ಕರ್ನಾಟಕ

ಕೋಮು ಭಯೋತ್ಪಾದನೆಯಿಂದ ದೇಶ ಇಬ್ಭಾಗ: ಭಗವಾನ್

Pinterest LinkedIn Tumblr

PROF BHAGWAN

ಮೈಸೂರು: ಕೋಮು ಭಯೋತ್ಪಾದನೆಯಿಂದ ದೇಶ ಒಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ವಿಚಾರವಾದಿ ಪ್ರೊ. ಕೆ.ಎಸ್.ಭಗವಾನ್ ಆತಂಕ ವ್ಯಕ್ತಪಡಿಸಿದರು.

ಕೋಮು ಭಯೋತ್ಪಾದನೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಧಾರ್ಮಿಕ ಸೌಹಾರ್ದತೆಯ ಮೇಲೆ ಕೋಮು ಭಯೋತ್ಪಾದನೆ ಸವಾರಿ ಮಾಡುತ್ತಾ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಭಯೋತ್ಪಾದನೆ ಎಂಬುದು ಒಂದು ಜಾತಿ, ಕೋಮು, ಧರ್ಮಕ್ಕೆ ಸೀಮಿತವಾಗಿಲ್ಲ. ಇದನ್ನು ಕಿತ್ತು ಹಾಕಬೇಕು. ಇದರಿಂದ ದೇಶದ ಅಖಂಡತೆಗೆ ಧಕ್ಕೆ ಬರಲಿದೆ. ದೇಶ ಉಳಿದರೆ ನಾವು ಉಳಿಯುತ್ತೇವೆ ಎಂಬುದನ್ನು ಮರೆತಿದ್ದಾರೆ. ವಿಚಾರ, ತತ್ವಗಳಿಂದ ದೂರವಾಗಿ ಕೊಲ್ಲುವ ಸಂಸ್ಕೃತಿ ಹೆಚ್ಚಿರುವುದು ದೊಡ್ಡ ಅಪಾಯಕಾರಿ. ಮಾನವೀಯ ಮೌಲ್ಯ, ಪರಸ್ಪರ ನಂಬಿಕೆಯಿಂದ ಸಾಗಬೇಕು.

ಸರ್ವರ ಏಳಿಗೆಯಾದರೆ ದೇಶ ಅಭಿವೃದ್ಧಿ. ಈ ಬಗ್ಗೆ ಪ್ರತಿಯೊಬ್ಬರೂ ಆಲೋಚನೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು. ದೇಶದಲ್ಲಿರುವ ಹಸಿವು ಮತ್ತು ಭಯದ ವಾತಾವರಣ ನಿವಾರಣೆಯಾಗಬೇಕು. ಹೊಟ್ಟೆ ತುಂಬಿದವರು ಅನೇಕ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಹಸಿವು ದೂರವಾದರೆ ಮನುಷ್ಯ ಚೆನ್ನಾಗಿರುತ್ತಾನೆ. ಭಯ ಹೋದರೆ ನೆಮ್ಮದಿಯಿಂದ ಬದುಕುತ್ತಾನೆ ಅದಕ್ಕಾಗಿ ಭಯ ತೆಗೆಯಬೇಕು. ಎಲ್ಲ ಧರ್ಮಗಳು ಭಯದ ಮೇಲೆ ನಿಂತಿದೆ. ಮತೀಯ ರಾಜಕೀಯ, ಆರ್ಥಿಕ, ಸಾಮಾಜಿಕ ಅಸಮಾನತೆ ದೂರ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಶೇ.31 ಮತಗಳನ್ನು ಮಾತ್ರ ಪಡೆದು ಕೊಂಡಿದೆ. ಆದರೆ, ಅದನ್ನು ವಿರೋಧಿಸಿದ ಶೇ.69 ಜನರು ಹೊರಗಡೆ ಇದ್ದಾರೆ. ಆದರೆ, ಅಧಿಕಾರ ಹಿಡಿದ ವ್ಯಕ್ತಿಗಳು ತಮ್ಮ ವಿಕಾರಗಳನ್ನು ಹೇರುವ ಮೂಲಕ ಪ್ರಜಾಸತ್ತತೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.

Write A Comment