ನವದೆಹಲಿ: ಪಾಕಿಸ್ತಾನದ ಗಾಯಕ ಉಸ್ತಾದ್ ರಾಹತ್ ಫತೇಹ್ ಅಲಿ ಖಾನ್ ಅವರು ಭಾರತದಲ್ಲಿ ಗಡಿಪಾರಿಗೆ ಗುರಿಯಾಗಿದ್ದರು.
ಹೈದ್ರಾಬಾದ್ ನ ತಾಜ್ ಫಲೂಕ್ ನಾಮಾ ಪ್ಯಾಲೇಸ್ ನಲ್ಲಿ ಡಿಸೆಂಬರ್ 31ರಂದು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಬೇಕಿತ್ತು. ಈ ಹಿನ್ನಲೆಯಲ್ಲಿ ರಾಹತ್ ಪಾಕಿಸ್ತಾನದಿಂದ ನೇರವಾಗಿ ಹೈದ್ರಾಬಾದ್ ಗೆ ಬಂದಿಳಿದಿದ್ದಾರೆ.
ಆದರೆ, ಪಾಕಿಸ್ತಾನದ ಯಾವುದೇ ಪ್ರಜೆ ಹೈದರಾಬಾದ್ ಮೂಲಕ ಭಾರತ ಪ್ರವೇಶಿಸುವಂತಿಲ್ಲ. ಈ ಹಿನ್ನಲೆಯಲ್ಲಿ ಹೈದ್ರಾಬಾದ್ ಗೆ ಬಂದಿಳಿದ ರಾಹತ್ ಅವರನ್ನು ಭಾರತದಿಂದ ಗಡಿಪಾರು ಮಾಡಲಾಗಿದೆ.
ಚೆನ್ನೈ, ಮುಂಬೈ, ಕೋಲ್ಕತಾ ಹಾಗೂ ದೆಹಲಿಯಲ್ಲಿ ಮಾತ್ರ ಪಾಕಿಸ್ತಾನಿ ಪ್ರಜೆಗಳು ಭಾರತವನ್ನು ಪ್ರವೇಶಿಸಲು ಅನುಮತಿ ಇದೆ. ಇದನ್ನು ಹೊರತುಪಡಿಸಿ, ದೇಶದ ಇತರೆ ಯಾವುದೇ ವಿಮಾನನಿಲ್ದಾಣದ ಮೂಲಕ ಪಾಕ್ ಪ್ರಜೆಗಳು ಭಾರತವನ್ನು ಪ್ರವೇಶಿಸುವ ಹಾಗಿಲ್ಲ.
ಗಡಿಪಾರಿನಿಂದಾಗಿ ರಾಹತ್ ಅಬುದಾಬಿಗೆ ಮರಳಿ, ಅಲ್ಲಿಂದ ದೆಹಲಿಯತ್ತ ಪ್ರಯಾಣ ಬೆಳಸಿ, ನಂತರ ಹೈದ್ರಾಬಾದ್ ಗೆ ತಲುಪಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.