ಮನೋರಂಜನೆ

ಕ್ರೀಡಾದಿಗ್ಗಜರ ನಿವೃತ್ತಿ ವರ್ಷ 2016!

Pinterest LinkedIn Tumblr

SPORTS_772015ಕ್ಕೆ ವಿದಾಯ ಹೇಳಲು ಸಜ್ಜಾಗಿರುವ ಸಮಯದಲ್ಲಿ 2016ಕ್ಕೆ ಸ್ವಾಗತ ನೀಡುವ ಸಂಭ್ರಮವೂ ಮನೆಮಾಡಿದೆ. ಟಿ20 ವಿಶ್ವಕಪ್ ಮತ್ತು ರಿಯೋ ಒಲಿಂಪಿಕ್ಸ್​ನಂಥ ಪ್ರಮುಖ ಕ್ರೀಡಾಕೂಟಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ 2016ರಲ್ಲಿ ಹಲವು ಕ್ರೀಡಾ ದಿಗ್ಗಜರಿಗೆ ವಿದಾಯ ಹೇಳುವ ಸಾಧ್ಯತೆಯೂ ಹರಡಿದೆ. ಕಳೆದ ಒಂದೆರಡು ದಶಕದಿಂದ ಕ್ರೀಡಾಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡುತ್ತಿರುವ ಹಲವು ಕ್ರೀಡಾ ಸಾಧಕರ ವೃತ್ತಿಜೀವನದ ಅಧ್ಯಾಯದಲ್ಲಿ 2016 ಕೊನೇ ವರ್ಷವಾಗುವ ನಿರೀಕ್ಷೆ ಇದ್ದು, ಅಂಥವರ ಸಂಕ್ಷಿಪ್ತ ವಿವರ ಇಲ್ಲಿದೆ….

|ಲಿಯಾಂಡರ್ ಪೇಸ್
2004ರ ಅಥೆನ್ಸ್ ಒಲಿಂಪಿಕ್ಸ್​ನಿಂದಲೂ ಲಿಯಾಂಡರ್ ಪೇಸ್ ನಿವೃತ್ತಿಯ ಬಗ್ಗೆ ಪ್ರತಿ ವರ್ಷವೂ ಸುದ್ದಿ ಯಾಗುತ್ತಿದೆ. ಅವೆಲ್ಲವನ್ನೂ ನಿರಾಕರಿಸುತ್ತಲೇ ಬಂದಿದ್ದ ಪೇಸ್, 2015ರಲ್ಲಿ ತಮ್ಮ 42ನೇ ವಯಸ್ಸಿ ನಲ್ಲೂ 3 ಮಿಶ್ರ ಡಬಲ್ಸ್ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದು ಗಮನ ಸೆಳೆದಿದ್ದರು. ಸದ್ಯ ರಿಯೋ ಒಲಿಂಪಿಕ್ಸ್ ಮೂಲಕ 7ನೇ ಬಾರಿ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ದಾಖಲೆ ಬರೆಯುವ ಗುರಿ ಇರಿಸಿಕೊಂಡಿದ್ದು, ಆ ಬಳಿಕ ನಿವೃತ್ತಿ ಪ್ರಕಟಿಸುವ ಸಾಧ್ಯತೆ ಇದೆ. ಒಲಿಂಪಿಕ್ಸ್ ಬಳಿಕ ಆಡುವ ಸಾಧ್ಯತೆ ಕಡಿಮೆ ಎಂದು ಅವರ ತಂದೆ ವೇಸ್ ಪೇಸ್ ಕೂಡ ಹೇಳಿದ್ದಾರೆ.

|ಸುಶೀಲ್ ಕುಮಾರ್
ಬೀಜಿಂಗ್​ನಲ್ಲಿ ಕಂಚು, ಲಂಡನ್​ನಲ್ಲಿ ಬೆಳ್ಳಿ ಗೆದ್ದಿರುವ ಸುಶೀಲ್ ಕುಮಾರ್ ರಿಯೋ ಒಲಿಂಪಿಕ್ಸ್ ಸ್ವರ್ಣದೊಂದಿಗೆ ತಮ್ಮ 13 ವರ್ಷಗಳ ಕುಸ್ತಿ ಜೀವನಕ್ಕೆ ತೆರೆ ಎಳೆಯುವ ಬಯಕೆ ಯಲ್ಲಿದ್ದಾರೆ. 74 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಆಡಲಿರುವ 32 ವರ್ಷದ ಸುಶೀಲ್​ಕುಮಾರ್ ಈವರೆಗೂ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿಲ್ಲ. ಕ್ರೀಡಾಜೀವನದಲ್ಲಿ ಆಡಿದ 107 ಪಂದ್ಯಗಳಲ್ಲಿ 103 ಪಂದ್ಯ ಗೆದ್ದಿರುವ ಸುಶೀಲ್​ಕುಮಾರ್, 2010ರಲ್ಲಿ 66 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದರು.

|ಯೋಗೇಶ್ವರ್ ದತ್
ಸುಶೀಲ್​ರ ಆಪ್ತ ಸ್ನೇಹಿತ ಯೋಗೇಶ್ವರ್ ದತ್ ಕೂಡ ರಿಯೋ ಒಲಿಂಪಿಕ್ಸ್ ತಮ್ಮ ಕೊನೇ ಟೂರ್ನಿ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. 33 ವರ್ಷದ ದತ್ ಇತ್ತೀಚೆಗೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ರಿಯೋ ಟೂರ್ನಿ ನನ್ನ ಕೊನೇ ಒಲಿಂಪಿಕ್ಸ್. 2018ರ ಏಷ್ಯಾಡ್ ಹಾಗೂ ಕಾಮನ್ವೆಲ್ತ್ ಗೇಮ್್ಸ ನಲ್ಲಿ ಸ್ಪರ್ಧಿಸುವ ಆಸೆ ಇದ್ದರೂ, ಫಿಟ್ ಆಗಿದ್ದಲ್ಲಿ ಮಾತ್ರ ಸ್ಪರ್ಧಿಸಲಿದ್ದೇನೆ ಎಂದಿದ್ದಾರೆ. ಅಂತಾರಾಷ್ಟ್ರೀಯ ಕುಸ್ತಿಯಲ್ಲಿ 7 ಸ್ವರ್ಣ ಪದಕ ಜಯಿಸಿರುವ ದತ್, ಒಲಿಂಪಿಕ್ಸ್ ಬಳಿಕವೇ ಮದುವೆಯಾಗುವು ದಾಗಿಯೂ ತಿಳಿಸಿದ್ದಾರೆ.

|ಮೇರಿ ಕೋಮ್
ಮೂರು ಮಕ್ಕಳ ತಾಯಿ ಯಾಗಿರುವ 32 ವರ್ಷದ ಬಾಕ್ಸರ್ ಮೇರಿ ಕೋಮ್ ಒಲಿಂಪಿಕ್ಸ್ ಬಳಿಕ ನಿವೃತ್ತಿಯಾಗುವುದಾಗಿ ಈಗಾಗಲೆ ಪ್ರಕಟಿಸಿದ್ದಾರೆ. 5 ಬಾರಿ ಮಹಿಳಾ ಬಾಕ್ಸಿಂಗ್​ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಮಣಿಪುರ ಬಾಕ್ಸರ್, ಅಂತಾ ರಾಷ್ಟ್ರೀಯ ಮಟ್ಟದ ಹೆಚ್ಚಿನ ಎಲ್ಲ ಕೂಟಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್ ಚಿನ್ನ ಮುಂದಿರುವ ಏಕೈಕ ಗುರಿ ಎಂದಿರುವ ಮೇರಿ, ಆಗಸ್ಟ್ ಬಳಿಕ ಸ್ಪರ್ಧಾಕಣದಿಂದ ಮರೆಯಾಗಲಿದ್ದಾರೆ. ಮೇರಿ ಜತೆ ಸರಿತಾ ದೇವಿ ಕೂಡ ರಿಯೋ ಕೂಟದ ಬಳಿಕ ನಿವೃತ್ತಿಯಾಗುವ ಸಾಧ್ಯತೆ ಇದೆ.

|ಎಂಎಸ್ ಧೋನಿ
34 ವರ್ಷದ ಭಾರತ ಏಕದಿನ ತಂಡದ ನಾಯಕ ಎಂಎಸ್ ಧೋನಿ ಕ್ರಿಕೆಟ್ ಜೀವನಕ್ಕೂ 2016ರಲ್ಲಿ ತೆರೆ ಬೀಳುವುದು ಬಹುತೇಕ ಖಚಿತವಾಗಿದೆ. ಮಾರ್ಚ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಧೋನಿಯ ಕ್ರಿಕೆಟ್ ಜೀವನವನ್ನು ನಿರ್ಧರಿಸಲಿದೆ. ಹಾಗೇನಾದರೂ ಭಾರತ ಚಾಂಪಿಯನ್ ಆದಲ್ಲಿ ಧೋನಿ ಇನ್ನೊಂದು ವರ್ಷ ಆಡಬಹುದಾದರೂ, ಪ್ರಶಸ್ತಿ ಜಯಿಸದೇ ಹೋದಲ್ಲಿ ವಿಶ್ವಕಪ್ ಟೂರ್ನಿಯೇ ಧೋನಿ ಪಾಲಿಗೆ ಅಂತಿಮವಾಗಲಿದೆ.

|ಯುವರಾಜ್ ಸಿಂಗ್
ಟೀಮ್ ಇಂಡಿಯಾ ಎಡಗೈ ಬ್ಯಾಟ್ಸ್​ಮನ್ ಯುವರಾಜ್ ಸಿಂಗ್ ವಿಶ್ವಕಪ್ ಹಿನ್ನೆಲೆಯಲ್ಲಿ ಮತ್ತೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ. ಆದರೆ, 34 ವರ್ಷದ ಆಟಗಾರನ ‘ವ್ಯಾಲಿಡಿಟಿ’ ಟಿ20 ವಿಶ್ವಕಪ್​ವರೆಗೆ ಮಾತ್ರ ಎನ್ನುವುದು ಬಹುತೇಕ ಖಚಿತವಾಗಿದೆ. ಹಾಗಾಗಿ ಈ ವರ್ಷದ ಅಂತ್ಯದಲ್ಲಿ ಯುವಿ ನಿವೃತ್ತಿ ನಿರ್ಧಾರ ಪ್ರಕಟಗೊಂಡರೂ ಅಚ್ಚರಿ ಪಡಬೇಕಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ತೆರೆಮರೆಗೆ ಸರಿದರೂ ಅವರು ದೇಶೀಯ ಕ್ರಿಕೆಟ್​ನಲ್ಲಿ, ಅದರಲ್ಲೂ ಮುಖ್ಯವಾಗಿ ಐಪಿಎಲ್​ನಲ್ಲಿ ಇನ್ನೂ 3-4 ವರ್ಷ ಆಡುವುದರಲ್ಲಿ ಸಂಶಯವಿಲ್ಲ ಎಂಬುದು ಕ್ರಿಕೆಟ್ ತಜ್ಞರ ಲೆಕ್ಕಾಚಾರ.

|ಹರ್ಭಜನ್ ಸಿಂಗ್
ದೂಸ್ರಾ ಸ್ಪಿನ್ನರ್ ಹರ್ಭಜನ್ ಸಿಂಗ್​ಗೂ ಕ್ರೀಡಾ ಜೀವನದ ಕೊನೇ ವರ್ಷ ಇದಾಗಲಿದೆ. 35 ವರ್ಷದ ಭಜ್ಜಿ 2015ರಲ್ಲಿ ರಾಷ್ಟ್ರೀಯ ಟೆಸ್ಟ್, ಏಕದಿನ ಹಾಗೂ ಟಿ20 ತಂಡಕ್ಕೆ ಪುನರಾಗಮನ ಮಾಡಿದ್ದರೂ, ಜುಲೈನಲ್ಲಿ 36ನೇ ವರ್ಷಕ್ಕೆ ಕಾಲಿಡಲಿರುವ ಕಾರಣ ನಿವೃತ್ತಿ ನಿರ್ಧಾರದ ಸಾಧ್ಯತೆ ಇದೆ. ಅಲ್ಲದೆ, ಅಶ್ವಿನ್, ಅಕ್ಷರ್ ಹಾಗೂ ರವೀಂದ್ರ ಜಡೇಜಾರಂಥ ಸ್ಪಿನ್ನರ್​ಗಳು ತಂಡದಲ್ಲಿರುವುದರಿಂದ ಹರ್ಭಜನ್ ಅನುಪಸ್ಥಿತಿ ತಂಡಕ್ಕೆ ಕಾಡುವುದು ಕಡಿಮೆ. ಅವಕಾಶ ಲಭಿಸದೇ ಹೋದಾಗ ಸ್ನೇಹಿತರಾದ ಜಹೀರ್ ಖಾನ್, ವೀರೇಂದ್ರ ಸೆಹ್ವಾಗ್​ರಂತೆ ದಿಢೀರ್ ನಿವೃತ್ತಿ ಹೇಳಬಹುದು.

ವಿದೇಶಿ ಕ್ರೀಡಾಪಟುಗಳು

ವಿದೇಶಿ ಕ್ರೀಡಾಪಟುಗಳ ಪೈಕಿ ಜಮೈಕಾ ಸ್ಪ್ರಿಂಟರ್ ಉಸೇನ್ ಬೋಲ್ಟ್ ರಿಯೋ ಒಲಿಂಪಿಕ್ಸ್ ಬಳಿಕ ನಿವೃತ್ತಿ ಬಗ್ಗೆ ಚಿಂತನೆ ಮಾಡುವುದಾಗಿ ಪ್ರಕಟಿಸಿದ್ದಾರೆ. ರಿಯೋ ತಮ್ಮ ಕೊನೇ ಒಲಿಂಪಿಕ್ಸ್ ಆಗಿರಲಿದೆ ಎಂದಿರುವ ಬೋಲ್ಟ್, ಲಂಡನ್​ನಲ್ಲಿ 2017ರಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದಿದ್ದಾರೆ. ಅವರೊಂದಿಗೆ 30 ವರ್ಷದ ಇಂಗ್ಲೆಂಡ್ ಫುಟ್​ಬಾಲ್ ಸ್ಟಾರ್ ವೇಯ್್ನ ರೂನಿ, 17 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್ ನಿವೃತ್ತಿ ನಿರ್ಧಾರ ಈ ವರ್ಷ ಪ್ರಕಟಗೊಳ್ಳಬಹುದು. ಈಜುಪಟು ಮೈಕೆಲ್ ಫೆಲ್ಪ್ಸ್ ಕೂಡ ರಿಯೋ ಒಲಿಂಪಿಕ್ಸ್ ಬಳಿಕ ಮತ್ತೆ ನಿವೃತ್ತಿಯಾಗುವ ನಿರೀಕ್ಷೆ ಇದೆ. ಬ್ಯಾಡ್ಮಿಂಟನ್​ನ ಮಾಜಿ ನಂ.1 ಆಟಗಾರ ಮಲೇಷ್ಯಾದ ಚಾಂಗ್ ವೀ ಕೂಡ ಒಲಿಂಪಿಕ್ಸ್ ಬಳಿಕ ನಿವೃತ್ತಿಯಾಗಬಹುದು.

Write A Comment