ರಾಷ್ಟ್ರೀಯ

ತಮಿಳುನಾಡು ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿ ! ಜನವರಿ 1ರಿಂದಲೇ ಅನುಷ್ಠಾನಕ್ಕೆ ಬಂದ ಹೈಕೋರ್ಟ್ ನಿರ್ದೇಶನ

Pinterest LinkedIn Tumblr

dreecode

ಮದುರೆ (ಪಿಟಿಐ): ತಮಿಳುನಾಡಿನ ದೇವಾಲಯಗಳಿಗೆ ಭೇಟಿ ನೀಡುವ ಎಲ್ಲಾ ಭಕ್ತರು ಮತ್ತು ಪ್ರವಾಸಿಗರು ವಸ್ತ್ರಸಂಹಿತೆಯನ್ನು ಪಾಲಿಸಬೇಕಾಗಿದೆ. ಜನವರಿ 1ರಿಂದಲೇ ಅನ್ವಯವಾಗುವಂತೆ ಸರ್ಕಾರ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ. ಮದ್ರಾಸ್ ಹೈಕೋರ್ಟ್‌ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ.

ಪಳನಿ ದೇವಾಲಯ, ಮದುರೆ ಮೀನಾಕ್ಷಿ ದೇವಾಲಯ, ರಾಮೇಶ್ವರ ದೇವಾಲಯ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳ ಹೊರಗೆ ಈ ಬಗ್ಗೆ ಸೂಚನಾ ಫಲಕಗಳನ್ನು ಪ್ರದರ್ಶಿಸಲಾಗಿದೆ. ಪುರುಷರು ಮತ್ತು ಮಹಿಳೆಯರು ಯಾವ ಯಾವ ವಸ್ತ್ರಗಳನ್ನು ಧರಿಸಬೇಕು.

ದೇವಾಲಯ ಪ್ರವೇಶಿಸುವಾಗ ಮಕ್ಕಳು ಯಾವ ಬಟ್ಟೆಗಳನ್ನು ಧರಿಸಿರಬೇಕು ಎಂಬುದರ ಬಗ್ಗೆ ಸೂಚನಾ ಫಲಕಗಳಲ್ಲಿ ಮಾಹಿತಿ ನೀಡಲಾಗಿದೆ. ದೇವಾಲಯಗಳಿಗೆ ಭೇಟಿ ನೀಡುವ ವಸ್ತ್ರ ಸಂಹಿತೆ ವಿದೇಶಿ ಪ್ರವಾಸಿಗರಿಗೂ ಅನ್ವಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರದ ಈ ಕ್ರಮವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ.

ದೇವಾಲಯಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿ ಮಾಡುವಂತೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌ ವೈದ್ಯನಾಥನ್ ಅವರಿದ್ದ ಪೀಠ, ‘ದೇವಾಲಯಗಳಲ್ಲಿ ಇರುವಾಗ ಸಾರ್ವಜನಿಕವಾಗಿ ಸಭ್ಯವೆಂದು ಪರಿಗಣಿಸಲಾಗುವ ಬಟ್ಟೆಗಳನ್ನು ಧರಿಸಿರಬೇಕು’ ಎಂದು ಹೇಳಿತ್ತು.

ಮೇಲ್ಮನವಿಗೆ ಸರ್ಕಾರ ನಿರ್ಧಾರ
ವಸ್ತ್ರಸಂಹಿತೆ ಜಾರಿ ಮಾಡುವಂತೆ ನಿರ್ದೇಶನ ನೀಡಿರುವ ಮದ್ರಾಸ್‌ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ತಮಿಳುನಾಡು ದೇವಾಲಯ ಪ್ರವೇಶಾಧಿಕಾರ ಕಾಯ್ದೆ, 1947ರ ಪ್ರಕಾರ ರಾಜ್ಯದ ದೇವಾಲಯಗಳು ತಮ್ಮದೇ ಆದ ವಸ್ತ್ರ ಸಂಹಿತೆಯನ್ನು ಅಳವಡಿಸಿಕೊಳ್ಳಲು ಅವಕಾಶವಿದೆ. ಹಾಗಾಗಿ ಹೈಕೋರ್ಟ್‌ ಸಾರ್ವತ್ರಿಕ ವಸ್ತ್ರಸಂಹಿತೆಗೆ ನಿರ್ದೇಶನ ನೀಡಲು ಅವಕಾಶವಿಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿದೆ.

ರಾಜ್ಯದ ಕೆಲವು ದೇವಾಲಯಗಳಲ್ಲಿ ಪುರುಷರು ಅಂಗಿ ಧರಿಸುವಂತಿಲ್ಲ. ಹೈಕೋರ್ಟ್‌ನ ಈ ನಿರ್ದೇಶನದಿಂದ ಆ ದೇವಸ್ಥಾನಗಳ ಭಕ್ತರ ಭಾವನೆಗೆ ಧಕ್ಕೆಯಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

Write A Comment