ಮೈಸೂರು: ನಗರದಲ್ಲಿ ಶನಿವಾರ ನಡೆದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಜನ್ಮಶತಮಾನೋತ್ಸವಕ್ಕೆ ಚಾಲನೆ ನೀಡಿ ತೆರಳುತ್ತಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರಿಗೆ ಅಡ್ಡಬಂದ ಯುವಕನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮೈಸೂರು ತಾಲ್ಲೂಕು ವರಕೋಡು ಗ್ರಾಮದ ಡಿಪ್ಲೊಮಾ ವಿದ್ಯಾರ್ಥಿ 19 ವರ್ಷದ ವಿನಯ್ ಎಂಬಾತನನ್ನು ಲಕ್ಷ್ಮಿಪುರಂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ‘ಪ್ರಧಾನಿಯವರ ಕಾರಿಗೆ ಅಡ್ಡಬಂದ ಯವಕನನ್ನು ವಿನಯ್ ಎಂದು ಗುರುತಿಸಲಾಗಿದೆ. ಆತ ಪ್ರಧಾನಿಯವರ ಅಭಿಮಾನಿಯಂತೆ.
ಪರಿಸರ ಕಾಳಜಿ ಇರುವ ಆತ ಗ್ರೀನ್ ಇಂಡಿಯಾ ಎಂಬಿತ್ಯಾದಿ ಯೋಜನೆ ಮಾಡಿದ್ದು, ಮೋದಿ ಅವರಿಗೆ ತೋರಿಸಲು ಮುಂದಾದೆ ಎಂದು ತಿಳಿಸಿದ್ದಾನೆ. ಆತನನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದೇವೆಯಷ್ಟೆ. ಬುದ್ಧಿವಾದ ಹೇಳಿದ್ದೇವೆ. ಆತನನ್ನು ಬಂಧಿಸಿಯೇ ಇಲ್ಲವಾದ್ದರಿಂದ ಬಿಡುಗಡೆ ಮಾಡುವ ಅಥವಾ ಪ್ರಕರಣ ದಾಖಲಿಸುವ ಪ್ರಶ್ನೆಯೇ ಇಲ್ಲ. ಘಟನೆ ಸಂಬಂಧ ಯಾವ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಂಡಿಲ್ಲ’ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದಲ್ಲಿ ಪಾಲ್ಗೊಂಡು ಲಲಿತಮಹಲ್ ಹೋಟೆಲಿನತ್ತ ತೆರಳುತ್ತಿದ್ದರು. ಮೈಸೂರು ವಿಶ್ವವಿದ್ಯಾಲಯ ಕ್ರಾಫರ್ಡ್ ಭವನದ ಬಳಿಯ ಕೌಟಿಲ್ಯ ವೃತ್ತದ ಬಳಿ ಈ ವ್ಯಕ್ತಿ ಪ್ರಧಾನಿಯವರ ಕಾರಿಗೆ ಅಡ್ಡ ಬಂದಿದ್ದ. ನಂತರ ಅವನನ್ನು ಪತ್ತೆ ಹಚ್ಚಿದ್ದ ಎಸ್ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಶನಿವಾರ ಲಕ್ಷ್ಮಿಪುರಂ ಠಾಣೆ ಪೊಲೀಸರು ಕೂಡ ವಿಚಾರಣೆ ನಡೆಸಿದ್ದಾರೆ.