ಕರ್ನಾಟಕ

ಹುತಾತ್ಮ ಕರ್ನಲ್ ನಿರಂಜನ್ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

Pinterest LinkedIn Tumblr

nnnn

ಬೆಂಗಳೂರು: ವೀರಮರಣವನ್ನಪ್ಪಿದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಅವರಿಗೆ ಅಶೃತರ್ಪಣದೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪಂಜಾಬ್‌ನ ಪಠಾಣ್‌ಕೋಟ್ ವಾಯು ನೆಲೆಯ ಮೇಲೆ ದಾಳಿ ನಡೆಸಿದ ಉಗ್ರರನ್ನು ಬಲಿ ಹಾಕುವ ಕಾರ್ಯಾಚರಣೆ ವೇಳೆ ಹುತಾತ್ಮರಾದ ವೀರಯೋಧ ಎನ್‌ಎಸ್‌ಜಿ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಅವರ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದುಬಂದಿತ್ತು.

ಬೆಂಗಳೂರಿನ ಬಿಇಎಲ್ ಮೈದಾನದಲ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಡಲಾಗಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕರು, ಅವರ ಬಂಧುಗಳು, ಗಣ್ಯರು, ಸಹಪಾಠಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಆಗಮಿಸಿ ಅಂತಿಮ ದರ್ಶನ ಪಡೆದು, ಅಂತಿಮ ಸೆಲ್ಯೂಟ್ ಸಲ್ಲಿಸಿದರು.

ಬಾಂಬ್ ನಿಷ್ಕ್ರಿಯ ದಳದ ಲೆಫ್ಟಿನೆಂಟ್ ಕರ್ನಲ್ ಬೆಂಗಳೂರಿನ ನಿರಂಜನ್ ಕುಮಾರ್ ಅವರು ಗ್ರೆನೇಡ್ ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ತೀವ್ರವಾಗಿ ಗಾಯಗೊಂಡಿದ್ದರು.

ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ನಿನ್ನೆ ಅವರ ಮೃತ ದೇಹವನ್ನು ಬೆಂಗಳೂರಿಗೆ ತರಲಾಗಿತ್ತು. ನಂತರ ದೊಡ್ಡಬೊಮ್ಮಸಂದ್ರದ ಅವರ ನಿವಾಸಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ದು ನ್ಯೂ ಬಿಇಎಲ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ನಾಗರಿಕರು ಆಗಮಿಸಿ ವೀರಯೋಧನ ಅಂತಿಮ ದರ್ಶನ ಪಡೆದರು. ಶಾಲಾ-ಕಾಲೇಜು ವಿದ್ಯಾರ್ಥಿಗಳೂ ಕೂಡ ಅಪಾರ ಸಂಖ್ಯೆಯಲ್ಲಿ ಬಂದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದ ವೀರಪ್ಪಮೊಯ್ಲಿ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಹುತಾತ್ಮ ಯೋಧನ ದರ್ಶನ ಪಡೆದರು.

ಕಳೆದ 2008ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದ ಎನ್‌ಎಸ್‌ಜಿ ಕಮಾಂಡೋ ಉನ್ನೀ ಕೃಷ್ಣನ್ ಅವರ ನೆನಪು ಈ ಸಂದರ್ಭದಲ್ಲಿ ಮರುಕಳಿಸಿತು. 2008ರಲ್ಲಿ ವೀರಮರಣವನ್ನಪ್ಪಿದ ಉನ್ನೀಕೃಷ್ಣನ್ ಹಾಗೂ ನಿನ್ನೆ ನಿಧನರಾದ ನಿರಂಜನ್ ಇಬ್ಬರೂ ಕೂಡ ಕೇರಳ ಮೂಲದವರು. ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಮೃತ ನಿರಂಜನ್ ಅವರ ಅಂತಿಮ ಸಂಸ್ಕಾರವನ್ನು ಅವರ ಹುಟ್ಟೂರಾದ ಕೇರಳದ ಪಾಲ್ಕಾಡ್‌ನಲ್ಲಿ ನಡೆಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಇಂದು ಮಧ್ಯಾಹ್ನ ಪಾರ್ಥಿವ ಶರೀರವನ್ನು ಪಾಲ್ಕಾಡ್‌ಗೆ ಕೊಂಡೊಯ್ದು ಅಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು.

Write A Comment