ಕರ್ನಾಟಕ

ಅಳಿಲುಘಟ್ಟದಲ್ಲಿ ಲಘು ಕಂಪನ- ಮನೆಗಳ ಗೋಡೆ ಬಿರುಕು

Pinterest LinkedIn Tumblr

earth

ಚೇಳೂರು: ಕ್ಷಣ ಕಾಲ ಭೂಮಿ ಕಂಪಿಸಿದ್ದರಿಂದ ಮನೆಗಳ ಗೋಡೆ ಬಿರುಕುಗೊಂಡು ಜನತೆ ಆತಂಕದಿಂದ ಹೊರಗೆ ಓಡಿಬಂದ ಘಟನೆ ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಅಳಿಲುಘಟ್ಟದಲ್ಲಿ ಸಂಭವಿಸಿದೆ.

ನಿನ್ನೆ ರಾತ್ರಿ ೧೨ರಿಂದ ೨ ಗಂಟೆ ಸಮಯದಲ್ಲಿ ವೀರಭದ್ರೇಶ್ವರ ಬಡಾವಣೆಯಲ್ಲಿ ಭೂಕಂಪಿಸಿದ್ದು, ಐದಾರು ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಕಳೆದ ೮ ದಿನಗಳ ಹಿಂದೆ ಭೂ ವಿಜ್ಞಾನಿಗಳು ಅಳಿಲಘಟ್ಟದದಲ್ಲಿ ಭೂಕಂಪನದ ಕೇಂದ್ರವಿದ್ದು, ಭೂಕಂಪನವಾಗುವ ಸಾಧ್ಯತೆಯ ಬಗ್ಗೆ ತಿಳಿಸಿದ್ದರು. ಸದರಿ ಭೂಕಂಪನ ಅಲ್ಪಪ್ರಮಾಣವಾಗಿದ್ದು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದೂ ವಿವರಿಸಿದ್ದರು.

ಅದರಂತೆ ನಿನ್ನೆ ರಾತ್ರಿ ಭೂಕಂಪನವಾಗಿದ್ದು, ಬಡಾವಣೆಯಲ್ಲಿರುವ ಐದಾರು ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಇದರಿಂದ ಸ್ಥಳೀಯ ಜನತೆ ಆತಂಕಗೊಂಡು ಹೊರಗೋಡಿ ಬಂದಿದ್ದಾರೆ.

ಸುಮಾರು ವರ್ಷಗಳಿಂದ ಮಳೆಗಾಲ, ಬೇಸಿಗೆಕಾಲದಲ್ಲೂ ಸಹ ಯಾವುದೇ ಮನೆಗಳು ಬಿರುಕು ಬಿಟ್ಟಿಲ್ಲ. ಆದರೆ ಭೂಕಂಪನದಿಂದ ಮನೆಗಳು ಹಾನಿಗೀಡಾಗಿದ್ದು, ಭಯದ ನೆರಳಲ್ಲಿ ಬದುಕುವಂತಾಗಿದೆ. ಯಾವಾಗ ಮನೆಗಳು ಕುಸಿದು ಬೀಳುತ್ತದಯೇ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ಸರ್ಕಾರ ಕೂಡಲೇ ಭೂ ವಿಜ್ಞಾನಿಗಳನ್ನು ಕರೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಬಡಾವಣೆಯ ನಿವಾಸಿಗಳಿಗೆ ಪರ್‍ಯಾಯ ವ್ಯವಸ್ಥೆ ಮಾಡಿ ಸಹಕಾರ ನೀಡಬೇಕು ಎಂದು ಗ್ರಾಮದ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಸನ್ನಕುಮಾರ್, ಸಿದ್ದರಾಮಯ್ಯ, ನಾಗಮ್ಮ, ಗುರುರಾಜು ಮತ್ತು ಲಕ್ಷ್ಮಯ್ಯ ಎಂಬುವರ ಮನೆಗಳು ಹಾನಿಗೀಡಾಗಿದ್ದು, ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ದಂಡಾಧಿಕಾರಿ ಉಮೇಶ್ ಚಂದ್ರ ಎಲ್ಲಾ ಮನೆಗಳನ್ನು ಪರಿಶೀಲಿಸಿ, ಭೂಕಂಪನದ ಪರಿಣಾಮ ಮನೆಗಳು ಬಿರುಕುಬಿಟ್ಟಿರುವುದನ್ನು ಖಾತ್ರಿ ಪಡಿಸಿದ್ದಾರೆ. ಇದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತ ಪಡಿಸಿದ್ದು, ಮನೆಗಳನ್ನು ತೆರವುಗೊಳಿಸಿ, ಬೇರೆಡೆ ನೆಲೆಸುವಂತೆಯೂ ಸೂಚಿಸಿದ್ದಾರೆ. ಚೇಳೂರು ಪೊಲೀಸ್ ಠಾಣೆಯ ಪಿಎಸ್‌ಐ ಎಫ್.ಕೆ.ನದಾಫ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.

Write A Comment