ಕರ್ನಾಟಕ

ದರ್ಶನ್ ಹುಟ್ಟುಹಬ್ಬಕ್ಕೆ ಸಿನಿಮಾ ಇಲ್ಲ

Pinterest LinkedIn Tumblr

Darshan

ಸ್ಟಾರ್​ಗಳ ಬರ್ತ್​ಡೇ ಬಂತೆಂದರೆ, ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಇನ್ನು, ಹುಟ್ಟುಹಬ್ಬದಂದೇ ನೆಚ್ಚಿನ ನಟನ ಸಿನಿಮಾ ಬಿಡುಗಡೆ ಅಥವಾ ಸೆಟ್ಟೇರಿದರೆ; ಡಬಲ್ ಖುಷಿ. ಈ ಡಬಲ್ ಸಂಭ್ರಮವನ್ನು ಐದಾರು ವರ್ಷಗಳಿಂದ ನಿರಂತರವಾಗಿ ನೀಡುತ್ತ ಬರುತ್ತಿದ್ದಾರೆ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್, ಪ್ರತಿವರ್ಷ ಒಂದೊಂದು ಹೊಸ ಚಿತ್ರಗಳಿಗೆ ಚಾಲನೆ ಕೊಡುವ ಮೂಲಕ. ಆದರೆ, ಈ ವರ್ಷ ಆ ಪರಂಪರೆಯನ್ನು ಮುರಿಯುವ ಮನಸು ಮಾಡಿದ್ದಾರಂತೆ ಅವರು. ಅಂದರೆ, 2016 ಫೆ. 16ಕ್ಕೆ ದರ್ಶನ್ ಹೊಸ ಸಿನಿಮಾದ ಮುಹೂರ್ತವಿಲ್ಲ!

ಈಗಾಗಲೇ ಸುದ್ದಿಯಾಗಿದ್ದಂತೆ, ದರ್ಶನ್ ಹುಟ್ಟುಹಬ್ಬಕ್ಕೆ ‘ಚಕ್ರವರ್ತಿ’ ಸೆಟ್ಟೇರಬೇಕಿತ್ತು. ಈಗಿನ ಮಾಹಿತಿ ಪ್ರಕಾರ, ಚಿಂತನ್ ನಿರ್ದೇಶನದ ಈ ಚಿತ್ರ ಒಂದು ತಿಂಗಳು ತಡವಾಗಿ ಮುಹೂರ್ತ ಆಚರಿಸಿಕೊಳ್ಳಲಿದೆಯಂತೆ. ಕಾರಣವಿಷ್ಟೇ, ದರ್ಶನ್ ಜನುಮ ದಿನದಂದು ಸೆಟ್ಟೇರಿದ 2-3 ಚಿತ್ರಗಳು ಸಿಕ್ಕಾಪಟ್ಟೆ ವಿಳಂಬ ಧೋರಣೆ ಅನುಸರಿಸಿಬಿಟ್ಟವು. ಅದ್ಯಾಕೋ ಫೆ. 16 ಸರಿಹೊಂದುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಈ ವರ್ಷ ಹೊಸ ಚಿತ್ರ ಮುಹೂರ್ತಕ್ಕೆ ಬ್ರೇಕ್ ಬೀಳುತ್ತಿದೆಯಂತೆ. ಲೇಟ್ ಆದ ಆ ಎರಡ್ಮೂರು ಯಾವುದು? ‘ಗಜ’, ‘ಬುಲ್​ಬುಲ್’, ‘ಬೃಂದಾವನ’, ‘ಅಂಬರೀಶ’, ‘ಐರಾವತ’ ಮತ್ತು ‘ಜಗ್ಗುದಾದಾ’ ದರ್ಶನ್ ಹುಟ್ಟುಹಬ್ಬಕ್ಕೆ ಶುರುವಾದ ಸಿನಿಮಾಗಳು. ಇವುಗಳಲ್ಲಿ ತಡವಾಗಿ ಬಿಡುಗಡೆಗೊಂಡವು ಯಾವವು ಎಂಬುದು ಅವರ ಅಭಿಮಾನಿಗಳ ಅರಿವಿಗೆ!!

ಈ ವರ್ಷ ಮೂರು ಸಿನಿಮಾಗಳ ಮೂಲಕ ದರ್ಶನ ಅಭಿಮಾನಿಗಳಿಗೆ ದರ್ಶನ ಕೊಡಲಿದ್ದಾರೆ. ಬಹುವರ್ಷದ ಬ್ಯಾಲೆನ್ಸ್ ‘ವಿರಾಟ್’ ಮೊದಲ ಬಿಡುಗಡೆ. ಸದ್ಯ ಹಾಡೊಂದರ ಚಿತ್ರೀಕರಣ ಬಾಕಿ ಉಳಿಸಿಕೊಂಡಿರುವ ‘ವಿರಾಟ್’ಗೆ ಜ. 15, 16 ಮತ್ತು 17ರಂದು ಡೇಟ್ ಕೊಟ್ಟಿದ್ದಾರಂತೆ ದರ್ಶನ್. ಇದನ್ನು ಮುಗಿಸಿಕೊಂಡು ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರ ಬರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಇನ್ನು ಚಿತ್ರೀಕರಣ ಹಂತದಲ್ಲಿರುವ ‘ಜಗ್ಗುದಾದಾ’ ಮೇ ಕೊನೆ ಇಲ್ಲವೇ ಜೂನ್​ನಲ್ಲಿ ರಿಲೀಸ್. ಮಾರ್ಚ್​ಗೆ ಮುಹೂರ್ತ ಆಚರಿಸಿಕೊಳ್ಳಲಿರುವ ‘ಚಕ್ರವರ್ತಿ’ ಡಿಸೆಂಬರ್​ನಲ್ಲಿ ಮಿಸ್ ಇಲ್ಲವಂತೆ.

ಇನ್ನೊಂದು ವಿಷಯ, ಎಲ್ಲ ತಾರೆಗಳೂ ಹೊಸ ವರ್ಷ ಆಚರಣೆಗೆ ವಿದೇಶ/ ಹೊರರಾಜ್ಯ ಪ್ರವಾಸ ಹೋಗಿದ್ದರೆ ದರ್ಶನ್ ಅವರು ‘ಜಗ್ಗುದಾದಾ’ ಚಿತ್ರದ ಶೂಟಿಂಗ್​ನಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಪಾಲ್ಗೊಳ್ಳುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ!

Write A Comment