ಬೆಂಗಳೂರು: ರಾಜಧಾನಿಗೆ ಅಪರಾಧ ಮತ್ತು ಸಂಚಾರದಟ್ಟಣೆ ದೊಡ್ಡ ಸಮಸ್ಯೆಯಾಗಿದ್ದು, ಬಂಡವಾಳ ಹೂಡಿಕೆಗೆ ವಿದೇಶಿ ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಳವಳ ವ್ಯಕ್ತಪಡಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಅಪರಾಧ ತಡೆ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ನಗರದಲ್ಲಿ ಅಪರಾಧ ಹೆಚ್ಚಳ ಹಾಗೂ ಸಂಚಾರ ದಟ್ಟಣೆ ಕುರಿತು ವಿದೇಶಿ ಉದ್ಯಮಿಗಳು ಪ್ರಸ್ತಾಪ ಮಾಡಿ ಬಂಡವಾಳ ತೊಡಗಿಸಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಅಪರಾಧಗಳ ಪ್ರಮಾಣ ಇಳಿಮುಖವಾಗಿವೆ ಎಂದು ಅಂಕಿ-ಅಂಶಗಳ ಮೂಲಕ ಸಾಬೀತು ಪಡಿಸುವುದು ಬೇಕಿಲ್ಲ. ಜಾಗತಿಕವಾಗಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಒಂದೇ ಒಂದು ಗಂಭೀರ ಪ್ರಕರಣ ನಡೆದರೂ ಜಗತ್ತಿಗೆ ಸುಲಭವಾಗಿ ಗೊತ್ತಾಗುತ್ತದೆ ಎಂದು ಹೇಳಿದರು.
ನಗರದಲ್ಲಿ ಪ್ರತಿದಿನ 2 ಸಾವಿರಕ್ಕೂ ಹೆಚ್ಚು ವಾಹನ ನೋಂದಣಿಯಾಗುತ್ತಿವೆ. ದಿನದಿಂದ ದಿನಕ್ಕೆ ಸಂಚಾರದಟ್ಟಣೆ ಹೆಚ್ಚುತ್ತಿದೆ. ಸಿಬ್ಬಂದಿ ಮತ್ತು ಉಪಕರಣಗಳ ಕೊರತೆ ಸೇರಿ ಹಲವು ಸಮಸ್ಯೆಗಳು ಕಾಡುತ್ತಿವೆ. ಇವುಗಳನ್ನು ಬದಿಗಿಟ್ಟು ಕೆಲಸ ಮಾಡಿ, ಕಪ್ಪುಚುಕ್ಕೆಯಾಗಿರುವ ಕ್ರೖೆಂ ಮತ್ತು ಟ್ರಾಫಿಕ್ಜಾಮ್ ತಡೆಗೆ ಹೆಚ್ಚಿನ ಗಮನಹರಿಸುವಂತೆ ಪೊಲೀಸರಿಗೆ ಸಲಹೆ ನೀಡಿದರು.
ವೃದ್ಧರು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಆದ್ಯತೆ ಕೊಡಬೇಕು. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಐಸಿಸ್ ಉಗ್ರರ ಬೆಂಬಲಿಗರು ಇದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಕೋಮುವಾದಿ ಶಕ್ತಿಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸುತ್ತಿವೆ. ಈ ಶಕ್ತಿಗಳನ್ನು ಮಟ್ಟ ಹಾಕಲು ಸಜ್ಜಾಗಬೇಕೆಂದು ಪರಮೇಶ್ವರ್ ನಿರ್ದೇಶನ ನೀಡಿದರು.
ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಖ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಡಾ. ಎಂ.ಎ. ಸಲೀಂ, ಪ್ರತಾಪ್ ರೆಡ್ಡಿ, ಪಿ. ಹರಿಶೇಖರನ್, ಬಿ.ಎನ್.ಎಸ್. ರೆಡ್ಡಿ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಪೀಕಲಾಟಕ್ಕೆ ಸಿಲುಕಿದ ಪೊಲೀಸರು
ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಶೌಚಗೃಹ ವ್ಯವಸ್ಥೆ ಸರಿ ಇಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಠಾಣೆಗಳಿಗೆ ಹಠಾತ್ ಭೇಟಿ ಕೊಟ್ಟ ಮಾದರಿಯಲ್ಲಿ ಆಯುಕ್ತರ ಕಚೇರಿ ಪರಿಶೀಲನೆಗೂ ಬರುವುದಾಗಿ ಪರಮೇಶ್ವರ್ ಎಚ್ಚರಿಸಿದ್ದು ಅಧಿಕಾರಿ ಗಳನ್ನು ಪೀಕಲಾಟಕ್ಕೆ ಸಿಲುಕಿಸಿತು. ನಂತರ ಸಚಿವರು ಮೂತ್ರ ವಿಸರ್ಜನೆಗೆ ತೆರಳಬೇಕೆಂದಾಗ ತಕ್ಷಣ ಜಂಟಿ ಪೊಲೀಸ್ ಆಯುಕ್ತರು ಆಯುಕ್ತರ ಕೊಠಡಿಯೊಳಗಿನ ಶೌಚಗೃಹಕ್ಕೆ ಕರೆದುಕೊಂಡು ಹೋದರು.
ಸಮ, ಬೆಸಸಂಖ್ಯೆ ಮಾದರಿ ಸದ್ಯಕ್ಕಿಲ್ಲ
ಸಂಚಾರ ದಟ್ಟಣೆ ಮತ್ತು ವಾಯುಮಾಲಿನ್ಯ ತಡೆಗಟ್ಟಲು ದೆಹಲಿಯಲ್ಲಿ ಜಾರಿಗೆ ತಂದಿರುವ ಸಮ ಮತ್ತು ಬೆಸ ಸಂಖ್ಯೆ ವಾಹನ ಸಂಚಾರ ಯೋಜನೆ ಸದ್ಯಕ್ಕೆ ಜಾರಿಗೆ ತರುವುದಿಲ್ಲ. ಸಂಚಾರ ದಟ್ಟಣೆ ತಪ್ಪಿಸಲು ಹೊಸ ಯೋಜನೆಗಳನ್ನು ಹಂತಹಂತವಾಗಿ ಅಳವಡಿಸಿಕೊಳ್ಳಲಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು.
ಮೇಘರಿಕ್ ಸಿಡಿಮಿಡಿ
ಉನ್ನತಾಧಿಕಾರಿಗಳ ಜತೆ ಪರಮೇಶ್ವರ್ ಒಂದೂವರೆ ತಾಸು ಸಭೆ ನಡೆಸಿದರು. ಗಂಭೀರ ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ಸೆಕ್ಷನ್ ಬದಲಾಯಿಸಿ ರಾಬರಿ ಬದಲಿಗೆ ಕಳ್ಳತನವೆಂದು ಎಫ್ಐಆರ್ ದಾಖಲಿಸಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಘರಿಖ್ ಸಿಡಿಮಿಡಿಕೊಂಡರು.
ಲಂಚ ಕೊಡದಿದ್ದರೆ ಪೊಲೀಸರು ಕೆಲಸ ಮಾಡುವುದಿಲ್ಲ ಎಂಬ ಕಳಂಕ ಇದೆ. ಕೆಲವರು ಮಾಡುವ ತಪ್ಪಿಗೆ ಇಡೀ ಇಲಾಖೆ ತಲೆ ತಗ್ಗಿಸುವ ಸ್ಥಿತಿಯಿದೆ. ಆದ್ದರಿಂದ ಲಂಚ ಪಡೆಯುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಜನರ ರಕ್ಷಣೆ ಮತ್ತು ಸೇವೆ ಪೊಲೀಸರ ಧ್ಯೇಯ. ಕಾನೂನು ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದರೆ ಇಲಾಖೆಗೆ, ಮಹಾನಗರಕ್ಕೆ ಉತ್ತಮ ಹೆಸರು ಬರುತ್ತದೆ.
| ಡಾ. ಜಿ. ಪರಮೇಶ್ವರ್ ಗೃಹ ಸಚಿವ