಬ ಸಾಕಣೆದಾರನಿಗೆ ಒಂದು ಕುರಿಯ ಸಾವಿಗೆ ನೀಡಲಾಗುವ 5 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಈ ಪರಿಹಾರವನ್ನು ರೋಗದಿಂದ ಮೃತಪಡುವ ಎಲ್ಲ ಕುರಿಗಳಿಗೂ ಅನ್ವಯಿಸಬೇಕು ಎಂಬುದು ಸಾಕಣೆದಾರರ ಒತ್ತಾಯ.

ರೋಗಪೀಡಿತ ಕುರಿ ಮಾಂಸ ತಿನ್ನಬಹುದು

ರೋಗ ತಗುಲಿದ ಕುರಿಯ ಮಾಂಸ ಸೇವಿಸಿದರೆ ಯಾವುದೇ ಅಪಾಯವಿಲ್ಲ. ಅಷ್ಟೇ ಅಲ್ಲ, ಈ ರೋಗ ಮನುಷ್ಯರಿಗೆ ತಗುಲುವುದಿಲ್ಲ ಎಂದು ಪಶು ಸಂಗೋಪನೆ ಇಲಾಖೆಯ ಗ್ರಾಮಾಂತರ ಜಿಲ್ಲಾ ಉಪ ನಿರ್ದೇಶಕ ಡಾ.ಶಿವರುದ್ರಪ್ಪ ವಿಜಯವಾಣಿಗೆ ತಿಳಿಸಿದ್ದಾರೆ. ಮಾಂಸವನ್ನು ಚೆನ್ನಾಗಿ ಬೇಯಿಸುವುದರಿಂದ ರೋಗಾಣುಗಳು ಜೀವಂತವಾಗಿರುವುದಿಲ್ಲ. ಹೀಗಾಗಿ ಮಾಂಸ ಸೇವನೆ ವಿಚಾರವಾಗಿ ಯಾವುದೇ ಭೀತಿ ಬೇಡ ಎಂದಿದ್ದಾರೆ.

ವ್ಯಾಪಕವಾಗಿ ಹರಡುತ್ತಿರುವ ನೀಲಿ ನಾಲಿಗೆ ರೋಗ ನಿಯಂತ್ರಣಕ್ಕೆ ಎಲ್ಲ ರೀತಿ ಕ್ರಮ ಕೈಗೊಳ್ಳಲಾಗಿದೆ. ರೋಗ ತಡೆಗೆ ಲಸಿಕೆ ನೀಡಲಾಗುತ್ತಿದೆ. ಎಲ್ಲಿಯೂ ಲಸಿಕೆ ಕೊರತೆ ಇಲ್ಲ. ಕುರಿ ಸಾಕಣೆದಾರರು ಆತಂಕಪಡುವುದು ಬೇಡ.

| ಡಾ.ಶಿವರಾಮಭಟ್ ಅಪರ, ನಿರ್ದೇಶಕ, ಪಶುಸಂಗೋಪನೆ ಇಲಾಖೆ

Write A Comment