ಮನೋರಂಜನೆ

ವಿಷ್ಣುವರ್ಧನ್ 6ನೇ ಪುಣ್ಯತಿಥಿ;201ನೇ ಚಿತ್ರದ ಬೃಹತ್ ಪೋಸ್ಟರ್ ರಿಲೀಸ್

Pinterest LinkedIn Tumblr

Vishnu1

ಅಭಿಮಾನ್‌ ಸ್ಟುಡಿಯೋದ ಸುತ್ತಮುತ್ತ ಜಾತ್ರೆಯ ವಾತಾವರಣ. ವಾಹನ ದಟ್ಟಣೆ ಜೊತೆಗೆ ಜನ ದಟ್ಟಣೆ. ಕನ್ನಡದ ಬಾವುಟ ಹಿಡಿದ ಅಭಿಮಾನಿಗಳ ದಂಡು. ಜೊತೆಗೆ ಜೈಕಾರ. ಇದಕ್ಕೆ ಕಾರಣವಾಗಿದ್ದು ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಹಾಗೂ ನಾಗರಹಾವು. ಹೀಗೆಂದರೆ ನೀವು ಆಶ್ವರ್ಯಪಡಬೇಕಿಲ್ಲ. ಇಂದು ಅಭಿಮಾನ್‌ ಸ್ಟುಡಿಯೋದಲ್ಲಿ ಎರಡೆರಡು ಕಾರ್ಯಕ್ರಮ. ಒಂದು ಕಡೆ ಡಾ.ವಿಷ್ಣುವರ್ಧನ್‌ ಅವರ 6ನೇ ಪುಣ್ಯತಿಥಿಯಾದರೆ, ಮತ್ತೂಂದು ಕಡೆ ಅವರ 201ನೇ ಚಿತ್ರ “ನಾಗರಹಾವು’ನ ಬೃಹತ್‌ ಗಾತ್ರದ ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮ. ಹಾಗಾಗಿ, ಪ್ರತಿ ವರ್ಷಕ್ಕಿಂತ ಈ ವರ್ಷ ಅಭಿಮಾನಿಗಳ ಸಂಖ್ಯೆ ಕೂಡಾ ಹೆಚ್ಚಿತ್ತು. ರಸ್ತೆಯ ಇಕ್ಕೆಲಗಳಲ್ಲಿ “ಡಾ.ವಿಷ್ಣುವರ್ಧನ್‌ 201 ಚಿತ್ರ “ನಾಗರಹಾವು’ ಎಂದು ಬರೆದ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಬೆಳಗ್ಗೆಯೇ ಭಾರತಿ ವಿಷ್ಣುವರ್ಧನ್‌ ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿದ್ದರು.

ಒಂದು ಕಡೆ ಅಭಿಮಾನಿಗಳು ನೆಚ್ಚಿನ ನಟನ ಪುಣ್ಯತಿಥಿಗೆ ಬಂದರೆ ಮತ್ತೂಂದು ಕಡೆ ವಿಷ್ಣುವರ್ಧನ್‌ ಅವರ 201ನೇ ಚಿತ್ರ “ನಾಗರಹಾವು’ನ ಪೋಸ್ಟರ್‌ ರಿಲೀಸ್‌ಗೆ ಅನೇಕ ಗಣ್ಯರು ಬಂದಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿದಂತೆ ಚಿತ್ರರಂಗದ ಸಾಕಷ್ಟು ಮಂದಿ ಗಣ್ಯರು ಆಗಮಿಸಿ ನೆಚ್ಚಿನ ನಟನಿಗೆ ನಮನ ಸಲ್ಲಿಸಿದರು.

“ಸಾಹಸ ಸಿಂಹ, ಸ್ಟೈಲಿಶ್‌ ಸ್ಟಾರ್‌ ವಿಷ್ಣುವರ್ಧನ್‌ ಅವರ 201 ನೇ ಚಿತ್ರವಾಗಿ “ನಾಗರಹಾವು’ ಬರುತ್ತಿರುವುದು ಖುಷಿಯ ವಿಚಾರ. ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲಿ ಅಭಿಮಾನಿಗಳು ಸೇರಲು ಕಾರಣ ವಿಷ್ಣುವರ್ಧನ್‌ ಅವರು ಮಾಡಿದ ಸಿನಿಮಾ ಹಾಗೂ ಅವರ ಆದರ್ಶ’ ಎಂದು “ನಾಗರಹಾವು’ ಚಿತ್ರಕ್ಕೆ ಶುಭ ಹಾರೈಸಿದರು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ.

ಗಾಳಿಯಿಂದಲೇ ಅನಾವರಣ: 101 ಅಡಿ ಎತ್ತರದ ಬೃಹತ್‌ ಗಾತ್ರದ “ನಾಗರಹಾವು’ ಚಿತ್ರದ ಪೋಸ್ಟರ್‌ ಅನ್ನು ಗಣ್ಯರು ಅನಾವರಣಗೊಳಿಸಬೇಕಾಗಿತ್ತು. ಹಾಗಾಗಿ, ವೇದಿಕೆ ಪಕ್ಕದಲ್ಲಿ ಪೋಸ್ಟರ್‌ ನಿಲ್ಲಿಸಿ ಅದನ್ನು ಪರದೆಯಿಂದ ಮುಚ್ಚಲಾಗಿತ್ತು. ಅಭಿಮಾನ್‌ ಸ್ಟುಡಿಯೋದಲ್ಲಿ ಸೇರಿದ್ದ ಅಭಿಮಾನಿಗಳಿಗೆ ಪೋಸ್ಟರ್‌ ನೋಡುವ ಕುತೂಹಲ. ಎಷ್ಟು ಹೊತ್ತಿಗೆ ಅನಾವರಣ ಆಗುತ್ತೆಂಬ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಪೋಸ್ಟರ್‌ ದರ್ಶನ ಸಿಕ್ಕಿತು. ಹಾಗಂತ ಸೇರಿದ್ದ ಅತಿಥಿಗಳಿಂದ ಪೋಸ್ಟರ್‌ ಅನಾವರಣವಾಗಲಿಲ್ಲ. ಇನ್ನೇನು ಅತಿಥಿಗಳಿಂದ ಅನಾವರಣ ಮಾಡಿಸಬೇಕೆನ್ನುವಷ್ಟರಲ್ಲಿ ಜೋರಾಗಿ ಬಂದ ಗಾಳಿಗೆ ಪೋಸ್ಟರ್‌ ಮೇಲೆ ಹೊದಿಸಲಾಗಿದ್ದ ಪರದೆ ಹಾರಿ ಹೋಗುವ ಮೂಲಕ 101 ಅಡಿಯ “ನಾಗರಹಾವು’ ಪೋಸ್ಟರ್‌ ಅನ್ನು ಜೈಕಾರದೊಂದಿಗೆ ಅಭಿಮಾನಿಗಳು ಕಣ್ತುಂಬಿಕೊಂಡರು. ಅಷ್ಟೊತ್ತಿಗಾಗಲೇ ವೇದಿಕೆಯಲ್ಲಿ ಮಾತಿಗೆ ನಿಂತಿದ್ದ ಆರ್‌.ಅಶೋಕ್‌, ಅಭಿಮಾನಿಗಳ ಶಿಳ್ಳೆ, ಜೈಕಾರಕ್ಕೆ ಮನಸೋತು, “ವಿಷ್ಣುವರ್ಧನ್‌ಗೆ, ಸಾಹಸ ಸಿಂಹ ವಿಷ್ಣುವರ್ಧನ್‌ಗೆ ….’ ಎಂದು ಜೈಕಾರ ಕೂಗುವಲ್ಲಿಗೆ ಮಾತು ಮುಗಿಸಿದರು.

ಬಾಲಣ್ಣ ಮಕ್ಕಳು ಮನಸ್ಸು ಮಾಡಬೇಕು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, “ವಿಷ್ಣುವರ್ಧನ್‌ ಅದ್ಭುತ ನಟ. ಅವರ ಆದರ್ಶಗಳನ್ನು ಪಾಲಿಸಬೇಕು. ಈ ಜಾಗದಲ್ಲಿ ಅವರ ಸ್ಮಾರಕ ಆಗಲೇ ಬೇಕು. ಸ್ಮಾರಕಕ್ಕೆ ಜಾಗ ಕೊಡುವ ವಿಷಯದಲ್ಲಿ ಅಡ್ಡಿಪಡಿಸುತ್ತಿರುವ ಬಾಲಣ್ಣ ಅವರ ಮಕ್ಕಳಿಗೆ ಒಳ್ಳೆಯ ಮನಸ್ಸು, ಬುದ್ಧಿ ಕೊಡಲಿ. ಅಡ್ಡಿಪಡಿಸುವುದಾದರೆ ಅಂದೇ ಅಡ್ಡಿಪಡಿಸಬೇಕಿತ್ತು. ಈಗ ಒಮ್ಮೆ ಕೊಡುತ್ತೇನೆಂದು ಹೇಳಿ ಆ ನಂತರ ಕೋರ್ಟ್‌ಗೆ ಹೋಗಿ ಅಡ್ಡಿಪಡಿಸುವುದನ್ನು ಇಡೀ ಕರ್ನಾಟಕ ಖಂಡಿಸುತ್ತದೆ. ಕೂಡಲೇ ಈ ಪುಣ್ಯದ ಕೆಲಸಕ್ಕೆ ಸ್ಪಂದಿಸಬೇಕೆಂದು ಬಾಲಣ್ಣ ಮಕ್ಕಳಲ್ಲಿ ಮನವಿ ಮಾಡುತ್ತೇನೆಂದು ಸಾ.ರಾ.ಗೋವಿಂದು ಹೇಳಿದರು.

ಭಾರತಿ ವಿಷ್ಣುವರ್ಧನ್‌, 201ನೇ ಚಿತ್ರ “ನಾಗರಹಾವು’ಗೆ ಶುಭಕೋರುವ ಜೊತೆಗೆ ಸೇರಿದ್ದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು. ಇದೇ ವೇಳೆ ಸಾಹಸ ಸಿಂಹ ಕಾಮಿಕ್ಸ್‌ನ ಮೂರನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಈ ಬಾರಿ ಹೆಣ್ಣು ಮಕ್ಕಳ ಶಿಕ್ಷಣದ ವಿಷಯವನ್ನಿಟ್ಟುಕೊಂಡು ಈ ಕಾಮಿಕ್ಸ್‌ ಅನ್ನು ಹೊರತಂದಿದ್ದಾಗಿ ಅನಿರುದ್ಧ್ ಹೇಳಿದರು. ಇದೇ ವೇಳೆ ಭಕ್ತಿಗೀತೆಯ ಆಡಿಯೋ ಸಿಡಿ ಹಾಗೂ ವಿಷ್ಣು ಸೇನಾ ಸಮಿತಿಯಿಂದ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು. “ನಾಗರಹಾವು’ ಚಿತ್ರವನ್ನು ಕೋಡಿ ರಾಮಕೃಷ್ಣ ನಿರ್ದೇಶಿಸಿದ್ದು, ಚಿತ್ರವನ್ನು ಪೆನ್‌ ಮೂವೀಸ್‌ ಹಾಗೂ ಬ್ಲಾಕ್‌ಬ್ಲಾಸ್ಟರ್‌ ಸ್ಟುಡಿಯೋ ಸೇರಿ ನಿರ್ಮಿಸಿದೆ. ಚಿತ್ರತಂಡ ಕೂಡಾ “ನಾಗರಹಾವು’ ಚಿತ್ರದಲ್ಲಿ ಗ್ರಾಫಿಕ್‌ ತಂತ್ರಜಾ°ನ ಬಳಸಿ ವಿಷ್ಣುವರ್ಧನ್‌ ಅವರನ್ನು ಸೃಷ್ಟಿಸಿದ್ದ ಹೇಳುತ್ತಾ ಅದಕ್ಕೆ ಅನುಮತಿ ಕೊಟ್ಟ ವಿಷ್ಣು ಕುಟುಂಬಕ್ಕೆ ಥ್ಯಾಂಕ್ಸ್‌ ಹೇಳಿತು.

ಹುಚ್ಚ ವೆಂಕಟ್‌ ಹವಾ: ವಿಷ್ಣುವರ್ಧನ್‌ ಅಭಿಮಾನಿಯಾಗಿರುವ ಹುಚ್ಚ ವೆಂಕಟ್‌ ಅಭಿಮಾನ್‌ ಸ್ಟುಡಿಯೋಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಜೈಕಾರ, ಶಿಳ್ಳೆ ಮುಗಿಲು ಮುಟ್ಟಿತು. ವೆಂಕಟ್‌ಗೆ ಜೈಕಾರ ಹಾಕುತ್ತಾ ಅವರತ್ತ ನುಗ್ಗಿದರು. ವಿಷ್ಣು ಸಮಾಧಿಗೆ ಕೈ ಮುಗಿದು ಬಂದ ವೆಂಕಟ್‌ ವೇದಿಕೆ ಬರುತ್ತಿದ್ದಂತೆ ವೆಂಕಟ್‌ ಮಾತಿಗೆ ಸಭಿಕರಿಂದ ಮನವಿ. ಕೊನೆಗೆ ನಿರೂಪಕಿ ಅನುಶ್ರೀ, “ನೀವು ಕುಳಿತುಕೊಂಡರೆ ವೆಂಕಟ್‌ ಮಾತನಾಡುತ್ತಾರೆ ..’ ಎನ್ನುತ್ತಾ ಸಭಿಕರನ್ನು ಸಮಾಧಾನ ಪಡಿಸಬೇಕಾಯಿತು. ಕೊನೆಗೆ ಮೈಕ್‌ ಎತ್ತಿಕೊಂಡ ವೆಂಕಟ್‌, ಮೊದಲು ವಿಷ್ಣುವರ್ಧನ್‌ ಅವರ “ಸಿಂಹಾದ್ರಿಯ ಸಿಂಹ’ ಚಿತ್ರದ “ಕಲ್ಲಾದರೆ ನಾನು ..’ ಹಾಡನ್ನು ಹಾಡಿದರು. ಆ ನಂತರ ಮಾತನಾಡಿದ ವೆಂಕಟ್‌, “ಅಪ್ಪ-ಅಮ್ಮ ಬಿಟ್ಟರೆ ನಾನು ಗೌರವಿಸುವ ವ್ಯಕ್ತಿ ಸಾಹಸ ಸಿಂಹ ವಿಷ್ಣುವರ್ಧನ್‌. ಇವತ್ತು ಅವರ ಸಮಾಧಿ, ಸ್ಮಾರಕ ಕೆಲಸ ಆಗುತ್ತಿಲ್ಲ ಅಂದ್ರೆ ಅವರು ಸತ್ತಿಲ್ಲವೆಂದರ್ಥ. ನಮ್ಮೊಂದಿದಿದ್ದಾರೆ. ಹೆಣ್ಣುಮಕ್ಕಳನ್ನು ಗೌರವಿಸುವ ನಟ ಅವರು. ಅವರು ಇದ್ದಿದ್ದರೆ ಇವತ್ತು ಐಟಂ ಸಾಂಗ್‌ ಬ್ಯಾನ್‌ ಆಗ್ತಿತ್ತು, ಅತ್ಯಾಚಾರಿಗಳಿಗೆ ನೇಣೂ ಆಗ್ತಿತ್ತು. ಅವರ ಅಭಿಮಾನಿಯಾಗಿ ಅವರ ಹೆಸರನ್ನು ಉಳಿಸುತ್ತೇನೆ. ನಾನು ಸತ್ತ ಮೇಲೂ ನನ್ನ ಮಗ ವಿಷ್ಣುವರ್ಧನ್‌ ಅವರ ಹೆಸರು ಉಳಿಸುತ್ತಾನೆ…’ ಎಂದು ತಮ್ಮದೇ ಶೈಲಿಯಲ್ಲಿ ಹೇಳಿ ಮತ್ತೂಂದಿಷ್ಟು ಚಪ್ಪಾಳೆ ಗಿಟ್ಟಿಸಿಕೊಂಡರು.

ಇನ್ನು ರಕ್ತದಾನ, ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಸೇರಿದ್ದ ಅಭಿಮಾನಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಿರ್ಮಾಪಕ ಬಿ.ವಿಜಯ್‌ ಕುಮಾರ್‌, ನಟರಾದ ಶ್ರೀನಿವಾಸ್‌ ಮೂರ್ತಿ, ಶಿವರಾಮ್‌, ಅವಿನಾಶ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
-ಉದಯವಾಣಿ

Write A Comment