ಕರ್ನಾಟಕ

ಕಳೆದ ಮೂರು ವರ್ಷಗಳಿಗಿಂತ ಈ ವರ್ಷ ಅಪರಾಧ ಪ್ರಕರಣಗಳು ಇಳಿಮುಖ : ಮೆಘರಿಕ್

Pinterest LinkedIn Tumblr

megarikಬೆಂಗಳೂರು,ಡಿ.30- ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಸರಗಳ್ಳತನ, ಡಕಾಯತಿ, ಕೊಲೆ, ದರೋಡೆ, ಅತ್ಯಾಚಾರ, ಕಳ್ಳತನ, ನಾಪತ್ತೆ ಮತ್ತು ಅಪಹರಣ ಪ್ರಕರಣಗಳು ಕಡಿಮೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಮೆಘರಿಕ್ ಇಂದಿಲ್ಲಿ ಹೇಳಿದರು. ನಗರದಲ್ಲಿಂದು ಹಮ್ಮಿಕೊಂಡಿದ್ದ ಅಪರಾಧ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಫೋಸ್ಕೋ ಕಾಯ್ದೆಯಡಿ 234 ಪ್ರಕರಣ, ಗೂಂಡಾ ಕಾಯ್ದೆಯಡಿ 25ಪ್ರಕರಣ, 788 ನಾಪತ್ತೆ ಮತ್ತು ಅಪಹರಣ ಪ್ರಕರಣಗಳು ನಡೆದಿದ್ದು, ಈ ಪೈಕಿ 554 ಪ್ರಕರಣಗಳು ಪತ್ತೆಯಾಗಿವೆ. 337 ಸರಗಳವು ಪ್ರಕರಣಗಳ ಪೈಕಿ 215 ಪತ್ತೆಯಾಗಿವೆ ಎಂದು ಆಯುಕ್ತರು ವಿವರಣೆ ನೀಡಿದರು.

ಕಳ್ಳತನವಾಗಿದ್ದ 91.48 ಕೋಟಿ ಮೌಲ್ಯದ ವಸ್ತುಗಳ ಪೈಕಿ 65.28 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ವಶಪಡಿಸಿಕೊಂಡ ಕಳವು ವಸ್ತುಗಳ ಪ್ರದರ್ಶನ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ನಗರದಲ್ಲಿನ ರೌಡಿಗಳ ಪರೇಡ್ ಕೂಡ ಮಾಡಿಸಲಾಗಿದೆ ಎಂದು ತಿಳಿಸಿದರು.

ಕಳೆದ ಒಂದು ತಿಂಗಳಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಸಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ಈ ಬಗ್ಗೆ ಸಾಮಾಜಿಕ ಜಾಲ ತಾಣಗಳ ಮೂಲಕ ಜಾಗೃತಿ ಮೂಡಿಸಲಾಗಿದೆ 13 ಲಕ್ಷ ಮಂದಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿದ್ದಾರೆ. 576 ವಾಟ್ಸ್‌ಆಪ್ ಗ್ರೂಪ್‌ಗಳನ್ನು ಮಾಡಲಾಗಿದೆ. 555 ಶಾಲೆಗಳಲ್ಲಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಲಾಗಿದೆ. 171 ಗಾರ್ಮೆಂಟ್ಸ್ ಹಾಗೂ 148 ಐಟಿಬಿಟಿ ಉದ್ಯೋಗಿಗಳೊಂದಿಗೆ ಸಂವಾದ ನಡೆಸಲಾಗಿದೆ ಎಂದು ತಿಳಿಸಿದರು.

181 ಎಟಿಎಂಗೆ ಸಂಬಂಧಿಸಿದಂತೆ ಬ್ಯಾಂಕ್ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ. ಪೇಯಿಂಗ್ ಗೆಸ್ಟ್‌ಗಳೊಂದಿಗೆ ಕೂಡಾ ಸಭೆ ನಡೆಸಲಾಗಿದೆ. 2000 ರೌಡಿಗಳ ಪರೇಡ್ ನಡೆಸಿ, ಬಾಕಿ ಇದ್ದ 6203 ಎಫ್‌ಐಆರ್‌ಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು. 2015ರಲ್ಲಿ 818 ರೌಡಿಗಳನ್ನು ಬಂಧಿಸಿರುವುದಲ್ಲದೆ, ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದ 25ರೌಡಿಗಳನ್ನು ಗೂಂಡಾಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅವರು ವಿವರಿಸಿದರು. ಪ್ರಸಕ್ತ ಸಾಲಿನಲ್ಲಿ 108 ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ವರದಿಯಾಗಿದ್ದು, ಇವುಗಳ ಪೈಕಿ 106 ಪ್ರಕರಣ ಪತ್ತೆಹಚ್ಚಿ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಹಾಗೂ 246 ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ 234 ಪ್ರಕರಣಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅವರು ವಿವರಿಸಿದರು.

Write A Comment