ರಾಷ್ಟ್ರೀಯ

ಈಶಾನ್ಯ ರಾಜ್ಯಗಳಲ್ಲಿ 6.8 ರಷ್ಟು ತೀವ್ರತೆಯ ಭೂಕಂಪ, ಆರು ಸಾವು, ದರೆಗುರುಳಿದ ಮನೆಗಳು

Pinterest LinkedIn Tumblr

earthquake

ಇಂಪಾಲಾ(ಮಣಿಪುರ),ಜ.4: ಜನತೆ ಹೊಸ ವರ್ಷದ ಗುಂಗಿನಿಂದ ಹೊರಬರುವ ಮುನ್ನವೇ ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಇಂದು ಮುಂಜಾನೆ ಸಂಭವಿಸಿರುವ ಪ್ರಬಲ ಭೂಕಂಪದಲ್ಲಿ ಹಲವರು ಮೃತಪಟ್ಟು ಅನೇಕರು ಗಾಹಗೊಂಡಿರುವ ಘಟನೆ ನಡೆದಿದೆ. ಇದೇವೇಳೆ ನೆರೆಯ ಬಾಂಗ್ಲಾದೇಶದಲ್ಲೂ ಭೂಮಿ ಕಂಪಿಸಿದ್ದು, ಸಾವಿರಾರು ಜನ ಮನೆ ಬಿಟ್ಟು ರಸ್ತೆಗೆ ಓಡಿಬಂದಿದ್ದಾರೆ. ಸದ್ಯ ಸಾವು ನೋವಿನ ಬಗ್ಗೆ ವರಿದಯಾಗಿಲ್ಲ. ಬೆಳಗಿನಜಾವ 4.36ರ ವೇಳೆ ಎಲ್ಲರೂ ಸಿಹಿ ನಿದ್ರೆಯಲ್ಲಿದ್ದಾಗಲೇ 6.7ರಷ್ಟು ಪರಿಮಾಣದಲ್ಲಿ ಭೂಮಿ ಕಂಪಿಸಿದ್ದು, ಮಣಿಪುರ ರಾಜಧಾನಿ ಇಂಪಾಲದಲ್ಲಿ ಸುಮಾರು 10ಕ್ಕೂ ಹೆಚ್ಚು ಜನಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅನೇಕ ಕಟ್ಟಡಗಳು ನೆಲಕ್ಕುರುಳಿವೆ. ರಾಜಧಾನಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಕಂಪನದ ಮೂಲ ಬಿಂದು ಇಂಪಾಲದಿಂದ 35ಕಿ.ಮೀ. ದೂರದಲ್ಲಿನ ತಮೆನ್‌ಲಾಂಗ್ ಜಿಲ್ಲೆಯ ನೊನಿ ಎಂಬ ಗ್ರಾಮದಲ್ಲಿ ಕೇಂದ್ರಿತವಾಗಿದೆ ಎಂದು ಭೂಗರ್ಭತಜ್ಞರು ತಿಳಿಸಿದ್ದಾರೆ.

ಮಣಿಪುರ, ಅರುಣಾಚಲಪ್ರದೇಶ, ನಾಗಾಲ್ಯಾಂಡ್, ಅಸ್ಸಾಂ, ಬಿಹಾರ, ಪಶ್ಚಿಮಬಂಗಾಳ, ಜಾರ್ಖಂಡ್ ರಾಜ್ಯಗಳಲ್ಲಿ ಭೂಮಿ ಕಂಪಿಸಿದೆ. ಆದರೆ ಮಣಿಪುರ ಹೊರತಾಗಿ ಇತರ ರಾಜ್ಯಗಳಲ್ಲಿ ಸಾವು ನೋವು ಹಾನಿ ಸಂಭವಿಸಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ತಂಡಗಳು, ಅಗ್ನಿಶಾಮಕ ಸಿಬ್ಬಂದಿ, ವೈದ್ಯಕೀಯ ನೆರವಿನ ತಂಡಗಳು, ಆಂಬುಲೆನ್ಸ್‌ಗಳು ಇಂಪಾಲಕ್ಕೆ ತೆರಳಿದ್ದು, ರಕ್ಷಣಾ ಕಾರ್ಯ ಆರಂಭಿಸಿವೆ. ವಿದ್ಯುತ್ ಕಂಬಗಳು, ಮರಗಳು, ಕಟ್ಟಡಗಳು ಭೂಮಿಗುರುಳಿರುವುದರಿಂದ ಪರಿಹಾರ ಕಾರ್ಯಾಚರಣೆಗಳು ನಡೆಸುವುದಕ್ಕೆ ಅಡ್ಡಿಯಾಗಿದ್ದರೂ, ಕಾರ್ಯಾಚರಣೆಗಳು ತಮ್ಮ ಕೆಲಸ ಚುರುಕುಗೊಳಿಸಿವೆ ಎಂದು ಮುಖ್ಯ ಕಾರ್ಯದರ್ಶಿ ಸುರೇಶ್ ಬಾಬು ತಿಳಿಸಿದ್ದಾರೆ.

ಗೃಹ ಖಾತೆಗೆ ಮೋದಿ ಸೂಚನೆ:

ಪ್ರಧಾನಿ ನರೇಂದ್ರ ಮೋದಿ ಅವರು ಭೂಕಂಪದ ಸುದ್ದಿ ತಿಳಿಯುತ್ತಿದ್ದಂತೆಯೇ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಕರೆ ಮಾಡಿ ಭೂಕಂಪದ ಕುರಿತು ತೀವ್ರ ನಿಗಾ ವಹಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಮಣಿಪುರ ಸೇರಿದಂತೆ ಭೂಕಂಪದಿಂದ ಆತಂಕಕ್ಕೊಳಗಾಗಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಮಾಹಿತಿಗಳನ್ನು ಪಡೆದು ಪರಿಸ್ಥಿತಿ ಅವಲೋಕಿಸಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ. ಕಂಪನಕ್ಕೊಳಗಾದ ಎಲ್ಲಾ ರಾಜ್ಯಗಳ ಹಲವೆಡೆ ಅನೇಕ ಕಟ್ಟಡಗಳು ಬಿರುಕುಬಿಟ್ಟಿದ್ದು ಭಾಗಶಃ ಹಾನಿಗೊಳಗಾಗಿವೆ. ರಸ್ತೆಗಳೂ ಕೂಡ ಆಳವಾದ ಬಿರುಕುಗಳೊಂದಿಗೆ ಗೋಚರಿಸುತ್ತಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಭೀತಿ ಉಂಟುಮಾಡುವಂತಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಸಾವಿರಾರು ಜನ ಮನೆಗಳನ್ನು ಪ್ರವೇಶಿಸಲು ಹೆದರಿ ರಸ್ತೆಗಳಲ್ಲೇ ಆಶ್ರಯ ಪಡೆದಿದ್ದಾರೆ. ಬೆಳಗಿನ ಜಾವ ನಾನು ಮಲಗಿದ್ದಾಗ ಯಾರೋ ನನ್ನ ಅಲ್ಲಾಡಿಸಿ ಎಬ್ಬಿಸಿದಂತಾಯ್ತು, ಎದ್ದೆ. ಆದರೆ ಭೂಮಿ ನಡುಗಿದ್ದರಿಂದ ಕೆಳಗೆ ಬಿದ್ದೆ. ಆಮೇಲೆ ಇದು ಭೂಕಂಪನ ಎಂದು ತಿಳಿದು ಎಲ್ಲರನ್ನೂ ಎಬ್ಬಿಸಿಕೊಂಡು ಹೊರಗೋಡಿ ಬಂದೆ ಎಂದು ಜಾರ್ಖಂಡ್‌ನ ಜಮ್‌ಷೆಡ್‌ಪುರದ ಸುಧೀರ್ ಕುಮಾರ್ ಹೇಳುತ್ತಾರೆ.

ಮುಂಜಾನೆ 4.30ರ ವೇಳೆ ಭೂಮಿ ನಡುಗಿತು. ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದವು. ನೆಲದ ಮೇಲೆ ನಿಲ್ಲಲೂ ಸಾಧ್ಯವಾಗುವಂತಿರಲಿಲ್ಲ. ಪ್ರಾಣಭೀತಿಯಿಂದ ಎಲ್ಲರೂ ಹೊರಗೋಡಿ ಬಂದೆವು ಎಂದು ಇಂಪಾಲಾದ ಶಿವಚಂದ್ರಸಿಂಗ್ ತಮ್ಮ ಭಯ ಬಿಚ್ಚಿಟ್ಟಿದ್ದಾರೆ. ಆಯಾ ರಾಜ್ಯಗಳ ಚುನಾಯಿತ ಪ್ರತಿನಿಧಿಗಳು ಸ್ಥಳಕ್ಕೆ ಧಾವಿಸಿ ಜನತೆಗೆ ಧೈರ್ಯ ತುಂಬುತ್ತಿದ್ದಾರೆ. ಸಂತ್ರಸ್ತರಿಗೆ ಆಶ್ರಯ ಕಲ್ಪಿಸುವ ಕೆಲಸಗಳೂ ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ನಿಖರ ಮಾಹಿತಿಗಳಿಗಾಗಿ ಅಧಿಕಾರಿಗಳು ಸ್ಥಳಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ನನಗೂ ಅನುಭವವಾಯಿತು:

ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಅವರು ಎರಡು ದಿನಗಳ ಭೇಟಿಗಾಗಿ ನಿನ್ನೆ ಅಸ್ಸಾಂಗೆ ತೆರಳಿದ್ದು ರಾತ್ರಿ ಗುವಾಹಟಿಯಲ್ಲೇ ವಾಸ್ತವವಿದ್ದರು. ಹಾಗಾಗಿ ರಾತ್ರಿ ನನಗೂ ಭೂಕಂಪನದ ಅನುಭವವಾಯಿತು ಎಂದು ಹೇಳಿದ್ದಾರೆ. ಈಗಾಗಲೇ ಮಣಿಪುರ ಸೇರಿದಂತೆ ಭೂಕಂಪಕ್ಕೆ ಗುರಿಯಾದ ವಿವಿಧ ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು (ಎನ್‌ಡಿಆರ್‌ಎಫ್) ರವಾನಿಸಲಾಗಿದ್ದು, ಅಲ್ಲಿನ ಪರಿಸ್ಥಿತಿಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಕ್ಷಣ-ಕ್ಷಣದ ಮಾಹಿತಿ ಪಡೆಯಲಾಗುತ್ತಿದೆ. ಇನ್ನೂ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ ಎಂದು ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. ಪ್ರಬಲ ಭೂಕಂಪದ ನಂತರ ಬೆಳಗ್ಗೆ 8 ಗಂಟೆ ಸುಮಾರಿಗೆ ಮತ್ತೆ ಅಲ್ಲಲ್ಲಿ ಕಡಿಮೆ ತೀವ್ರತೆಯ ಕಂಪನ ಉಂಟಾಗಿದ್ದು ಜನ ಭಾರೀ ಆತಂಕಕ್ಕೊಳಗಾಗಿದ್ದಾರೆ.

ಬಾಂಗ್ಲಾದಲ್ಲೂ ಕಂಪನ:

ನೆರೆಯ ಬಾಂಗ್ಲಾ ದೇಶದಲ್ಲೂ ಇದೇ ವೇಳೆ 6.7ರಷ್ಟು ತೀವ್ರತೆಯ ಭೂಕಂಪನ ಉಂಟಾಗಿದ್ದು, ಅನೇಕ ಮನೆಗಳು ಬಿರುಕುಬಿಟ್ಟಿವೆ. ಆದರೆ ಯಾವುದೇ ಸಾವು-ನೋವಿನ ಬಗ್ಗೆ ಇನ್ನೂ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕಂಪನಕ್ಕೂ ಕೂಡ ಮಣಿಪುರ ರಾಜ್ಯದ ತಮ್‌ಲೆಂಗ್‌ಗಾಂಗ್ ಜಿಲ್ಲೆಯ ನೋನಿ ಗ್ರಾಮದಲ್ಲೇ ಕಂಪನದ ಮೂಲ ಕೇಂದ್ರಿತವಾಗಿತ್ತು ಎಂದು ಅಮೆರಿಕದ ಭೂಗರ್ಭ ವಿಜ್ಞಾನ ಪರಿವೀಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Write A Comment