ಕರ್ನಾಟಕ

ಸರ್ಕಾರದಿಂದ ಕುವೆಂಪುಗೆ ಅಪಮಾನ: ಬರಗೂರು ರಾಮಚಂದ್ರಪ್ಪ

Pinterest LinkedIn Tumblr

CITY_182ಬೆಂಗಳೂರು: ವಿವಾದಗಳು ತಲೆ ಎತ್ತುತ್ತವೆ ಎಂಬ ಅಂಜಿಕೆಯಲ್ಲಿ ನಾಡಗೀತೆ ಧಾಟಿ, ಸಾಹಿತ್ಯದ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದೆ ಸುಮ್ಮನಿರುವ ರಾಜ್ಯ ಸರ್ಕಾರ ನಾಡಗೀತೆಗಷ್ಟೆ ಅಲ್ಲದೆ ಅದನ್ನು ರಚಿಸಿದ ರಾಷ್ಟ್ರಕವಿ ಕುವೆಂಪು ಅವರಿಗೂ ಅಪಮಾನ ಮಾಡುತ್ತಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ‘ರಾಷ್ಟ್ರಕವಿ ಕುವೆಂಪು ನೆನಪಿನಂಗಳದಲ್ಲಿ ಕನ್ನಡ ಚಿಂತನೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಡಗೀತೆಯಾಗಲಿ ಎಂಬ ಭಾವನೆಯಲ್ಲಿ ಕುವೆಂಪು ಈ ಗೀತೆ ರಚಿಸಲಿಲ್ಲ. ನಾಡಗೀತೆಯಾಗಿ ರಾಜ್ಯ ಸರ್ಕಾರವೇ ಆಯ್ಕೆ ಮಾಡಿತು. ಆನಂತರ ಅನೇಕ ವಿವಾದಗಳನ್ನು ಸೃಷ್ಟಿಸಲಾಯಿತು. ಹೊಸ ಪದಗಳ ಸೇರ್ಪಡೆ, ತುಂಡರಿಸುವಿಕೆ ಹಾಗೂ ರಾಗದ ಕುರಿತಾಗಿ ಆಕ್ಷೇಪಗಳು ಕೇಳಿ ಬಂದಾಗ ತಜ್ಞರ ಸಮಿತಿ ರಚಿಸಲಾಗಿತ್ತು. ಡಾ. ಚನ್ನವೀರ ಕಣವಿ ನೇತೃತ್ವದ ಸಮಿತಿ ಕಳೆದ ವರ್ಷವೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ವರದಿ ಸಲ್ಲಿಕೆಯಾಗಿ ವರ್ಷ ಕಳೆದಿದ್ದರೂ ಸರ್ಕಾರ ಸುಮ್ಮನಿದೆ ಎಂದರು.

ಮಾತೃಭಾಷಾ ಶಿಕ್ಷಣ ನೀತಿ ಕುರಿತು ಮಾತನಾಡಿದ ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ, ಭಾರತವೂ ಸೇರಿ ಇಂಗ್ಲಿಷನ್ನು ಶಿಕ್ಷಣ ಮಾಧ್ಯಮವನ್ನಾಗಿಸಿಕೊಂಡ ಯಾವುದೇ ದೇಶ ಶಿಕ್ಷಣದಲ್ಲಿ ಮುಂದಿಲ್ಲ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ತಿಮ್ಮಯ್ಯ, ಕಾರ್ಯಾಧ್ಯಕ್ಷ ಸಿದ್ದಯ್ಯ ಮತ್ತಿತರರಿದ್ದರು.

Write A Comment